ಸಾರ್ವಜನಿಕರಿಂದ ಸಿಎಂ ಸಿದ್ದರಾಮಯ್ಯ ಅಹವಾಲು ಸ್ವೀಕಾರ: ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು ಒದಗಿಸಲು ಮನವಿ

Update: 2023-08-01 11:37 GMT

ಉಡುಪಿ: ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಇಂದು ಭೇಟಿ ನೀಡಿದ ಸಿದ್ದರಾಮಯ್ಯ, ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೂರಾರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಉಡುಪಿ ಕರಾವಳಿ ಯೂತ್ ಕ್ಲಬ್ ನಿಯೋಗವು ಉಡುಪಿ ಜಿಲ್ಲೆಗೆ ಖಾಸಗಿ ಸಹಭಾಗಿತ್ವದ ಸರಕಾರಿ ವೈದ್ಯಕೀಯ ಕಾಲೇಜಿನ ಬದಲು ಸರಕಾರಿ ವೈದ್ಯಕೀಯ ಕಾಲೇಜು ಒದಗಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಜಿಲ್ಲೆಯಾಗಿ 25 ವರ್ಷಗಳು ಕಳೆದರು ಜಿಲ್ಲೆಗೆ ಒಂದು ಸರಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು ದುರಂತ. ನಮ್ಮ ಜಿಲ್ಲೆ ಸ್ಥಾಪನೆಯಾದ ಸಂದರ್ಭ ದಲ್ಲಿಯೇ ರಚಿತವಾದ ಕೊಪ್ಪಳದಲ್ಲಿ 2013ರಲ್ಲಿಯೇ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ. ಆದರೆ ಉಡುಪಿ ಜಿಲ್ಲೆಗೆ ಈ ಭಾಗ್ಯ ಲಭ್ಯವಾಗಿಲ್ಲ. ಉಡುಪಿ ಜಿಲ್ಲೆಯ ಜನತೆಗೆ ಬೇಕಾಗಿರುವುದು ಸರಕಾರಿ ಸೌಲಭ್ಯವಿರುವ ಸರಕಾರಿ ವೈದ್ಯಕೀಯ ಕಾಲೇಜು ಹೊರತು ಪಿಪಿಪಿ ಅಂದರೆ ಖಾಸಗಿ ಸಹಭಾಗಿತ್ವದ ಸರಕಾರಿ ವೈದ್ಯಕೀಯ ಕಾಲೇಜು ಅಲ್ಲವೇ ಅಲ್ಲ. ಆದುದರಿಂದ ಬಡವರ ಹಿತದೃಷ್ಟಿಯಲ್ಲಿ ವಿಶೇಷ ನಿರ್ಧಾರ ತೆಗೆದುಕೊಂಡು ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಅಶೋಕ್, ಸಂದೇಶ್ ಶೆಟ್ಟಿ ನಿತೀನ್, ಸತ್ಯ ದೇವಾಡಿಗ ಉಪಸ್ಥಿತರಿದ್ದರು.

ಅದೇ ರೀತಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ನೇತೃತ್ವ ದಲ್ಲಿಯೂ ಸಿಎಂಗೆ ಮನವಿ ಸಲ್ಲಿಸಲಾಯಿತು. ಅದೇ ರೀತಿ ಹಲವು ಸಂಘಸಂಸ್ಥೆಗಳು, ಸಂಘಟನೆಗಳು ಸಾಮಾಜಿಕ ಸಮಸ್ಯೆ ಪರಿಹರಿಸುವಂತೆ ಮತ್ತು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ತಮ್ಮ ವೈಯಕ್ತಿಕ ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಮಾಂಕಳ ವೈದ್ಯ, ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮೊದಲಾದವರು ಹಾಜರಿದ್ದರು. ಸಿಎಂ ಕಾರ್ಯ ಕ್ರಮದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News