ಭಾರೀ ಮಳೆಗೆ ಕೊಚ್ಚಿ ಹೋದ ನೀರೋಡಿ ಕಿರು ಸೇತುವೆ
ಬೈಂದೂರು, ಜು.24: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗರ್ಸೆ ಗ್ರಾಮದ ನೀರೋಡಿ ಎಂಬಲ್ಲಿ ನಿರ್ಮಿಸಲಾದ ಕಿರು ಸೇತುವೆ ಭಾರೀ ಮಳೆಯಿಂದಾಗಿ ಇಂದು ಕೊಚ್ಚಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.
ಕಳೆದ ವರ್ಷ ಪಟ್ಟಣ ಪಂಚಾಯತ್ ವತಿಯಿಂದ 3 ಲಕ್ಷ ರೂ. ವೆಚ್ಚದಲ್ಲಿ ಈ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಈ ಕಿರು ಸೇತುವೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಇದರಿಂದ ಇಲ್ಲಿನ ರಸ್ತೆ ಸಂಪರ್ಕ ಕಡಿತ ಗೊಂಡು ಸ್ಥಳೀಯರು ತೀರಾ ತೊಂದರೆ ಅನುಭವಿಸುವಂತಾಗಿದೆ.
ಇಲ್ಲಿ ಮರಾಠ ಜನಾಂಗದವರೇ ಹೆಚ್ಚು ವಾಸವಾಗಿದ್ದಾರೆ. ಇದೀಗ ಸೇತುವೆ ಇಲ್ಲದೆ ಶಾಲಾ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು ನೆರೆಯ ಗ್ರಾಮಕ್ಕೆ ಹೋಗಲು ಪರದಾಡುವಂತಾಗಿದೆ.
ಉಡುಪಿ ಜಿಲ್ಲಾಧಿಕಾರಿ, ಬೈಂದೂರು ತಹಸಿಲ್ದಾರ್ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರೈತ ಹೋರಾಟಗಾರ ವೀರಭದ್ರ ಗಾಣಿಗ ಎಚ್ಚರಿಕೆ ನೀಡಿದ್ದಾರೆ.