ಗೃಹಲಕ್ಷ್ಮೀ ಯೋಜನೆ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಮಾಹಿತಿ: ಅಶೋಕ್ ಕುಮಾರ್ ಕೊಡವೂರು

ಉಡುಪಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲಾಗಿದ್ದು, ಯೋಜನೆಗಳ ಸೌಲಭ್ಯ ಹಾಗೂ ಲಾಭ ಎಲ್ಲಾ ಅರ್ಹರಿಗೂ ದೊರಕುವಂತೆ ಮಾಡಲು ಸಮಿತಿ ಪ್ರಯತ್ನ ನಡೆಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾದ ಕುಟುಂಬದ ಯಜಮಾನಿ ಮರಣ ಹೊಂದಿದ್ದಲ್ಲಿ ಯಜಮಾ ನಿಯ ಬದಲಾವಣೆಗೆ, ಹೊಸ ಮನೆ ನಿರ್ಮಾಣವಾದಾಗ ಹೊಸ ಅರ್ಜಿಯ ಸೇರ್ಪಡೆಗೆ, ರೇಷನ್ ಕಾರ್ಡ್ ಇಲ್ಲದವರಿಗೆ ಹೊಸದಾಗಿ ರೇಷನ್ ಕಾರ್ಡ್ ಪಡೆದು ಗೃಹಲಕ್ಷ್ಮೀ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿ ಸಲು ಸದ್ಯ ತಂತ್ರಾಂಶದಲ್ಲಿ ಅವಕಾಶವಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಜಿಲ್ಲೆಯ ಎಲ್ಲಾ ಅರ್ಹರಿಗೂ ಯೋಜನೆಯ ಲಾಭ ಸಿಗುವಂತೆ ಮಾಡಲಾಗುವುದು ಎಂದವರು ಭರವಸೆ ನೀಡಿದರು.
ಫಲಾನುಭವಿಗಳ ದೂರು: ಗೃಹಲಕ್ಷ್ಮೀ ಯೋಜನೆಯ ಹಣವು ಪ್ರಾರಂಭದ ಮೂರು, ನಾಲ್ಕು ಕಂತುಗಳು ಪಾವತಿ ನಂತರ ಬಾಕಿ ಕಂತುಗಳ ಹಣ ಪಾವತಿಯಾಗುತ್ತಿಲ್ಲ ಎಂಬ ದೂರುಗಳನ್ನು ಗ್ರಾಮೀಣ ಭಾಗದ ಫಲಾನುಭವಿಗಳಿಂದ ಕೇಳಿಬರುತ್ತಿದೆ. ಅವರು ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಗೆ ಈ ಬಗ್ಗೆ ದೂರು ನೀಡುತಿದ್ದಾರೆ ಎಂದು ಬ್ರಹ್ಮಾವರ ತಾಲೂಕು ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ ತಿಳಿಸಿದರು. ಯಾವ ಕಾರಣ ದಿಂದ ಹಣ ಜಮೆಯಾಗುತ್ತಿಲ್ಲ ಎಂಬ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಬೇಕು ಹಾಗೂ ಯೋಜನೆ ಗಳು ತಲುಪಲು ಇರುವ ತಾಂತ್ರಿಕ ತೊಡಕುಗಳನ್ನು ಕೂಡಲೇ ನಿವಾರಿಸಿ ಎಲ್ಲರ ಖಾತೆಗೂ ಹಣ ತಲುಪುವಂತಾಗಬೇಕು ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾದವರಲ್ಲಿ ಐಟಿ ಮತ್ತು ಜಿಎಸ್‌ಟಿ ಪಾವತಿದಾರರು ಎಂಬ ಕಾರಣಕ್ಕಾಗಿ ಸುಮಾರು 5000 ದಷ್ಟು ಫಲಾನುಭವಿಗಳು ಈಗಾಗಲೇ ಸೌಲಭ್ಯದಿಂದ ವಂಚಿತರಾಗಿ ದ್ದಾರೆ. ಜಿಲ್ಲೆಯಲ್ಲಿ ಐಟಿ, ಜಿಎಸ್‌ಟಿ, ಇ-ಕೆವೈಸಿ ಮ್ಯಾಪಿಂಗ್ ಸೇರಿದಂತೆ ವಿವಿಧ ಕಾರಣಗಳಿಗಾಗಿ ಒಟ್ಟು 7151 ಫಲಾನುಭವಿಗಳ ಅರ್ಜಿಗಳು ಬಾಕಿ ಇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ಯಾಮಲಾ ಅವರು ಮಾಹಿತಿ ನೀಡಿದರು. ಈ ಬಗ್ಗೆ ಪರಿಶೀಲಿಸಿ ಅರ್ಹರಿದ್ದಲ್ಲಿ ಅವರಿಗೂ ಗ್ಯಾರಂಟಿ ಯೋಜನೆ ತಲುಪಿಸಬೇಕೆಂದು ಕೊಡವೂರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸರಕಾರದ ಎಲ್ಲಾ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಈ ಮೂಲಕ ಜಿಲ್ಲೆಯ ಪ್ರತಿಯೊಬ್ಬ ಅರ್ಹರಿಗೂ ಇವುಗಳ ಪ್ರಯೋಜನ ಸಿಗುವಂತಾಗಬೇಕು. ಪಂಚ ಗ್ಯಾರಂಟಿ ಯೋಜನೆ ಜಿಲ್ಲೆಯಲ್ಲಿ ಬಹುತೇಕ ಅರ್ಹ ಫಲಾನುಭವಿಗಳಿಗೆ ಸಿಗುತ್ತಿದೆ. ಆದರೂ ಅರ್ಜಿ ಸಲ್ಲಿಸಿದ ಕೆಲವರಿಗೆ ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆಗಳಾಗುತ್ತಿವೆ. ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಿ ಅರ್ಹರಿದ್ದಲ್ಲಿ ಅವರಿಗೂ ಇದರ ಲಾಭ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಶೋಕ್‌ಕುಮಾರ್ ಕೊಡವೂರು ತಿಳಿಸಿದರು.
ನೋಡೆಲ್ ಅದಿಕಾರಿ ನೇಮಕ: ಇದಕ್ಕೆ ಉತ್ತರಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಇದೇ ಕಾರಣಕ್ಕಾಗಿ ಒಬ್ಬ ಅಧಿಕಾರಿಯನ್ನು ಪಂಚ ಗ್ಯಾರಂಟಿ ಯೋಜನೆಗಳ ನೋಡೆಲ್ ಅಧಿಕಾರಿಯಾಗಿ ನಿಯುಕ್ತಿಗೊಳಿಸಲಾಗುವುದು. ರಾಮದಾಸ್ ಅವರನ್ನು ಗ್ಯಾರಂಟಿ ಯೋಜನೆ ಜಿಲ್ಲಾ ನೋಡೆಲ್ ಅಧಿಕಾರಿಯಾಗಿ ನೇಮಿಸಿದ್ದು, ಎಲ್ಲಾ ತಾಲೂಕು ಸಮಿತಿ ಹಾಗೂ ಜಿಲ್ಲಾ ಸಮಿತಿ ಸದಸ್ಯರು ಯೋಜನೆಗಳ ಕುರಿತು ಯಾವುದೇ ಸಮಸ್ಯೆಯನ್ನು ಅವರ ಗಮನಕ್ಕೆ ತರಬಹುದು. ಅವರು ಸಂಬಂಧಿತ ಇಲಾಖೆಯನ್ನು ಸಂಪರ್ಕಿಸಿ ಅದನ್ನು ಬಗೆಹರಿಸಲು ಪ್ರಯತ್ನಿಸುವರು ಎಂದರು.
ಹೆಚ್ಚುವರಿ ವಿದ್ಯುತ್ ಬಿಲ್: ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಗ್ರಾಹಕ ಒಂದು ಆರ್ಥಿಕ ವರ್ಷದಲ್ಲಿ ಬಳಸಿದ ಸರಾಸರಿ ವಿದ್ಯುತ್ ಯೂನಿಟ್‌ಗೆ ಶೇ.10 ಯೂನಿಟ್ ಸೇರಿಸಿ, ಗರಿಷ್ಠ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಬಸಲು ಅವಕಾಶ ವಿದೆ. ಬೇಸಿಗೆಯ ಕಾರಣದಿಂದ ಈಗ ನಿಗದಿಪಡಿಸಿದ ಯೂನಿಟ್ ಗಿಂತ ಅಧಿಕ ವಿದ್ಯುತ್ ಖರ್ಚಾಗುತಿದ್ದು, ಸಾಕಷ್ಟು ಮಂದಿಗೆ ವಿದ್ಯುತ್ ಬಿಲ್ ಪಾವತಿಸಲು ಬಂದಿದೆ. ಮುಂದೆ ವಿದ್ಯುತ್ ಬಳಕೆ ನಿಗದಿಗಿಂತ ಕಡಿಮೆಯಾದಾಗ ಮತ್ತೆ ಉಚಿತವಾಗಲಿದೆ ಎಂದು ಮೆಸ್ಕಾಂನ ಅಧಿಕಾರಿ ಸಮಿತಿಯ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ವಿದ್ಯುತ್ ಬಿಲ್ ಪಾವತಿ ವಿಳಂಬವಾದರೆ, ನೋಟೀಸು ಅವಕಾಶ ನೀಡದೇ ವಿದ್ಯುತ್ ಸಂಪರ್ಕದ ಫ್ಯೂಸ್ ತೆಗೆಯಲಾಗುತ್ತಿದೆ ಎಂದು ಸಮಿತಿಯ ಸದಸ್ಯರು ದೂರಿದರು. ಈ ಬಗ್ಗೆ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಲು ವ್ಯವಸ್ಥೆಯಾಗಬೇಕು. ಹೆಚ್ಚುವರಿ ಬಳಕೆಯ ಹಣ ತುಂಬಲು ಸಮಯಾವಕಾಶ ಮಾಡಿಕೊಡ ಬೇಕು ಎಂದು ಮೆಸ್ಕಾಂ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಲಾಯಿತು.
ಶಕ್ತಿ ಯೋಜನೆಯಲ್ಲಿ ಸರಕಾರ ಮಂಗಳೂರು ವಿಭಾಗಕ್ಕೆ ನೂರು ಹೊಸ ಬಸ್‌ಗಳನ್ನು ಶೀಘ್ರದಲ್ಲಿಯೇ ನೀಡಲಿದ್ದು, ಇವುಗಳಲ್ಲಿ 40 ಬಸ್‌ಗಳು ಉಡುಪಿಗೆ ಬರಲಿವೆ. ಅವುಗಳನ್ನು ಬೇಡಿಕೆ ಬಂದಿರುವ, ಅಗತ್ಯವಿ ರುವ ಕಡೆಗೆ ಹಾಕಬೇಕು. ನಗರದ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣವನ್ನು ಸ್ವಚ್ಛ ಹಾಗೂ ಸುವ್ಯವಸ್ಥಿತ ರೀತಿ ಯಲ್ಲಿ ಇರಿಸಬೇಕು. ಬಸ್ ನಿಲ್ದಾಣದಲ್ಲಿ ಎಸ್ಕಲೇಟರ್ ಹಾಗೂ ಶೌಚಾಲಯದ ಶುಚಿತ್ವದ ಕಡೆಗೆ ವಿಶೇಷ ಗಮನ ಹರಿಸಬೇಕು ಎಂದು ಕೊಡವೂರು ಅಧಿಕಾರಿಗೆ ಸೂಚನೆ ನೀಡಿದರು.
ಯುವನಿಧಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 3661 ಅಭ್ಯರ್ಥಿಗಳು ನೋಂದಾಣಿಯಾಗಿದ್ದು, ಇವರಲ್ಲಿ 2741 ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ 4.15 ಕೋಟಿ ರೂ. ಪಾವತಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ಹಂಚಿಕೊಂಡರು.
ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ನೀಡಿ, ಪಡಿತರವನ್ನು ಪಡೆಯಬೇಕಾಗಿದ್ದು, ಇದಕ್ಕೆ ಪದೇ ಪದೇ ಸರ್ವರ್ ಸಮಸ್ಯೆ ಉಂಟಾಗುತಿದೆ. ಜಿಲ್ಲೆಯ 1406 ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳಿಗೆ ಇ-ಕೆವೈಸಿ ಮಾಡಿಸಲು ಬಾಕಿ ಇದ್ದು, ಇವುಗಳನ್ನು ಅತೀ ಶೀಘ್ರವಾಗಿ ಮಾಡಿಸಬೇಕು ಎಂದು ಬಾಯಲ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಪ್ರಶಾಂತ ಜತ್ತನ್ನ, ಸತೀಶ್, ಸಂತೋಷ್ ಕುಲಾಲ್ ಹಾಗೂ ಗೀತಾ ವಾಗ್ಲೆ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರು, ತಾಲೂಕುಗಳ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
