ಸರಕಾರಿ ಶಾಲೆ ಉಳಿಸುವ ಜವಾಬ್ದಾರಿ ಶಿಕ್ಷಕರ ಜೊತೆ ಪೋಷಕರದ್ದು: ಕೊಡ್ಗಿ
ಕುಂದಾಪುರ: ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರಕಾರಿ ಶಾಲೆಗಳನ್ನು ಉಳಿಸುವ ಮಹತ್ತರ ಜವಬ್ದಾರಿ ಶಿಕ್ಷಕರ ಜೊತೆಗೆ ಪೋಷಕರದ್ದಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸರಕಾರಿ ಕನ್ನಡ ಶಾಲೆಗೆ ಸೆಳೆಯುವ ಕೆಲಸವಾಗಬೇಕಾಗಿದೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಬಡಾಕೆರೆ-ಹಂಗಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ತರಗತಿಗಳ ಕೋಣೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇದೇ ವೇಳೆ ಕಟ್ಟಡ ಕಾಮಗಾರಿ ಗುತ್ತಿಗೆದಾರ ಸತ್ಯನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಇಲಾಖೆಯ ಶೂಭಾಗ್ಯದ ಶೂ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಹಂಗಳೂರು ಗಾಪಂ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಸತೀಶ್ ಶೇರಿಗಾರ್, ಮಾಜಿ ಅಧ್ಯಕ್ಷ ಆನಂದ ಪೂಜಾರಿ, ಸದಸ್ಯರಾದ ಸುಧಾಕರ್ ಪೂಜಾರಿ, ರೋಶನ್ ಬರೆಟ್ಟೋ, ಜನೇಟಾ ಮೆಂಡೊನ್ಸಾ, ಶಾಲಾ ಅಭಿವೃದ್ಧಿ ಅಧ್ಯಕ್ಷ ರವೀಂದ್ರ ಆಚಾರ್ಯ, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.
ತಾಪಂ ಮಾಜಿ ಸದಸ್ಯ ಮಂಜು ಬಿಲ್ಲವ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಟಿ. ಸೀತಾರಾಮ್ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಶ್ಯಾಮಲಾ ಕೆ. ವಂದಿಸಿದರು.