ಶಿಕ್ಷಣದೊಂದಿಗೆ ತುಳು ಸಂಸ್ಕೃತಿ, ಸಂಸ್ಕಾರ ಮೈಗೂಡಿಸಿಕೊಳ್ಳಿ: ತುಳು ಐಸಿರಿಯಲ್ಲಿ ಜಯಕರ ಶೆಟ್ಟಿ ಇಂದ್ರಾಳಿ

Update: 2025-04-24 21:50 IST
ಶಿಕ್ಷಣದೊಂದಿಗೆ ತುಳು ಸಂಸ್ಕೃತಿ, ಸಂಸ್ಕಾರ ಮೈಗೂಡಿಸಿಕೊಳ್ಳಿ: ತುಳು ಐಸಿರಿಯಲ್ಲಿ ಜಯಕರ ಶೆಟ್ಟಿ ಇಂದ್ರಾಳಿ
  • whatsapp icon

ಉಡುಪಿ, ಎ.24: ವಿದ್ಯಾರ್ಥಿಗಳು ಶಿಕ್ಷಣಕ್ಕೆ, ಜ್ಞಾನವರ್ಧನೆಗೆ ಒತ್ತು ನೀಡಬೇಕಾಗಿರುವುದು ಸಹಜ. ಇದರೊಂದಿಗೆ ತುಳು ಭಾಷೆ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಲು ಸಹ ಆದ್ಯತೆ ನೀಡುವಂತೆ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಕರೆ ನೀಡಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಯೋಜಿಸಲಾಗುವ ‘ತುಳು ಐಸಿರಿ-2025’ರಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಅವರು ಮಾತನಾಡುತಿದ್ದರು.

ಯುವಜನತೆ ಹೆಚ್ಚೆಚ್ಚು ತುಳುವನ್ನು ಬಳಸುವ ಮೂಲಕ ‘ಪೊರ್ಲುದ’ ತುಳು ಭಾಷೆಯನ್ನು ಉಳಿಸಲು ಸಾಧ್ಯ. ಇಂದು ಒಂದನೇ ತರಗತಿಯಿಂದ ಪದವಿವರೆಗೆ ತುಳು ಭಾಷೆ ಕಲಿಯಲು ಸಹ ಅವಕಾಶವಿದೆ. ತುಳುವರು ಇದನ್ನು ಬಳಸಿಕೊಳ್ಳಬೇಕು ಎಂದರು.

ಜೀವನದಲ್ಲಿ ಶಿಕ್ಷಣದೊಂದಿಗೆ ಜ್ಞಾನವೂ ಮುಖ್ಯ. ಇವುಗಳೊಂದಿಗೆ ತುಳು ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯೂ ಇಂದಿನ ಯುವ ತಲೆಮಾರಿನ ಮೇಲಿದೆ. ಎಲ್ಲರೂ ಸೇರಿ ತುಳುವಿನ ಕಂಪನ್ನು ಜಗತ್ತಿನಾದ್ಯಂತ ಪಸರಿಸಬೇಕು ಎಂದು ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಕಾಲೇಜಿನ ಮುದ್ದಣಮಂಟಪದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ತುಳು ಐಸಿರಿಯನ್ನು ಉದ್ಘಾಟಿಸಿದ ತುಳು ಚಲನಚಿತ್ರ ನಟ ಹಾಗೂ ತುಳು ರಂಗಭೂಮಿ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ತುಳುವನ್ನು ಜೀವನದ ಭಾಗವಾಗಿಸಿಕೊಳ್ಳುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

ತುಳುವಿಗೆ ಜಗತ್ತಿನಾದ್ಯಂತ ವಿಶೇಷ ಗೌರವವಿದೆ. ಹೀಗಾಗಿ ವಿದ್ಯೆಯೊಂದಿಗೆ ನೀವು ತುಳುವನ್ನು ಮರೆಯದೇ ಅದನ್ನು ನಿಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿರುವಂತೆ ನೋಡಿಕೊಳ್ಳಬೇಕು. ಈ ಮೂಲಕ ತುಳುಭಾಷೆಯ ಬೆಳವಣಿಗೆಯಲ್ಲಿ ನಿಮ್ಮ ಪಾಲಿನ ಕೊಡುಗೆಯೂ ಇರುವಂತಾಗಬೇಕು ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಡಾ.ವಿಶ್ವನಾಥ ಪೈ ಎಂ., ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ ನಾಯ್ಕ್, ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾಲತಿ ದೇವಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ಅರುಣ್‌ಕುಮಾರ್ ಬಿ. ಸ್ವಾಗತಿಸಿದರೆ, ತುಳು ಸಂಘದ ಸಂಚಾಲಕ ಡಾ.ಪುತ್ತಿ ವಸಂತಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾದ್ಯಾಪಕ ಸುಚರಿತ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News