ಸಮುದಾಯ, ಉಪಜಾತಿಗಳನ್ನು ಒಬಿಸಿಗೆ ಸೇರ್ಪಡೆಗೊಳಿಸಲು ಆಗ್ರಹ: ವೈಶ್ಯವಾಣಿ ಸಮುದಾಯದಿಂದ ಧರಣಿ

ಉಡುಪಿ, ಎ.29: ವೈಶ್ಯವಾಣಿ ಸಮುದಾಯ ಹಾಗೂ ಅದರ ಉಪಜಾತಿ ಗಳನ್ನು ಒಬಿಸಿಗೆ ಸೇರ್ಪಡೆ ಗೊಳಿಸಿ ಹೊರಡಿಸಿರುವ ಸರಕಾರಿ ಆದೇಶವನ್ನು ಗಝೆಟ್ ನೋಟಿಫಿಕೇಷನ್ ಹೊರಡಿಸಿ ಜಾತಿ ಪ್ರಮಾಣ ಪತ್ರ ನೀಡುವಂತೆ ವೈಶ್ಯವಾಣಿ ಸಮುದಾಯ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ತಲ್ಲದೇ, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿತು.
ಉಡುಪಿ ಜಿಲ್ಲಾ ವೈಶ್ಯವಾಣಿ ಸಮಾಜ ಸಮುದಾಯದ ನೇತೃತ್ವದಲ್ಲಿ ಇಂದು ಮಣಿಪಾಲದ ರಜತಾದ್ರಿ ಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಲಾಯಿತು. 2023ರ ಮಾರ್ಚ್ 27ರಂದು ತಮ್ಮ ಸಮುದಾಯವನ್ನು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರ್ಪಡೆ ಮಾಡಿ ಹೊರಡಿ ಸಿದ ಸರಕಾರಿ ಆದೇಶದ ಗಝೆಟ್ ನೋಟಿಫಿಕೇಷನ್ ಹೊರಡಿಸುವಂತೆ ಪ್ರತಿಭಟನಕಾರರು ಒಕ್ಕೊರಲಿ ನಿಂದ ಆಗ್ರಹಿಸಿದರು.
ವೈಶ್ಯವಾಣಿ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗ ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದ್ದು, ಕರ್ನಾಟಕದಲ್ಲಿ ಸಮುದಾಯದ ಜನಸಂಖ್ಯೆ ಸುಮಾರು 5ಲಕ್ಷದಷ್ಟಿದೆ. ಜಿಲ್ಲೆಯಲ್ಲಿ ಎಲ್ಲಾ ಉಪಸಮುದಾಯಗಳು ಸೇರಿದರೆ ಜನಸಂಖ್ಯೆ 10ರಿಂದ 15 ಸಾವಿರದಷ್ಟಿದೆ ಎಂದು ಉಡುಪಿ ಜಿಲ್ಲಾ ವೈಶ್ಯವಾಣಿ ಸಮಾಜ ಸಮುದಾಯದ ಅಧ್ಯಕ ವಸಂತ ಕೆ.ನಾಯಕ್ ತಿಳಿಸಿದರು.
ನಮ್ಮದು ಹಿಂದುಳಿದ ಸಮುದಾಯವಾದರೂ, ಸಾಮಾನ್ಯ ವರ್ಗದಲ್ಲೇ ಪರಿಗಣಿಸಲ್ಪಡುತಿದ್ದೇವೆ. ಇದರಿಂದ ನಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದ ವೇಳೆ ಜಾತಿ ಸರ್ಟಿಫಿಕೇಟ್ ದೊರೆಯಲು ಸಮಸ್ಯೆಗಳಾಗುತ್ತಿವೆ. ಹೀಗಾಗಿ ಕಳೆದ ಮೂರು ದಶಕಗಳಿಂದ ನಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆಗೊಳಿಸುವಂತೆ ಸರಕಾರವನ್ನು ಆಗ್ರಹಿಸುತ್ತಾ ಬಂದಿದ್ದೇವೆ ಎಂದರು.
ವೈಶ್ಯವಾಣಿ ಸಮುದಾಯದಲ್ಲಿ ಹಿಂದೂ ವೈಶ್ಯ, ಕೊಂಕಣಿ ವಾಣಿ, ಕೊಂಕಣಿ ವೈಶ್ಯ, ಕನ್ನಡ ವೈಶ್ಯ ಇತ್ಯಾದಿಯಾಗಿ 15 ಉಪಜಾತಿಗಳಿವೆ ಎಂದು ಹೇಳಿದ ವಸಂತ ನಾಯಕ್, ನಮ್ಮ ಮನವಿಯನ್ನು ಪರಿಗಣಿಸಿ 2010ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಡಾ.ಸಿ.ಎಸ್. ದ್ವ್ವಾರಕನಾಥ ಅವರು ವೈಶ್ಯವಾಣಿ ಸಮುದಾಯ ಹಾಗೂ ಉಪಜಾತಿಗಳನ್ನು ಒಬಿಸಿ 3ಬಿಗೆ ಸೇರ್ಪಡೆಗೊಳಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಿದ್ದರು ಎಂದರು.
ಬಳಿಕ 2013ರಲ್ಲಿ ಎಂ.ಶಂಕರಪ್ಪ ಆಯೋಗ ಕೂಡಾ ನಮ್ಮ ಸುದಾಯದ ಸಮೀಕ್ಷೆ ನಡೆಸಿ ವೈಶ್ಯವಾಣಿ ಸಮುದಾಯವನ್ನು ಒಬಿಸಿಯ 2ಡಿಗೆ ಸೇರ್ಪಡೆ ಗೊಳಿಸಲು ಶಿಫಾರಸ್ಸು ಮಾಡಿ ವರದಿ ಸಲ್ಲಿಸಿದ್ದರು. ಬಳಿಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಸಹ ಇದೇ ರೀತಿಯ ಶಿಫಾರಸ್ಸು ಮಾಡಿದ್ದು, ಕೊನೆಗೂ ಸರಕಾರ 2023ರ ಮಾ.27ರಂದು ಒಬಿಸಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಇನ್ನೂ ಗಝೆಟ್ ನೋಟಿಫಿಕೇಷನ್ ಆಗದೇ ಇನ್ನೂ ಜಾರಿಗೆ ಬಂದಿಲ್ಲ. ಇದರಿಂದ ನಮ್ಮ ಸಮುದಾಯದ ವಿದ್ಯಾರ್ಥಿಗಳು ಸೂಕ್ತ ಜಾತಿ ಸರ್ಟಿಫಿಕೇಟ್ ಸಿಗದೇ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತಿದ್ದಾರೆ ಎಂದರು.
ಹೀಗಾಗಿ ಸರಕಾರ ತಕ್ಷಣವೇ ಸರಕಾರಿ ಆದೇಶದ ಗಝೆಟ್ ನೋಟಿಫಿಕೇಷನ್ ಹೊರಡಿಸಿ ನಮಗೂ ಜಾತಿ ಸರ್ಟಿಫಿಕೇಟ್ ದೊರಕುವಂತೆ ಮಾಡುವಂತೆ ಅವಕಾಶ ನೀಡಬೇಕು ಎಂದು ನಾವು ಒತ್ತಾಯಿಸುತಿದ್ದೇವೆ ಎಂದು ವಸಂತ ನಾಯಕ್ ತಿಳಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಸುಭಾಷ್‌ಚಂದ್ರ ಸೇಟ್ ಕುಂದಾಪುರ, ಮಹೇಶ್ ಸೇಟ್ ಕೋಟೇಶ್ವರ, ರಾಜೇಶ್ ಜಿ.ಸೇಟ್ ಉಡುಪಿ, ಭಾಗ್ಯಲಕ್ಷ್ಮೀ ನಾಯಕ್ ಬೈಂದೂರು, ಪೂರ್ಣೇಶ್ ಪ್ರಭು ಹುಣ್ಸೆಮಕ್ಕಿ, ವೆಂಕಟೇಶ್ ನಾಯಕ್, ಮಂಜುನಾಥ್ ಸೇಟ್ ಕುಂದಾಪುರ, ಮಂಜುಳಾ ವಿ.ನಾಯಕ್, ಅರುಣ್ ಸೇಟ್ ಹೆಬ್ರಿ, ಹರೀಶ್ ಗಾಂವ್ಸ್ ಪೆರ್ಡೂರು ಮುಂತಾದವರು ಭಾಗವಹಿಸಿದ್ದರು.
