ಪರ್ಕಳ ರಸ್ತೆಯುದ್ದಕ್ಕೂ ರೆಡಿಮಿಕ್ಸ್ ವಾಹನಗಳ ಅವಾಂತರ: ಸ್ಥಳೀಯರ ಆರೋಪ

ಉಡುಪಿ, ಎ.26: ಪರ್ಕಳದ ಹೃದಯ ಭಾಗದಲ್ಲಿ ಇದೀಗ ರೆಡಿಮಿಕ್ಸ್ ವಾಹನಗಳ ಸಂಚಾರದಿಂದ ಹೊಸ ಕಾಂಕ್ರೀಟ್ ರಸ್ತೆಯಲ್ಲಿ ಜಲ್ಲಿ ಸಿಮೆಂಟ್ ಮಿಶ್ರಣವನ್ನು ಚೆಲ್ಲಲಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಣಿಪಾಲದಲ್ಲಿ ಹೊರಡುವ ರೆಡಿಮಿಕ್ಸರ್ ಘಟಕದ ವಾಹನದಲ್ಲಿ ತುಂಬಿಸಿಕೊಂಡು ಬರುತ್ತಿದ್ದ ಜಲ್ಲಿ ಸಿಮೆಂಟ್ ಮಿಶ್ರಣವನ್ನು ರಸ್ತೆಯ ಎಲ್ಲೆಂದರಲ್ಲಿ ಚೆಲ್ಲುತ್ತಾ ಸಾಗುತ್ತಿದೆ. ರೆಡಿಮಿಕ್ಸ್ ಸಂಸ್ಥೆಗೆ ಎಚ್ಚರಿಕೆಯ ಸಲಹೆಗಳನ್ನು ಜಿಲ್ಲಾಡಳಿತ ನೀಡಿದರೂ ಮತ್ತೆ ಅದೇ ರೀತಿ ಮುಂದುವರೆಸಿದೆ. ಈ ಬಗ್ಗೆ ನಗರಸಭೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ವಾಹನದಲ್ಲಿ ಮಿತಿಗಿಂತ ಹೆಚ್ಚು ಜಲ್ಲಿ ಸಿಮೆಂಟ್ ಮಿಶ್ರಣ ತುಂಬಿಸಿಕೊಂಡು ಸಾಗುತ್ತಿರುವುದೇ ಈ ರಸ್ತೆಯಲ್ಲಿ ಚೆಲ್ಲಲು ಕಾರಣವಾಗಿದೆ.
ಇದರಿಂದ ಈ ವಾಹನಗಳ ಹಿಂದಿನಿಂದ ಬರುವ ವಾಹನಗಳು ಹಾಗೂ ಬೈಕ್ ಸವಾರರ ಮೇಲೂ ಬೀಳುತ್ತಿದೆ. ಕೆಳಪರ್ಕದಲ್ಲಿ ರೆಡಿ ಮಿಕ್ಸ್ ರಸ್ತೆ ಮೇಲೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಜಲ್ಲಿ ಮಿಶ್ರಣ, ಜಲ್ಲಿ ಪುಡಿಯ ಧೂಳು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಆದುದರಿಂದ ಸಂಬಂಧ ಪಟ್ಟ ವಾಹನಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪರ್ಕಳದ ನಾಗರಿಕರು ಒತ್ತಾಯಿಸಿದ್ದಾರೆ.