ಮಾಹೆಯಿಂದ ಗಂಭೀರ ಕಾಯಿಲೆಗಳಿಗೆ ಪ್ಯಾಲಿಯೇಟಿವ್ ಕೇರ್ ಸೆಂಟರ್

ಉಡುಪಿ, ಎ.26: ಜೀವನದ ಸಂಧ್ಯಾಕಾಲದಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೊನೆಯ ದಿನಗಳಲ್ಲಿ ಬದುಕನ್ನು ಸಹನೀಯ ಗೊಳಿಸುವ ಉದ್ದೇಶದ ಮಣಿಪಾಲ್ ಹಾಸ್ಪೈಸ್ ಮತ್ತು ರಿಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ)ನ್ನು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಹಾವಂಜೆಯಲ್ಲಿ ನಿರ್ಮಿಸಿದ್ದು, ಈ ಆಸ್ಪತ್ರೆಯನ್ನು ಆಂಧ್ರ ಪ್ರದೇಶದ ರಾಜ್ಯಪಾಲರಾದ, ನಿವೃತ್ತ ಸುಪ್ರೀಂ ಕೋರ್ಟಿನ ನ್ಯಾಯದೀಶ ನ್ಯಾ.ಎಸ್.ಅಬ್ದುರ್ ನಝೀರ್ ಅವರು ಎ.30ರಂದು ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಯುನಿವರ್ಸಿಟಿ ಬಿಲ್ಡಿಂಗ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ನಾಲ್ಕೂವರೆ ಕಿ.ಮೀ. ದೂರ, ರಾಷ್ಟ್ರೀಯ ಹೆದ್ದಾರಿಯಿಂದ ನಾಲ್ಕು ಕಿ.ಮೀ. ದೂರದ ಸ್ವರ್ಣಾನದಿ ದಡದ ಪ್ರಶಾಂತ ಪರಿಸರದಲ್ಲಿ ಈ ಅತ್ಯಾಧುನಿಕ ಸೌಲಭ್ಯ ಗಳಿರುವ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದರು.
ಮಾಹೆಯ ಸಮಾಜಮುಖಿ ಯೋಜನೆಗಳಲ್ಲಿ ಒಂದಾದ ಎಂಎಚ್‌ಆರ್‌ಸಿ ಯಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಚಿಕಿತ್ಸಾ ಹಂತವನ್ನು ಮೀರಿದ ರೋಗಿಗಳು ತಮ್ಮ ಉಳಿದ ದಿನಗಳನ್ನು ಸಹನೀಯ ವಾಗಿ ಕಳೆಯಲು ಇಲ್ಲಿ ಎಲ್ಲಾ ರೀತಿ ಸೌಲಭ್ಯಗಳು ಲಭ್ಯವಿರಲಿವೆ. ಗಂಭೀರ ಕಾಯಿಲೆಯ ರೋಗಿ ಗಳು ಹಾಗೂ ಅವರ ಕುಟುಂಬದ ಸದಸ್ಯರು ಈ ಕೇಂದ್ರದಲ್ಲಿ ಉಳಿಯಲು ಅವಕಾಶ ಕಲ್ಪಿಸಲಾಗುವುದು ಎಂದರು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಕಸ್ತೂರ್ಬಾ ಆಸ್ಪತ್ಪೆ, ಇಂಡಿಯನ್ ಅಸೋಸಿಯೇಷನ್ ಆಫ್ ಪ್ಯಾಲಿಯೇಟಿವ್ ಕೇರ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಕೇಂದ್ರ ಕಾರ್ಯನಿರ್ವಹಿ ಸುವಂತೆ ರೂಪಿಸಲಾಗಿದೆ. ತರಬೇತಿ ಪಡೆದ ವೈದ್ಯರು, ನರ್ಸ್‌ಗಳು, ಮನ:ಶಾಸ್ತ್ರಜ್ಞರು, ಸಮಾಜ ಕಾರ್ಯಕರ್ತರು ಹಾಗೂ ಎನ್‌ಜಿಓಗಳು ಇಲ್ಲಿ ಲಭ್ಯವಿರುತ್ತಾರೆ ಎಂದು ಮಾಹೆಯ ಕುಲತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ವಿವರಿಸಿದರು.
ನದಿ ದಡದ ಅತ್ಯಂತ ಶಾಂತ ಪರಿಸರದಲ್ಲಿ 12 ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಸದ್ಯ 35 ರೋಗಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಅದನ್ನು 100 ಹಾಸಿಗೆಗಳಿಗೆ ವಿಸ್ತರಿಸಲಾಗುತ್ತದೆ. ಭಾರತದಲ್ಲಿ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಸರಕಾರವೇ ನಡೆಸುವ ಹಾಗೂ ಬೆಂಗಳೂರಿನ ಕರುಣಾಶ್ರಯ ಎಂಬ ಖಾಸಗಿ ಪ್ಯಾಲಿಯೇಟಿವ್ ಕೇರ್ ಸೆಂಟರ್‌ಗಳನ್ನು ಹೊರತು ಪಡಿಸಿದರೆ ಮಣಿಪಾಲದ ದೇಶದ ಮೂರನೇ ಹಾಗೂ ವಿವಿಯೊಂದು ನಡೆಸುವ ಮೊದಲ ಕೇಂದ್ರ ಇದಾಗಿದೆ ಎಂದು ಉಪಶಾಮಕ ಔಷಧಿ ಹಾಗೂ ಸರ್ಪೋಟೀವ್ ಕೇರ್ ವಿಭಾಗದ ಮುಖ್ಯಸ್ಥ ಡಾ.ನವೀನ್ ಸಾಲಿನ್ಸ್ ತಿಳಿಸಿದರು.
ಎ.30ರ ಬುದವಾರ ಪೂರ್ವಾಹ್ನ 11:15ಕ್ಕೆ ನ್ಯಾಯಮೂರ್ತಿ ಅಬ್ದುಲ್ ನಝೀರ್ ಅವರು ಎಂಎಚ್‌ಆರ್‌ಸಿ ಯನ್ನು ಉದ್ಘಾಟಿಸಲಿದ್ದಾರೆ. ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಆರ್.ಪೈ ಹಾಗೂ ಟ್ರಸ್ಟಿ ವಸಂತಿ ಆರ್ ಪೈ ಉಪಸ್ಥಿತರಿರುವರು ಎಂದು ಡಾ.ಬಲ್ಲಾಳ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ಪ್ರೊ ವೈಸ್ ಚಾನ್ಸಲರ್‌ಗಳಾದ ಡಾ.ಶರತ್ ಕೆ.ರಾವ್, ಡಾ.ನಾರಾಯಣ ಸಭಾಹಿತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರವಿರಾಜ ಎನ್.ಎಸ್., ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಎಂಎಚ್‌ಆರ್‌ಸಿ ನಿರ್ದೇಶಕಿ ಡಾ.ಸೀಮಾ ರಾಜೇಶ್ ರಾವ್ ಉಪಸ್ಥಿತರಿದ್ದರು.