ಉಡುಪಿ ಡಿಸಿ ಎಸ್ಪಿಯಿಂದ ಹೆಜಮಾಡಿ-ಶಿರೂರು ರಾ.ಹೆದ್ದಾರಿ ಕಾಮಗಾರಿ, ಸಮಸ್ಯೆಗಳ ಪರಿಶೀಲನೆ

ಉಡುಪಿ, ಎ.29: ಹೆಜಮಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ದುರಸ್ತಿ ಕಾಮಗಾರಿ ಹಾಗೂ ಸಮಸ್ಯೆಗಳ ಕುರಿತು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳೊಂದಿಗೆ ಪರಿಶೀಲನೆ ನಡೆಸಿದರು.
ಕುಂದಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಹಾಗೂ ಸುರಕ್ಷತೆಗೆ ಸಂಬಂಧಪಟ್ಟಂತೆ ಸ್ಥಳಗಳನ್ನು ಪಡುಬಿದ್ರೆಯಿಂದ ಬೈಂದೂರಿನ ಶಿರೂರುವರೆಗೆ ವೀಕ್ಷಣೆ ಮಾಡುತ್ತಿದ್ದು ಕಾಮಗಾರಿ ಅಗತ್ಯ ಇರುವಲ್ಲಿ ಗುತ್ತಿಗೆದಾರರಿಗೆ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಎಸ್ಪಿ ಡಾ.ಅರುಣ್ ಕೆ. ಮಾತನಾಡಿ, ಪಡುಬಿದ್ರಿ, ಉಚ್ಚಿಲ, ಕಾಪು, ಕರಾವಳಿ ಬೈಪಾಸ್, ಬ್ರಹ್ಮಾವರ, ಕೋಟ, ಕೋಟೇಶ್ವರ, ಕುಂದಾಪುರ, ತ್ರಾಸಿ ಸೇರಿದಂತೆ ಹಲವು ಕಡೆಗೆ ಭೇಟಿ ನೀಡಿ, ಆಯಾ ಸ್ಥಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಸುಗಮ ಸಂಚಾರಕ್ಕೆ ತೊಂದರೆ ಆಗುವಲ್ಲಿ ಕಾಮಗಾರಿ ಮಾಡಲೇಬೇಕು. ಸ್ಥಳೀಯಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಿರ್ವಹಿಸಿದಾಗ ಸಮಸ್ಯೆಗಳು ಕಡಿಮೆ ಆಗುತ್ತವೆ ಎಂದು ಹೇಳಿದರು.
ಬಹುತೇಕ ಕಡೆ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನೀರು ಶೇಖರಣೆಯಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದು ಕಂಡುಬಂದಿದೆ. ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ. ತೆಕ್ಕಟ್ಟೆಯಿಂದ ಕುಂದಾಪುರವರೆಗೆ ಎರಡು ಕಡೆ ಸರ್ವಿಸ್ ರಸ್ತೆ ಮಳೆಗಾಲ ಮುಗಿದ ನಂತರ ಅಂತಿಮಗೊಳಿಸಲಾಗುತ್ತದೆ. ಉಳಿದ ಕಡೆ ಸರ್ವಿಸ್ ರಸ್ತೆಗಳು ಕೂಡ ಬೇರೆ ಬೇರೆ ಹಂತದಲ್ಲಿದೆ ಎಂದರು.
ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗುತ್ತಿಗೆದಾರರು ಕಾಮಗಾರಿ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ದೂರುಗಳಿದ್ದರೂ ಸ್ಪಂದಿಸುತ್ತಿಲ್ಲ. ಮಳೆಗಾಲದಲ್ಲಿ ಸರ್ವಿಸ್ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ಚರಂಡಿಯಲ್ಲಿ ನೀರು ಹರಿಯುವುದಿಲ್ಲ. ಸಚಿವರು, ಸಂಸದರು ಯಾರು ಹೇಳಿದರೂ ಕಾಮಗಾರಿ ಮಾತ್ರ ನಡೆಯುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ., ಕಂದಾಯ ನಿರೀಕ್ಷಕ ದಿನೇಶ್, ಪುರಸಭೆ ಎಂಜಿನಿಯರ್ ಗುರುಪ್ರಸಾದ್ ಶೆಟ್ಟಿ, ರಾಘವೇಂದ್ರ ನಾಯ್ಕ್ ಮೊದಲಾದ ವರು ಉಪಸ್ಥಿತರಿದ್ದರು.