ಲೈಫ್ ಟ್ಯಾಕ್ಸ್ ಆದೇಶ ಹಿಂಪಡೆಯಲು ಲಾರಿ, ಟೆಂಪೋ ಮಾಲಕರ ಮನವಿ

Update: 2023-08-28 15:47 GMT

ಉಡುಪಿ, ಆ.28: ಗೂಡ್ಸ್ ವಾಹನಗಳಿಗೆ ಒಂದೇ ಬಾರಿಗೆ ಲೈಫ್ ಟ್ಯಾಕ್ಸ್‌ನ್ನು ಭರಿಸುವ ಆದೇಶವನ್ನು ರಾಜ್ಯ ಸರಕಾರ ದಿಢೀರ್ ಹೊರಡಿಸಿದ್ದು, ಇದರಿಂದ ಲಾರಿ ಟೆಂಪೋ ಮಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಲೈಫ್ ಟ್ಯಾಕ್ಸ್‌ನ್ನು ಒಂದೇ ಕಂತಿನಲ್ಲಿ ಕಟ್ಟುವ ಆದೇಶ ಹಾಗೂ ಖನಿಜ ಮತ್ತು ಉಪಖನಿಜ ಸಾಗಾಟ ವಾಹನಗಳಿಗೆ ಜಿಪಿಎಸ್‌ನ್ನು ಹೊಸದಾಗಿ ಅಳವಡಿಸುವ ಸರಕಾರದ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ಅವರು ಒತ್ತಾಯಿಸಿದರು.

ಕರಾವಳಿ ಭಾಗದಲ್ಲಿ ವಿಪರೀತ ಮಳೆಯ ಈ ಕಾಲದಲ್ಲಿ ನಮಗೆ ಯಾವುದೇ ಕೆಲಸವಿರುವುದಿಲ್ಲ. ಇದು ನಮಗೆ ತೀವ್ರ ಸಂಕಷ್ಟದ ಕಾಲ. ಆದರೆ ಸರಕಾರ ಇದೀಗ ದಿಢೀರನೆ ಒಂದೇ ಬಾರಿಗೆ ಲೈಫ್ ಟ್ಯಾಕ್ಸ್‌ನ್ನು ಕಟ್ಟುವ ಆದೇಶ ನೀಡಿದೆ. ಸರಕಾರದ ಈ ಆದೇಶದಿಂದ ಸಂಪಾದನೆ ಇಲ್ಲದೇ ಕಂಗಾಲಾಗಿರುವ ಲಾರಿ ಟೆಂಪೋ ಮಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದವರು ತಿಳಿಸಿದರು.

ಲಾರಿ ಟೆಂಪೊ ಮಾಲಕರಿಗೆ ಯಾವುದೇ ಮಾಹಿತಿ ನೀಡದೇ ಬಂದಿರುವ ಈ ಆದೇಶವನ್ನು ಹಿಂದಕ್ಕೆ ಪಡೆದು ಲೈಫ್ ಟ್ಯಾಕ್ಸ್ ಕಟ್ಟಲು ಕಾಲಾವಕಆಶ ನೀಡಬೇಕೆಂದು ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡದೇ ಒನ್ ಸ್ಟೇಟ್ ಒನ್ ಜಿಪಿಎಸ್ ಅಡಿಯಲ್ಲಿ ಖನಿಜ ಹಾಗೂ ಉಪಖನಿಜ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿಕೊಳ್ಳಬೇಕು ಎಂದು ಮತ್ತೊಂದು ಆದೇಶ ಹೊರಡಿಸಲಾಗಿದೆ.

ವಾಹನಗಳಿಗೆ ಜಿಪಿಎಸ್ ಅಳವಡಿಸುವ ಅಗತ್ಯ ವಾಹನ ಮಾಲಕರಿಗಿಂತ ಹೆಚ್ಚಾಗಿ ಸರಕಾರಕ್ಕಿರುವುದರಿಂದ, ಅದು ಹೆಚ್ಚು ವರಮಾನ ಹಾಗೂ ಲಾಭವನ್ನು ತರುವುದರಿಂದ ಸಂಬಂಧಪಟ್ಟ ಇಲಾಖೆಯೇ ವಾಹನ ಮಾಲಕರಿಗೆ ಮಾಹಿತಿ ನೀಡಿ ಸರಕಾರದ ಖರ್ಚಿನಲ್ಲಿ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಅದರ ನಿರ್ವಹಣೆಯನ್ನೂ ಜಿಲ್ಲಾಡಳಿತವೇ ನಿರ್ವಹಿಸಬೇಕೆಂದು ಅವರು ಒಕ್ಕೂಟದ ಪರವಾಗಿ ಮನವಿ ಮಾಡಿದರು.

ನಮ್ಮ ಮನವಿಗೆ ಯಾವುದೇ ಸಕಾರಾತ್ಮಕ ಸ್ಪಂಧನೆ ಬಾರದಿದ್ದರೆ, ಕಾನೂನು ಹೋರಾಟ ನಡೆಸುವ ಬಗ್ಗೆ ನಾವು ಚಿಂತನೆ ನಡೆಸಲಿದ್ದೇವೆ ಎಂದು ರಾಘವೇಂದ್ರ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ರಂಜಿತ್ ಶೆಟ್ಟಿ, ಹರೀಶ್ ಕೋಟ್ಯಾನ್, ಅಶೋಕ್ ಕುಲಾಲ್, ಮನೋಹರ ಕುಂದರ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News