ಕಸ್ತೂರಿ ರಂಗನ್ ವರದಿಗೆ ಮರು ಸರ್ವೆ ನಡೆಸಿ ಜನವಸತಿ ಪ್ರದೇಶಗಳನ್ನು ಕೈಬಿಡಿ: ಹಳ್ಳಿಹೊಳ್ಳೆ ಗ್ರಾಮ ಹಿತರಕ್ಷಣಾ ಸಮಿತಿ ಆಗ್ರಹ
ಉಡುಪಿ: ಅವೈಜ್ಞಾನಿಕವಾಗಿ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಸರ್ವೆ ನಡೆಸಿ ನೀಡಿರುವ ಕಸ್ತೂರಿರಂಗನ್ ವರದಿಗೆ ಮರು ಸರ್ವೆ ನಡೆಸಿ ಜನವಸತಿ ಪ್ರದೇಶಗಳನ್ನು ಅದರಿಂದ ಹೊರಗಿಡಬೇಕು ಎಂದು ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮಂಜುನಾಥ ಶೆಟ್ಟಿ ಹೇಳಿದ್ದಾರೆ.
ಕಳೆದ ಸೆ.25ರಂದು ಸುನಂದಾ ಗೇರುಬೀಜ ಕಾರ್ಖಾನೆಯ ಬಳಿಯ ಸುಳುಗೋಡು ಚಕ್ರಮೈದಾನದಲ್ಲಿ ಗ್ರಾಮ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಹಳ್ಳಿಹೊಳೆ ಹಾಗೂ ಆಸುಪಾಸಿನ ಗ್ರಾಮಗಳ ಗ್ರಾಮಸ್ಥರ ಬೃಹತ್ ಪ್ರತಿಭಟನಾ ಸಭೆಯ ವಿವರ ಹಾಗೂ ಕೈಗೊಳ್ಳಲಾದ ನಿರ್ಣಯಗಳ ಮನವಿ ಪತ್ರವನ್ನು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರಿಗೆ ನೀಡಿದ ಬಳಿಕ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೬೫೦ ಕುಟುಂಬಗಳು ವಾಸವಾಗಿದ್ದು, ಸುಮಾರು ೩೦೦೦ ಜನಸಂಖ್ಯೆ ಇದೆ. ಇಲ್ಲಿನ ಪ್ರತಿ ಕುಟುಂಬವೂ ಈ ವರದಿಯಿಂದ ಬಾಧಿತವಾಗಲಿದೆ. ಹಳ್ಳಿಹೊಳೆಯ ಜನವಸತಿ ಪ್ರದೇಶವನ್ನು ಮ್ಯಾನುವೆಲ್ ಸರ್ವೆ ಮುಖಾಂತರ ಮರು ಸಮೀಕ್ಷೆಗೊಳಪಡಿಸಿ ಇಡೀ ಗ್ರಾಮವನ್ನು ವನ್ಯಜೀವಿ ಅಭಯಾರಣ್ಯ, ಪರಿಸರ ಸೂಕ್ಷ್ಮ ಪ್ರದೇಶದ (ವೈಲ್ಡ್‌ಲೈಫ್ ಸ್ಯಾಂಚೂರಿ, ಇಕೋ ಸೆನ್ಸಿಟಿವ್ ಝೋನ್) ವ್ಯಾಪ್ತಿಯಿಂದ ಕೈಬಿಡುವ ಬಗ್ಗೆ ಅಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದವರು ವಿವರಿಸಿದರು.
ಹಳ್ಳಿಹೊಳೆ ಗ್ರಾಪಂನ ಹಳ್ಳಿಹೊಳೆ ಗ್ರಾಮದ ಸುಮಾರು 4358.19 ಎಕರೆ ಭೂಮಿ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ ಎಂದವರು ಹೇಳಿದರು.
ಇಲ್ಲಿನ ಜನವಸತಿ ಪ್ರದೇಶವನ್ನು ಮ್ಯಾನುವೆಲ್ ಸರ್ವೆ ಮೂಲಕ ಮರು ಸಮೀಕ್ಷೆ ನಡೆಸಿ ಹಳ್ಳಿಹೊಳೆ ಗ್ರಾಮದ ಒಟ್ಟು 7240.50 ಎಕರೆ ಪ್ರದೇಶವನ್ನು ನವ್ಯಜೀವಿ ಅಭಯಾರಣ್ಯ ಹಾಗೂ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಕೈಬಿಡಬೇಕೆಂದು ಸೆ.೨೫ರ ಸಭೆಯಲ್ಲಿ ಜನಾಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಗ್ರಾಮ ಹಿತರಕ್ಷಣಾ ಸಮಿತಿಯ ಸದಸ್ಯರಾಗಿರುವ ಮಾಜಿ ಗ್ರಾಪಂ ಅಧ್ಯಕ್ಷ ಪ್ರದೀಪ್ ಕೊಠಾರಿ ತಿಳಿಸಿದರು.
ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕುಂದಾಪುರ ತಾಲೂಕಿನ 35 ಗ್ರಾಮಗಳ ಜನರು ಈ ವರದಿಯಿಂದ ಸಮಸ್ಯೆ ಎದುರಿಸಲಿದೆ. ಎಲ್ಲಾ ಗ್ರಾಮಗಳಲ್ಲೂ ಈಗ ಜನ ಎಚ್ಚೆತ್ತಿದ್ದು, ಅವೈಜ್ಞಾನಿಕವಾಗಿ ತಯಾರಿಸಲಾದ ವರದಿಯ ಅಂಶಗಳನ್ನು ವಿರೋಧಿಸುತಿದ್ದಾರೆ. ಜಡ್ಕಲ್, ಮುಧೂರು, ಗೋಳಿಹೊಳೆ, ಎಡಮೊಗೆ, ಚಿತ್ತೂರು ಮುಂತಾದ ಕಡೆಗಳಲ್ಲಿ ಜನ ವಿರೋಧಿಸುತಿದ್ದಾರೆ ಎಂದರು.
ಈ ಬಗ್ಗೆ ನಾವು ಈಗಾಗಲೇ ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳಿಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ನಾವು ಪಕ್ಷಾತೀತ ಹಾಗೂ ಧರ್ಮಾತೀತವಾಗಿ ಹೋರಾಟ ನಡೆಸಿದ್ದು, ನಮ್ಮ ವಿರೋಧವನ್ನು ಕಡೆಗಣಿಸಿ ವರದಿ ಜಾರಿಗೆ ಮುಂದಾದರೆ ಜಿಲ್ಲೆಯ ಎಲ್ಲಾ ಸಂತ್ರಸ್ಥ ಗ್ರಾಮ ಗಳೊಂದಿಗೆ ಸೇರಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಪ್ರಭಾಕರ ನಾಯಕ್, ಜಯರಾಮ ಪೂಜಾರಿ, ಸುರೇಶ್ ಪೂಜಾರಿ, ಸುಜಾತ ಭೋವಿ, ನೇತ್ರಾವತಿ ನಾಯಕ್, ಬಿನ್ ಕೆ.ಜೋಸ್, ಕೃಷ್ಣ ನಾಯಕ್, ದಿನೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.