ಮಣ್ಣಪಳ್ಳ ಖಾಸಗಿ ನಿರ್ವಹಣೆಗೆ ಉಡುಪಿ ನಗರಸಭೆ ವಿರೋಧ
ಉಡುಪಿ, ಎ.28: ಮಣಿಪಾಲದ ಮಣ್ಣಪಳ್ಳದ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದಕ್ಕೆ ಸೋಮವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಣಿಪಾಲ ಸದಸ್ಯ ಕಲ್ಪನಾ ಸುಧಾಮ, ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಇತ್ತೀಚೆಗೆ ಸ್ಥಳ ಪರಿಶೀಲನೆ ಮಾಡಿದ್ದು, ಇದನ್ನು ಖಾಸಗಿ ಉದ್ಯಮಿಗೆ ವಹಿಸಿ ಕೊಡುವ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ಮಣ್ಣಪಳ್ಳವನ್ನು ನಗರಸಭೆಯೇ ನಿರ್ವಹಣೆ ಮಾಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಮಣ್ಣಪಳ್ಳದ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದಕ್ಕೆ ನಮ್ಮ ವಿರೋಧ ಇದೆ. ಈ ಕುರಿತು ಮಾಸ್ಟರ್ ಪ್ಲ್ಯಾನ್ ಮಾಡಿ ಕೇಂದ್ರದಿಂದ ಅನುದಾನ ತರಿಸಬೇಕು. ಇದರ ನಿರ್ವಹಣೆ ನಗರಸಭೆ ಉಸ್ತುವಾರಿಯಲ್ಲಿಯೇ ಆಗಬೇಕು ಎಂದು ತಿಳಿಸಿದರು. ಮಣ್ಣಪಳ್ಳದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ, ಡ್ರಗ್ಸ್ ದಂಧೆಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಮಳೆಗಾಲಕ್ಕೆ ಪೂರ್ವತಯಾರಿ: ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಆದುದರಿಂದ ಚರಂಡಿ ಹೂಳೆತ್ತುವ ಹಾಗೂ ಅಪಾಯಕಾರಿ ಮರಗಳ ಕೊಂಬೆ ಕತ್ತರಿಸುವ ಕಾರ್ಯ ತುರ್ತಾಗಿ ಮಾಡ ಬೇಕು ಎಂದು ವಿಪಕ್ಷ ನಾಯಕ ರಮೇಶ್ ಕಾಂಚನ್ ಒತ್ತಾಯಿಸಿದರು. ಇದಕ್ಕೆ ಅಮೃತಾ ಕೃಷ್ಣಮೂರ್ತಿ ಧ್ವನಿಗೂಡಿಸಿ, ಅದೇ ರೀತಿ ಅಪಾಯಕಾರಿಯಾಗಿ ಬೀಳುವ ಸ್ಥಿತಿಯಲ್ಲಿರುವ ಹೊಲ್ಡಿಂಗ್‌ಗಳನ್ನು ಕೂಡ ತೆರವುಗೊಳಿಸಬೇಕು ಎಂದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಮಳೆಗಾಲದ ಪೂರ್ವ ತಯಾರಿಗೆ ಸಂಬಂಧಿಸಿ ಹೊರಗುತ್ತಿಗೆಯಲ್ಲಿ 50 ಮಂದಿಯನ್ನು ನೇಮಕ ಮಾಡಲಾಗಿದೆ ಎಂದರು. ಈಗಾಗಲೇ ಎರಡು ವಿಭಾಗ ಮಾಡಿ ಪ್ರತಿ ವಾರ್ಡ್‌ಗೆ 8-9ಮಂದಿಯನ್ನು ಕಳುಹಿಸಿ ಚರಂಡಿಯ ಹೂಳೆತ್ತುವ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ಮಳೆಗಾಲಕ್ಕೆ ಮೊದಲು ದುರಸ್ತಿ ಮಾಡಬೇಕೆಂದು ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಚರಂಡಿಗೆ ತ್ಯಾಜ್ಯ ನೀರು: ಮಣಿಪಾಲದಲ್ಲಿನ ವಸತಿ ಸಮುಚ್ಛಯಗಳಿಂದ ನೇರವಾಗಿ ಚರಂಡಿಗೆ ತ್ಯಾಜ್ಯ ನೀರು ಬಿಡುತ್ತಿದ್ದಾರೆ. ಇದರಿಂದ ಸಾಕಷ್ಟು ಬಾವಿಗಳ ನೀರು ಮಲೀನವಾಗಿದೆ ಎಂದು ಸದಸ್ಯರು ದೂರಿ ದರು. ಈ ಬಗ್ಗೆ ಉತ್ತರಿಸಿದ ಪರಿಸರ ಇಂಜಿನಿಯರ್ ಸ್ನೇಹಾ, ಈಗಾಗಲೇ ಹಲವು ಕಟ್ಟಡಗಳಿಗೆ ನೋಟೀಸ್ ನೀಡಲಾಗಿದೆ. ಆದರೂ ತ್ಯಾಜ್ಯವನ್ನು ಚರಂಡಿಗೆ ಬಿಡುತ್ತಿದ್ದಾರೆ. ಈ ಕಟ್ಟಡಗಳ ಮೂಲಭೂತ ಸೌಲಭ್ಯಗಳನ್ನು ಸ್ಥಗಿತಗೊಳಿಸುವುದು ಮಾತ್ರ ಇದಕ್ಕೆ ತಕ್ಕ ಉತ್ತರವಾಗಿದೆ ಎಂದರು. ಅದರಂತೆ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಅಧ್ಯಕ್ಷರು ಸೂಚಿಸಿದರು.
ಚಿಟ್ಪಾಡಿ ವಾರ್ಡ್ ವ್ಯಾಪ್ತಿಯಲ್ಲಿ ಪ್ರಾರ್ಥನಾ ಕಟ್ಟಡವನ್ನು ರಾಜ ಕಾಲುವೆ ಯಲ್ಲಿ ಪಿಲ್ಲರ್ ಹಾಕಿ ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡಿಲ್ಲ. ಕೂಡಲೇ ಪಿಲ್ಲರ್ ತೆರವು ಮಾಡಬೇಕೆಂದು ಸದಸ್ಯ ಕೃಷ್ಣರಾಜ್ ಕೊಡಂಚ ಆಗ್ರಹಿಸಿದರು. ಈ ಬಗ್ಗೆ ಕಡತ ಪರಿಶೀಲನೆ ಮಾಡಿ ಎರಡು ದಿನಗಳಲ್ಲಿ ಇಂಜಿನಿಯರ್‌ಗಳನ್ನು ಸ್ಥಳ ಕಳುಹಿಸಿ, ಕಾನೂನು ರೀತಿಯ ಕ್ರಮ ಜರಗಿಸಲಾಗುವುದು ಎಂದು ಪೌರಾಯುಕ್ತ ಡಾ.ಉದಯ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.
ತೆರಿಗೆ ಪಾವತಿಸದ 94 ಮೊಬೈಲ್ ಟವರ್‌ಗಳು!
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸದ 94 ಮೊಬೈಲ್ ಟವರ್‌ಗಳಿಗೆ ಸಂಬಂಧಿಸಿ ಆಯಾ ಕಂಪೆನಿಗಳಿಗೆ ನೋಟೀಸ್ ಜಾರಿ ಮಾಡಿದ್ದು, 2014ರ ಸುತ್ತೋಲೆ ಪ್ರಕಾರ ಟವರ್ ಸ್ಥಾಪನೆಯಾದ ದಿನದಿಂದ ವರ್ಷಕ್ಕೆ 12 ಸಾವಿರ ರೂ. ತೆರಿಗೆ ಪಾವತಿಸುವಂತೆ ನೋಟೀಸ್‌ನಲ್ಲಿ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆ ಯಂತೆ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ 58 ಕಟ್ಟಡಗಳಿಗೆ ನೋಟೀಸ್ ನೀಡಿದ್ದು, ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಹಳೆ ಡಯಾನ ಸರ್ಕಲ್ ರಾಶಿ ಹಾಕಲಾದ ಸಿಗ್ನಲ್ ಕಂಬಗಳನ್ನು ಕೂಡಲೇ ತೆರವು ಗೊಳಿಸಬೇಕೆಂದು ಅವರು ಒತ್ತಾಯಿಸಿದರು.
