ಕಾಲಮಿತಿಯೊಳಗೆ ಬ್ರಹ್ಮಾವರ ಪ್ಲೈಓವರ್ ರಚಿಸಲು ಹೋರಾಟ ಸಮಿತಿ ಆಗ್ರಹ
ಬ್ರಹ್ಮಾವರ, ಎ.26: ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಹಿನ್ನೆಲೆಯಲ್ಲಿ ತುರ್ತಾಗಿ ಸರ್ವಿಸ್ ರಸ್ತೆ ಯನ್ನು ಭದ್ರಗಿರಿಯಿಂದ ಮಾಬುಕಳದವರೆಗೆ ಹೆದ್ದಾರಿಯ ಎಡ ಮತ್ತು ಬಲ ಭಾಗದಲ್ಲಿ ರಚಿಸಬೇಕು. ಅದೇ ರೀತಿ ಕಾಲಮಿತಿಯೊಳಗೆ ಬ್ರಹ್ಮಾವರ ಪ್ಲೈಓವರ್ ರಚಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗು ವುದು ಎಂದು ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.
2013ರಿಂದಲೇ ಸಂಬಂಧ ಪಟ್ಟವರಿಗೆ ಮನವಿಗಳನ್ನು ನೀಡುತ್ತ ಬಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಹೆದ್ದಾರಿ ಇಲಾಖೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಯಾಕೆಂದರೆ ಕಳೆದ 5 ವರ್ಷಗಳಿಂದ ಮಹೇಶ್ ಹಾಸ್ಪಿಟಲ್ ಜಂಕ್ಷನ್, ಬಸ್ ನಿಲ್ದಾಣ ಮತ್ತು ಅಕಾಶವಾಣಿ ಜಂಕ್ಷನ್‌ಗಳಲ್ಲಿ 50ಕ್ಕೂ ಅಧಿಕ ಅಪಘಾತಗಳಾಗಿವೆ.
ಎ.9ರಿಂದ 90 ದಿವಸಗಳ ಕಾಲಮಿತಿಯಲ್ಲಿ ಈ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಸಂಬಂಧಪಟ್ಟ ವರಿಗೆ ಮನವಿಗಳನ್ನು ನೀಡಲಿದ್ದೇವೆ. ಬೇಡಿಕೆ ಈಡೇರುವ ಸೂಚನೆ ಕಾಣದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಬಗ್ಗೆ ಸೂಕ್ತ ತೀರ್ಮಾನ ಕೂಡಲೇ ಕೈಗೊಳ್ಳಲಾಗುವುದು. ನಾವೂ ಕೂಡಾ ಹೆದ್ದಾರಿ ಇಲಾಖೆಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈಗ 90 ಕೋಟಿ ವೆಚ್ಚದಲ್ಲಿ ಭದ್ರಗಿರಿಯಿಂದ ಮಾಬುಕಳದ ವರೆಗೆ ಸರ್ವಿಸ್ ರಸ್ತೆಗೆ ಟೆಂಡರ್ ಆಗಿದೆ ಎಂಬ ಮಾಹಿತಿ ದೊರೆತಿದೆ. ಸರ್ವಿಸ್ ರಸ್ತೆ ಮತ್ತು ಫ್ಲೈಓವರ್ ರಚನೆಯ ಶಾಶ್ವತ ಕಾಮಗಾರಿಯ ಕುರಿತು ಅಧಿಕೃತ ಆದೇಶದೊಂದಿಗೆ ಸಂಸದರು, ಜಿಲ್ಲಾಧಿಕಾರಿಯವರು ಅಥವಾ ಹೆದ್ದಾರಿ ಇಲಾಖೆಯವರು ಈ ತನಕ ಹೇಳಿಕೆ ನೀಡದೇ ಇರುವುದು ಬೇಸರದ ಸಂಗತಿ ಮತ್ತು ಅವರುಗಳು ಹೇಳಿಕೆಯನ್ನು ನೀಡಿದಲ್ಲಿ ಮಾತ್ರ ಬ್ರಹ್ಮಾವರದ ನಾಗರಿಕರಿಗೆ ಭರವಸೆ ಮೂಡುತ್ತದೆ. ಇಲ್ಲದಿದ್ದರೆ ನಾವು ಈ ಹಿಂದೆ ಘೋಷಿಸಿ ದಂತೆ ನಮ್ಮ ಹೋರಾಟ ನಡೆಯಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.