ಪಂಚಾಯತ್ ರಾಜ್ ಕಾಯ್ದೆ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ವಿಫಲ: ಟಿ.ಆರ್.ರಘುನಂದನ್

Update: 2025-04-27 15:49 IST
ಪಂಚಾಯತ್ ರಾಜ್ ಕಾಯ್ದೆ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ವಿಫಲ: ಟಿ.ಆರ್.ರಘುನಂದನ್
  • whatsapp icon

ಕುಂದಾಪುರ, ಎ.27: ದೇಶದ ಅತೀ ಮುಖ್ಯ ಸುಧಾರಣೆಗೆ ಗ್ರಾಪಂ ವಹಿಸುವ ಪಾತ್ರ ದೊಡ್ಡದು. ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ಕಾಯ್ದೆ ಅತ್ಯಂತ ಕ್ರಾಂತಿಕಾರಿಯಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ನಾವು ವಿಫಲರಾಗಿದ್ದೇವೆ. ಇಲ್ಲಿ ಕಾನೂನಿಗಿಂತ ಸುತ್ತೋಲೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಪಂಚಾಯತ್ ನಮ್ಮ ಏಜೆಂಟ್ ಎಂಬ ಭಾವನೆಯಿಂದ ಅಧಿಕಾರಿಗಳನ್ನು ಹೊರತರಲು ಕಾನೂನು ಅರಿವು ಅತೀ ಅಗತ್ಯವಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಕೇಂದ್ರ ಪಂಚಾಯತ್ ರಾಜ್ ಇಲಾಖೆಯ ವಿಶ್ರಾಂತ ಕಾರ್ಯದರ್ಶಿ ಟಿ.ಆರ್.ರಘುನಂದನ್ ಹೇಳಿದ್ದಾರೆ.

ಜನಪ್ರತಿನಿಧಿ ಪತ್ರಿಕೆ ಕುಂದಾಪುರ, ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂಸ್ಥೆಗಳ ಸಹಯೋಗದಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿಯ ಬಂಟರ ಯಾನೆ ನಾಡವರ ಸಂಘದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ರವಿವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಗತಿಸ್ಥಿತಿ ಚಿಂತನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಬಡತನ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಪಂಚಾಯತ್ರಾಜ್ ವ್ಯವಸ್ಥೆಯಡಿ ಜನರಿಗೆ ಅಧಿಕಾರ ನೀಡುವ ಸಲುವಾಗಿ ಕಾಯ್ದೆ ಜಾರಿಗೆ ಬಂದಿತು. ವ್ಯವಸ್ಥೆ ಬದಲಾವಣೆಗಾಗಿ ವಿಕೇಂದ್ರೀಕರಣ ಮಾಡಲಾಯಿತು. ಆದರೆ 140 ಕೋಟಿ ಜನರಿಗಿರುವ ಸಂಸದರು, ಶಾಸಕರ ಸಂಖ್ಯೆ ನೋಡಿದರೆ ಪ್ರಜಾಪ್ರಭುತ್ವ ಇನ್ನೂ ಆಳಗೊಳಿಸುವ ಅಗತ್ಯತೆಯಿದೆ. ಅಧಿಕಾರಿ ವರ್ಗ ವಿಕೇಂದ್ರಿಕರಣವನ್ನು ಎಲ್ಲೆಡೆ ಎದುರಿಸುತ್ತಾರೆ. ಅವರು ವಿಕೇಂದ್ರಿಕರಣದ ಪರವಾಗಿ ಇಲ್ಲ ಎಂದು ಅವರು ತಿಳಿಸಿದರು.ಜಿ.ಪಂ., ತಾ.ಪಂ.ಗೆ ನೀಡುವ ಶೇ.80 ಹಣ ಸಂಬಳಕ್ಕೆ ಆಗುತ್ತಿದ್ದು ಅವು ಎಟಿಎಂ ಯಂತ್ರದಂತೆ ಕೆಲಸ ಮಾಡುತ್ತಿದೆ. ಸಂವಿಧಾನದ ಆಶಯದಂತೆ ಐದು ವರ್ಷಗಳ ಅವಧಿ ಮುಗಿಯುತ್ತಿದ್ದಂತೆ ಚುನಾವಣೆ ನಡೆಸಿ ಹೊಸ ಅಧಿಕಾರ ವ್ಯವಸ್ಥೆಯಾಗಬೇಕು. ಆದರೆ ಪ್ರಸಕ್ತ ವಿದ್ಯಾಮಾನದಲ್ಲಿ ಆಳುವ ಸರಕಾರಗಳು ದುರ್ಬುದ್ಧಿ ತೋರುತ್ತಿರುವುದು ಖೇಧಕರ. ಮೀಸಲಾತಿ ತಯಾರಿಸುವುದು, ಅದನ್ನು ವಿರೋಧಿಸಿ ಮತ್ತೊಬ್ಬರು ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಲ್ಲಿಸುವ ಕೆಲಸವಾಗುತ್ತಿದೆ. ಬೌಂಡರಿ ಬದಲಾವಣೆ ಹೆಸರಿನಲ್ಲಿ ಚುನಾವಣೆ ಮುಂದೂಡಿದರೆ ಪಂಚಾಯತ್ ರಾಜ್ ಹೋಗಿ ಪಿ.ಡಿ.ಓ. ರಾಜ್ ಆಗುತ್ತದೆ. ಈ ನಿಟ್ಟಿನಲ್ಲಿ ಸಂಘಟನೆ, ಅರಿವು, ಜ್ಞಾನದ ಜೊತೆ ರಾಜಕೀಯ ಶಕ್ತಿ ಬಳಸಿಕೊಂಡು ಕಾನೂನು ಹೋರಾಟ ನಡೆಸಬೇಕು ಎಂದರು.

ಮೈಸೂರಿನ ಅಬ್ದುಲ್ ನಝೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಾಜಿ ತರಬೇತಿ ಸಂಯೋಜಕ ವಿಲ್ಫ್ರೆಡ್ ಡಿಸೋಜ ಪ್ರತಿಕ್ರಿಯೆ ನೀಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಕಲ್ಪನೆ ಅದ್ಭುತವಾಗಿದೆ. ಆದರೆ ನಾವು ಕಾಯ್ದೆ ಮಾಡುವಲ್ಲಿ ನಿಸ್ಸೀಮರು ಹೊರತು, ಅನುಷ್ಠಾನ ಮಾಡುವುದರಲ್ಲಿ ಅಲ್ಲ. ಪಂಚಾಯತ್ ರಾಜ್ ಪ್ರತಿನಿಧಿಗಳ ವಿಚಾರದಲ್ಲಿ ಒಂದಷ್ಟು ಸಮಸ್ಯೆ, ಗೊಂದಲ ಪರಿಹಾರದ ಬಗ್ಗೆ ಒಂದು ಸರಕಾರ ಕೆಲ ಬದಲಾವಣೆಗಳನ್ನು ತಂದರೆ ಮತ್ತೆ ಆಡಳಿತಕ್ಕೆ ಬರುವ ಸರಕಾರ ಅದನ್ನು ಮತ್ತೆ ಬದಲಾಯಿಸುವ ಕೆಲಸ ಮಾಡುವುದು ಸರಿಯಲ್ಲ ಎಂದರು.

ಸರಕಾರಗಳು ಸುಸ್ಥಿರತೆ ತೋರಬೇಕು. ಗ್ರಾಮ ಸರಕಾರಗಳು ಪ್ರಭಾವಶಾಲಿಯಾಗಲು ನಿಗದಿತ ಸಭೆಗಳು ನಡೆಯಬೇಕು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಗ್ರಾಮಸಭೆಗಳು ಪರಿಣಾಮಕಾರಿಯಾಗಿ ನಡೆಯುತ್ತಿರುವುದು ಸಮಾಧಾನಕರ ಸಂಗತಿ. ವಾರ್ಡ್ ಸಭೆ, ಗ್ರಾಮಸಭೆಗಳ ಮೂಲಕ ಹತ್ತು ಹಲವು ವಿಚಾರಗಳು ಜನರ ಗಮನಕ್ಕೆ ಬರಲು ಸಾಧ್ಯವಿದೆ. ಇಂದು ಅಧಿಕಾರ ವಿಕೇಂದ್ರಿಕರಣದ ಜೊತೆಗೆ ಭ್ರಷ್ಟಾಚಾರ ವಿಕೇಂದ್ರಿಕರಣ ನಡೆಯುತ್ತಿರುವುದಕ್ಕೆ ಜನರಿಗೆ ಮಾಹಿತಿ ಕೊರತೆಯಿರುವುದು ಕಾರಣ. ಭ್ರಷ್ಟಾಚಾರದ ನಿರ್ಮೂಲನೆಗೆ ಜನರು ಹೋರಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿದರು.

ಇದೇ ಸಂದರ್ಭ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರು, ಆಸಕ್ತ ನಾಗರಿಕರು ಮತ್ತು ಪರಿಣಿತರ ಜೊತೆ ಸಂವಾದ ನಡೆಯಿತು. ಅಧ್ಯಕ್ಷತೆಯನ್ನು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಹಿಸಿದ್ದರು.

ಒಕ್ಕೂಟದ ತಾಲೂಕು ಗೌರವಾಧ್ಯಕ್ಷ ಎಸ್. ಜನಾರ್ದನ ಮರವಂತೆ, ಕಾನೂನು ಸಲಹೆಗಾರ ಟಿ.ಬಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಸಮಾರೋಪದ ನುಡಿಗಳನ್ನಾಡಿದರು.

ಜನಪ್ರತಿನಿಧಿ ಪತ್ರಿಕೆ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಹಾಗೂ ಪತ್ರಕರ್ತ ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರಮುಖರಾದ ಶ್ರೀನಿವಾಸ ಗಾಣಿಗ ಸ್ವಾಗತಿಸಿದರು. ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಆರಂಭ ಗೀತೆ ಹಾಡಿದರು. ಒಕ್ಕೂಟದ ಕೋಶಾಧಿಕಾರಿ ಸೂಲಿಯಣ್ಣ ಶೆಟ್ಟಿ ವಂದಿಸಿದರು.

'4 ವರ್ಷ ಕಳೆದರೂ ಜಿಪಂ ತಾಪಂ ಚುನಾವಣೆ ನಡೆಸಿಲ್ಲ’

ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅವಧಿ ಮುಗಿದು ನಾಲ್ಕು ವರ್ಷ ಕಳೆದರೂ ಚುನಾವಣೆ ನಡೆಸಿಲ್ಲ. ಕಾಲಕಾಲಕ್ಕೆ ಚುನಾವಣೆ ನಡೆಸುವುದು ಆಯಾಯ ಸರಕಾರಗಳ ಕರ್ತವ್ಯ. ಸ್ಥಳೀಯಾಡಳಿತದ ನಿರ್ವಹಣೆ, ಕಾಮಗಾರಿಗಳ ಪ್ರಗತಿಯಾಗಲು ಚುನಾಯಿತ ಜನಪ್ರತಿನಿಧಿಗಳ ವ್ಯವಸ್ಥೆ ಇದ್ದಾಗ ಮಾತ್ರ ಸುಸೂತ್ರವಾಗಿ ಸಾಗಲು ಸಾಧ್ಯ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆಯೆಂದರೆ ಆಡಳಿತ ವ್ಯವಸ್ಥೆ. ಎಂತಹ ಜಟಿಲ ಸಮಸ್ಯೆಗಳು ತಲೆದೋರಿದರೂ ಗ್ರಾ.ಪಂ ಆಡಳಿತ ಅದನ್ನು ಬಗೆಹರಿಸಬೇಕು. ಗ್ರಾಮಾಭಿವೃದ್ಧಿ ಅಧಿಕಾರಿಗಳಿಂದ ಆಡಳಿತ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಂಡುಕೊಂಡಿಲ್ಲ. ಜ್ವಲಂತ ಸಮಸ್ಯೆಗಳ ಬಗೆಹರಿಸಲು ಗ್ರಾ.ಪಂ ತೀರ್ಮಾನ ಒಂದಾದರೆ ಅಧಿಕಾರಿಗಳ ತೀರ್ಮಾನವೇ ಬೇರೆ ಇರುತ್ತದೆ. ಗ್ರಾ.ಪಂ. ಅಧಿಕಾರವನ್ನು ಬಲವರ್ಧನೆಗೊಳಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಳಿತ ಸುಧಾರಣೆ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.

‘ಕರ್ನಾಟಕ ರಾಜ್ಯದಲ್ಲಿ 25 ಮಂದಿ ವಿಧಾನ ಪರಿಷತ್ ಸದಸ್ಯರಿದ್ದರೂ ಕೂಡ ನಮ್ಮಲ್ಲಿ ಪಂಚಾಯತ್ರಾಜ್ ವ್ಯವಸ್ಥೆ ಬಡವಾಗುತ್ತಿದೆ. ಇದನ್ನು ಸರಿಪಡಿಸಲು ಅವರೆಲ್ಲರೂ ನಮ್ಮ ಪ್ರತಿನಿಧಿಯಾಗಿ ವಕಾಲತ್ತು ವಹಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಪ್ರಜಾಪ್ರಭುತ್ವದ ತಾಯಿಬೇರನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬರಲ್ಲೂ ಇಚ್ಚಾಶಕ್ತಿ ಮೂಡಬೇಕು’

-ವಿಲ್ಫ್ರೆಡ್ ಡಿಸೋಜ, ಮಾಜಿ ತರಬೇತಿ ಸಂಯೋಜಕರು

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News