ತೊಟ್ಟಂ ಚರ್ಚಿನಲ್ಲಿ ಈಸ್ಟರ್ ಕಲಾ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ

ಮಲ್ಪೆ, ಎ.28: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ತೊಟ್ಟಂ ಸಂತ ಅನ್ನಮ್ಮ ಚರ್ಚ್ ಘಟಕದ ವಿವಿಧ ಯೋಜನೆಗಳ ಸಹಾಯರ್ಥವಾಗಿ ಈಸ್ಟರ್ ಕಲಾ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಚರ್ಚಿನ ಬಯಲು ರಂಗ ವೇದಿಕೆಯಲ್ಲಿ ರವಿವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ರೊನಾಲ್ಡ್ ಡಿ ಆಲ್ಮೇಡಾ ಮಾತನಾಡಿ, ಸಮುದಾಯದಲ್ಲಿ ಸಂಘಟನಾತ್ಮಕವಾಗಿ ಒಗ್ಗಟ್ಟಿನಿಂದ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಾಗ ಉತ್ತಮ ಫಲಿತಾಂಶ ಸಾಧ್ಯವಿದೆ. ನಾವು ನೀಡುವ ಸೇವೆ ಸಮುದಾಯದ ಒಳಿತಿಗೆ ಕಾರಣ ವಾಗುವಂತಿರಬೇಕು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಬೇಕು ಎಂದರು.
ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆಯ ಉದ್ಘಾಟನೆಯನ್ನು ನೆರವೇರಿಸಿದ ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಮಾತನಾಡಿ, ನಾವು ಮನುಷ್ಯರಾಗಬೇಕೆ ಹೊರತು ಯಂತ್ರಗಳಾಗ ಬಾರದು. ಮನುಷ್ಯನ ಬದುಕಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅತೀ ಅಗತ್ಯವಾಗಿ ಬೇಕು. ಸಾಂಸ್ಕೃತಿಕ ಕಾರ್ಯ ಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಾಧ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕೊಂಕಣಿ ಗಾಯಕರಾದ ದಿ|ವಿಲ್ಫಿ ರೆಬಿಂಬಸ್ ಮತ್ತು ಕೊಂಕಣ್ ಮೈನಾ ಮೀನಾ ರೆಬಿಂಬಸ್ ಅವರ ಪುತ್ರ ಗಾಯಕ ವಿಶ್ವಾಸ್ ರೆಬಿಂಬಸ್ ಉದ್ಘಾಟಿಸಿ ಶುಭ ಹಾರೈಸಿದರು. ಕಥೊಲಿಕ್ ಸಭಾ ಸಂಘಟನೆಯ ವತಿಯಿಂದ ಆಧ್ಯಾತ್ಮಿಕ ನಿರ್ದೇಶಕ ವಂ|ಡೆನಿಸ್ ಡೆಸಾ ಅವರನ್ನು ಸನ್ಮಾನಿಸಲಾಯಿತು.
ಕಲಾಸಂಜೆ ಕಾರ್ಯಕ್ರಮದಲ್ಲಿ ಸಂಗೀತ ತಂಡ ನೆಲ್ಸನ್ ಲೂವಿಸ್ ಸಂತೆಕಟ್ಟೆ ಇವರ ಕ್ಯಾರಲ್ಸ್ ಬೀಟ್ ಗ್ರೂಪ್ ತಂಡ ಹಾಗೂ ಸ್ಥಳೀಯ ಕಲಾವಿದರಿಂದ ಉತ್ತಮವಾದ ಕೊಂಕಣಿ, ಕನ್ನಡ, ಹಿಂದಿ, ಹಾಡುಗಳು ಪ್ರದರ್ಶನಗೊಂಡವು. ಮಂಗಳೂರಿನ ಹಾಸ್ಯ ತಂಡ ಮೆಮೊರಿ ಇವರಿಂದ ಹಾಸ್ಯ ಕಾರ್ಯಕ್ರಮಗಳು ನೆರೆದಿದ್ದವರನ್ನು ಹಾಸ್ಯ ಲೋಕದಲ್ಲಿ ಮುಳುಗಿಸಿತು. ಪ್ರತಿಭಾಂಗಣ್ ಸಂಘಟನೆಯ ಕಲಾವಿದರಿಂದ ವೆಚಿಕ್ ಪೂತ್ ಹಾಸ್ಯ ಪ್ರಹಸನ ಪ್ರದರ್ಶನ ಗೊಂಡಿತು
ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಸ್ಥಳೀಯ ಕಾನ್ವೆಂಟಿನ ಮುಖ್ಯಸ್ಥ ಸಿಸ್ಟರ್ ಸುಶ್ಮಾ, ಪ್ರತಿಭಾಂಗಣ್ ಸಂಘಟನೆಯ ಅಧ್ಯಕ್ಷ ಕ್ಲಾರೆನ್ಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಥೊಲಿಕ್ ಸಭಾ ತೊಟ್ಟಂ ಘಟಕದ ಅಧ್ಯಕ್ಷ ವೀನಾ ಫೆರ್ನಾಂಡಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಶಾಂತಿ ಪಿಕಾರ್ಡೊ ವಂದಿಸಿದರು. ಲವೀನಾ ಫೆರ್ನಾಂಡಿಸ್ ಹಾಗೂ ನಾನು ಮರೋಲ್ ತೊಟ್ಟಂ ಕಾರ್ಯಕ್ರಮ ನಿರೂಪಿಸಿದರು.