ಬೆಲೆ ಏರಿಕೆ| ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನಾ ಅಭಿಯಾನ: ನಾಝಿಯಾ ನಸ್ರುಲ್ಲ

ಉಡುಪಿ, ಎ.24: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಯ ಮೇಲೆ ಮಿತಿ ಮೀರಿದ ಆರ್ಥಿಕ ಹೊರೆಯನ್ನು ಹೇರುತ್ತಿ ರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕ್ರಮದ ವಿರುದ್ಧ ಪ್ರತಿಭಟನಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್‌ನ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷೆ ನಾಝಿಯಾ ನಸ್ರುಲ್ಲ ಹೇಳಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಕೇಂದ್ರ ಸರಕಾರ ಅಡುಗೆ ಅನಿಲ ದರವನ್ನು ಹೆಚ್ಚಿಸಿದ್ದರೆ, ಇತ್ತ ರಾಜ್ಯ ಸರಕಾರ ವಿದ್ಯುತ್, ಹಾಲು, ನೀರು, ಬಸ್ ದರಗಳನ್ನು ಏರಿಸಿ ರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರೊಂದಿಗೆ ಜನಸ್ನೇಹಿಯಾಗಿದ್ದ ನಮ್ಮ ಮೆಟ್ರೋರೈಲಿನ ದರ ಏರಿಕೆಯಿಂದ ಜನಸಾಮಾನ್ಯರು ಮತ್ತೆ ತಮ್ಮ ವಾಹನಗಳತ್ತ ಮುಖಮಾಡುವಂತಾಗಿದೆ ಎಂದವರು ದೂರಿದರು.
ಅಚ್ಛೇದಿನ್ ಹೆಸರಿನಲ್ಲಿ ಕೇಂದ್ರ ಸರಕಾರ ಹಾಗೂ ಗ್ಯಾರಂಟಿ ಯೋಜನೆಗಳ ಮೂಲಕ ತಮ್ಮದು ಜನಪರ ಸರಕಾರ ಎನ್ನುವ ರಾಜ್ಯಸರಕಾರ ಎರಡೂ ಸೇರಿಕೊಂಡು ಬೆಳೆ ಏರಿಕೆಯ ಮೂಲಕ ಜನರನ್ನು ಲೂಟಿ ಮಾಡುತ್ತಿವೆ. ಇದರೊಂದಿಗೆ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳು ನಿರಂತರ ವಾಗಿ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ನಡೆಸುತ್ತಿವೆ ಎಂದು ಅವರು ಆರೋಪಿಸಿದರು.
ಹೀಗಾಗಿ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ಎಡವಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ವಿರುದ್ಧ ತಮ್ಮ ಸಂಘಟನೆ ಈಗಾಗಲೇ ಪ್ರತಿಭಟನಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲೂ ಎ.26ರಂದು ಸಂಜೆ 4ಗಂಟೆಗೆ ಕಾಪು ಬಸ್‌ನಿಲ್ದಾಣದಲ್ಲಿ ಹಾಗೂ ಎ.28ರ ಸೋಮವಾರ ಬೆಳಗ್ಗೆ 11ಗಂಟೆಗೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ ಎಂದು ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ನಸೀಮಾ, ಸಮಿತಿಯ ಸದಸ್ಯರಾದ ನಸೀಮ್ ಫಾತಿಮಾ, ಜೋಹಾರ, ರಹಮತುನ್ನಿಸಾ ಉಪಸ್ಥಿತರಿದ್ದರು.