ಕೊರಗರ ಸರ್ವಾಂಗೀಣ ಅಭಿವೃದ್ಧಿಗೆ ಔದ್ಯೋಗಿಕ, ಆರೋಗ್ಯ ಭದ್ರತೆ ಅಗತ್ಯ: ಡಾ.ಸಬಿತಾ ಗುಂಡ್ಮಿ
ಶಿರ್ವ, ಆ.18: ಕೊರಗ ಸಮುದಾಯದ ಭೂಮಿ ಹಬ್ಬ ಇಡೀ ಕರ್ನಾಟಕದ ಬುಡಕಟ್ಟು ಸಮುದಾಯಗಳಿಗೆ ಮಾದರಿ ಯಾಗಿದೆ. ಸಮುದಾಯದ ಶೈಕ್ಷಣಿಕ ಸಾಮಾಜಿಕ ಬದಲಾವಣೆ ಮುಂದಿನ ಅಭಿವೃದ್ಧಿಗೆ ಮೇಲುಗೈ ಸಾಧಿಸುವಂತಾಗ ಬೇಕು. ಸರ್ವಾಂಗೀಣ ಅಭಿವೃದ್ಧಿ ಆಗಬೇಕಾದರೆ ಔದ್ಯೋಗಿಕ ಹಾಗೂ ಆರೋಗ್ಯ ಭದ್ರತೆ ಬೇಕು. ಕೊರಗ ಸಮುದಾಯಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿ ಅಭಿವೃದ್ಧಿ ಪಡೆಯುವಲ್ಲಿ ಜನಪ್ರತಿಧಿಗಳು ಸಹಕಾರ ನೀಡಬೇಕು ಎಂದು ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ.ಸಬಿತಾ ಗುಂಡ್ಮಿ ಹೇಳಿದ್ದಾರೆ.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಇದರ ವತಿಯಿಂದ ರವಿವಾರ ಶಿರ್ವ ಸಮೀಪದ ಪೆರ್ನಾಲ್ ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ 16ನೇ ವರ್ಷದ ಭೂಮಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಹಬ್ಬದ ಸಂದೇಶ ನೀಡಿದರು.
9 ಸಾವಿರ ವರ್ಷಗಳ ಪರಂಪರೆ ಹೊಂದಿರುವ ಕೊರಗ ಸಮುದಾಯ ಸ್ವಾವಲಂಬಿ ಜೀವನ ನಡೆಸಬೇಕೆಂಬ ಕಾರಣಕ್ಕೆ ಹೋರಾಟದ ಪ್ರಕ್ರಿಯೆಗೆ ಒಳಗಾಯಿತು. ಈಗಲೂ ಆಹಾರ, ಶಿಕ್ಷಣ, ಉದ್ಯೋಗಕ್ಕಾಗಿ ಹೋರಾಡುವ ಪರಿಸ್ಥಿತಿ ಇದೆ. 16 ವರ್ಷಗಳ ಹಿಂದೆ ಸಿಕ್ಕಂತಹ ಭೂಮಿಗೆ ಇನ್ನೂ ಪುನರ್ವಸತಿ ಭಾಗ್ಯ ಸಿಕ್ಕಿಲ್ಲ. ಆದರೆ ಈ ಹೋರಾಟದ ಫಲವಾಗಿ 500ಕ್ಕೂ ಹೆಚ್ಚು ಕುಟುಂಬ ಭೂಮಿಯನ್ನು ಪಡೆದುಕೊಂಡಿದೆ. 1000ಕ್ಕೂ ಅಧಿಕ ಯುವಕರು ಉತ್ತಮ ಶಿಕ್ಷಣ ಪಡೆಯುವಂತಾಗಿದೆ ಎಂದರು.
ಡೋಲು ಬಾರಿಸುವ ಮೂಲಕ ಭೂಮಿ ಹಬ್ಬವನ್ನು ಉದ್ಘಾಟಿಸಿದ ಮುದರಂಗಡಿ ಗ್ರಾಪಂ ಅಧ್ಯಕ್ಷೆ ನಮಿತಾ ಮಾತನಾಡಿ, ಕೊರಗ ಸಮುದಾಯ ದವರು ಸರಕಾರದಲ್ಲಿ ಇರುವಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸಮುದಾಯದ ಯುವ ಜನತೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಬೇಕಾಗಿ ಎಲ್ಲಾ ರೀತಿ ಯಲ್ಲೂ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ಮಾತನಾಡಿ, ಕೊರಗ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧನಾಗಿದ್ದೇನೆ. ಅಲ್ಲದೆ ಇನ್ನು ಒಂದು ವಾರದೊಳಗೆ ಸರಕಾರದ ಬಳಿ ಮಾತನಾಡಿ ಒಕ್ಕೂಟದ ನಿಯೋಗವನ್ನು ಮುಖ್ಯ ಮಂತ್ರಿ ಅವರ ಬಳಿ ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು ಎಂದರು.
ಅಧ್ಯಕ್ಷತೆಯನ್ನು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಅಧ್ಯಕ್ಷೆ ಸುಶೀಲ ನಾಡ ವಹಿಸಿದ್ದರು. ಧ್ವಜಾರೋಹಣವನ್ನು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಮ್ಮ ನ್ಯಾಯ ಕೂಟದ ನ್ಯಾಯಾಧೀಶ ಬಾಲರಾಜ್ ಕೋಡಿಕಲ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಉಡುಪಿ ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ಎಂ.ನಾರಾಯಣ ಸ್ವಾಮಿ, ಕಾಪು ಕೊರಗಾಭಿವೃದ್ದಿ ಸಂಘದ ಅಧ್ಯಕ್ಷೆ ಸುಂದರಿ ಪಣಿಯೂರು, ಒಕ್ಕೂಟದ ಉಪಾಧ್ಯಕ್ಷ ಐತಪ್ಪ ವರ್ಕಾಡಿ ಉಪಸ್ಥಿತರಿದ್ದರು.
ಬೇಬಿ ಮಧುವನ, ಪ್ರತೀಕ್ಷಾ ಶಂಕರನಾರಾಯಣ ಹಬ್ಬದ ದೀಪ ಪ್ರಜ್ವಲನ ಮಾಡಿದರು. ಗೌರಿ ಪಾದೂರು, ಭಾರತಿ ಕಾಪು ಹಬ್ಬದ ಸವಿ ಜೇನು ವಿತರಿಸಿದರು. ಸುಶ್ವಿತಾ ತಂಡದವರಿಂದ ಧ್ಯೇಯಗೀತೆ ನಡೆಯಿತು. ಅಪರಾಹ್ನ ನಡೆದ ಸಾಂಸ್ಕೃತಿಕ ಅಭಿವ್ಯಕ್ತಿ ಕಾರ್ಯಕ್ರಮದಲ್ಲಿ ಡೋಲು ವಾದನ, ಡೋಲು ಕುಣಿತ, ಹಾಡುಗಳು, ಪ್ರಹಸನ, ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು.
ಕೊರಗ ಮುಖಂಡ ಮೋಹನ್ ಅಡ್ವೆ ಗಿಡ ನೆಟ್ಟು ಪರಿಸರ ಕಾಳಜಿಯ ಸಂದೇಶ ನೀಡಿದರು. ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ ಸ್ವಾಗತಿಸಿದರು. ಸುಪ್ರಿಯಾ ಕಿನ್ನಿಗೋಳಿ ವಂದಿಸಿದರು. ಸುರೇಂದ್ರ ಕಳ್ತೂರು ಹಾಗೂ ವಿಮಲಾ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನಾ ಶಿರ್ವ ಕೆನರಾ ಬ್ಯಾಂಕ್ ಸಮೀಪದ ರೋಟರಿ ಸರ್ಕಲ್ ಭಾಗದಿಂದ ಶಿರ್ವ ಪೇಟೆಯ ಮೂಲಕ ಪೆರ್ನಾಲ್ ಆದಿವಾಸಿ ಜೀವನ ಶಿಕ್ಷಣ ಕೇಂದ್ರದವರೆಗೆ ನಡೆದ ಆಕರ್ಷಕ ಜಾಥಾಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿ, ಶುಭ ಹಾರೈಸಿದರು.