ಪರಶುರಾಮನ ನಕಲಿ ಮೂರ್ತಿ ಅಳವಡಿಸಿ ಜನರಿಗೆ ಮೋಸ ಮಾಡಿದವರ ವಿರುದ್ಧ ನಮ್ಮ ಹೋರಾಟ: ಸುನೀಲ್ ಕುಮಾರ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಕಾರ್ಕಳ: ಕಾಂಗ್ರೆಸ್ ಯಾವತ್ತೂ ಪರಶುರಾಮ ಥೀಮ್ ಪಾರ್ಕ್ ಅಥವಾ ಪರಶುರಾಮ ಮೂರ್ತಿ ಸ್ಥಾಪನೆಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ನಮ್ಮ ವಿರೋಧ ಏನಿದ್ದರೂ ಫೈಬರ್ ಗ್ಲಾಸ್ ನಕಲಿ ಮೂರ್ತಿ ಅಳವಡಿಸಿ ಜನರಿಗೆ ಮೋಸ, ದ್ರೋಹ ಮಾಡಿದವರ ವಿರುದ್ಧ ಆಗಿದೆ ಎಂದು ಕಾರ್ಕಳ ಪುರಸಭಾ ಸದಸ್ಯ, ಕಾಂಗ್ರೆಸ್ ವಕ್ತಾರ ಶುಭದ ರಾವ್ ಹೇಳಿದ್ದಾರೆ.
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ(ರಿ) ಇದರ ಆಶ್ರಯದಲ್ಲಿ ಬೈಲೂರು ಮಾರಿಗುಡಿ ಸಭಾಂಗಣದಲ್ಲಿ ಆಯೋಜಿಸಲಾದ ಪರಶುರಾಮನ ನೈಜ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಸಂಕಲ್ಪ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ನೈಜ ಕಂಚಿನ ಪ್ರತಿಮೆ ನಿರ್ಮಾಣ ಮತ್ತು ಇದರ ಹಿಂದಿರುವ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವುದೇ ನಮ್ಮ ಉದ್ದೇಶವಾಗಿದೆ ಎನ್ನುತ್ತಾ ವಿಡಿಯೋ ಮೂಲಕ ಪರಶುರಾಮ ಥೀಮ್ ಪಾರ್ಕ್ ಹಾಗೂ ಪರಶುರಾಮ ಮೂರ್ತಿ, ಸರಕಾರ, ಜಿಲ್ಲಾಡಳಿತ, ಗ್ರಾಮ ಪಂಚಾಯತ್ ಮಧ್ಯೆ ನಡೆದ ಪತ್ರ ವ್ಯವಹಾರ, ಕೋರ್ಟ್ ಆದೇಶದ ಬಗ್ಗೆ ಸಭೆಗೆ ವಿಸ್ತೃತ ಮಾಹಿತಿ ನೀಡಿದರು.
“ನನ್ನ ಬಳಿ 65 ಶಾಸಕರಿದ್ದಾರೆ. ನಾನು ಮನಸ್ಸು ಮಾಡಿದರೆ ಅವರನ್ನು ಪರಶುರಾಮ ಬೆಟ್ಟಕ್ಕೆ ಕರೆತರುತೇನೆ ಎಂದು ಬೊಗಳೆ ಬಿಡುವ ನೀವು ಅವರನ್ನು ಇಲ್ಲಿಗೆ ಕರೆತರುವುದು ಬೇಡ. ನಾನೇ ಬೆಂಗಳೂರಿಗೆ ದಾಖಲೆಗಳೊಂದಿಗೆ ಬಂದು ನಿಮಗೆ ವಿವರಣೆ ನೀಡುತ್ತೇನೆ. ನಿಮಗೆ ಸತ್ಯ ಮಾತನಾಡುವ ಧೈರ್ಯ ಇದೆಯಾ?” ಎಂದು ಶಾಸಕ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ಜಿಲ್ಲಾ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ( ರಿ) ಗೌರವಾಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಹಿರಿಯ ಕಾಂಗ್ರೆಸ್ ಮುಖಂಡ ಕರುಣಾಕರ್ ಹೆಗ್ಡೆ ಬೈಲೂರು, ಜ್ಯೋತಿ ಹೆಬ್ಬಾರ್, ವಿಶ್ವಾಸ್ ಅಮೀನ್, ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಭೋಜ ಶೆಟ್ಟಿ ಯರ್ಲಪಾಡಿ ಸುನಂದಾ ನಾಯಕ್, ಆಶಾ ಬೈಲೂರು, ಮಾಜಿ ಪುರಸಭಾ ಅಧ್ಯಕ್ಷ ಸುಬಿತ್ ಎನ್. ಆರ್ ಉಪಸ್ಥಿತರಿದ್ದರು.