ಶಿರ್ವ: ತ್ಯಾಜ್ಯ ಸುರಿದ ವ್ಯಕ್ತಿಯಿಂದಲೇ ತೆರವುಗೊಳಿಸಿದ ಗ್ರಾಪಂ ಅಧ್ಯಕ್ಷೆ!
ಶಿರ್ವ: ಇನ್ನಂಜೆ ಗ್ರಾಪಂ ವ್ಯಾಪ್ತಿಯ ಮರ್ಕೋಡಿ ಎಂಬಲ್ಲಿ ಹೊಳೆ ಬದಿಗೆ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ತೆರವುಗೊಳಿಸಿ ರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಮನೆಯ ತ್ಯಾಜ್ಯವನ್ನು ಬಾಡಿಗೆ ವಾಹನದಲ್ಲಿ ತಂದು ಸುರಿದು ಹೋಗಿರುವ ಬಗ್ಗೆ ಸ್ಥಳೀಯರು ಗ್ರಾಪಂ ಗಮನಕ್ಕೆ ತಂದಿದ್ದು, ಗ್ರಾಪಂ ಅಧ್ಯಕ್ಷೆ ಮಾಲಿನಿ ಶೆಟ್ಟಿ ಸಹಿತ ಆ ಭಾಗದ ವಾರ್ಡ್ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಎಸೆದ ಕಸದಲ್ಲಿದ್ದ ಕಾಗದ, ಪಾರ್ಸೆಲ್‌ಗಳ ಮೇಲಿನ ವಿಳಾಸ ಹಾಗೂ ಮೊಬೈಲ್ ನಂಬರ್‌ಗೆ ಕರೆ ಮಾಡಿದರು.
ಕಸ ಎಸೆದ ಕಟಪಾಡಿ ಮೂಲದ ಮನೆಯ ಮಾಲಿಕರನ್ನು ಪತ್ತೆ ಹಚ್ಚಿ, ಈ ಬಗ್ಗೆ ಕಾಪು ಪೋಲಿಸ್ ಠಾಣೆಗೆ ಗ್ರಾಪಂ ಅಧ್ಯಕ್ಷರು ದೂರು ನೀಡಿದರು. ಸಂಜೆಯ ವೇಳೆಗೆ ತ್ಯಾಜ್ಯ ಎಸೆದ ವ್ಯಕ್ತಿಯಿಂದಲೇ ತೆರವುಗೊಳಿಸಿ, ವಾಹನಕ್ಕೆ ತುಂಬಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು. ಎಸೆದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಲಕೋಟೆಗಳು, ಮನೆಯ ಕಸ, ಬಿಯರ್ ಬಾಟಲ್, ಒಳ ಉಡುಪು ಸಹಿತ ಇನ್ನಿತರ ವಸ್ತುಗಳಿದ್ದವು.
ಈ ಸಂದರ್ಭ ಇನ್ನಂಜೆ ಗ್ರಾಪಂ ಸದಸ್ಯರಾದ ನಿಕೇಶ್, ದ್ವಿವೇಶ್ ಕಾಪು ಪೋಲಿಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳೀಯ ಸಮಾಜ ಸೇವಕರಾದ ಉಮೇಶ್ ಅಂಚನ್, ವರುಣ್ ಶೆಟ್ಟಿ, ರಮೇಶ್ ಮೊದಲಾದವರು ಹಾಜರಿದ್ದರು.
"ಇನ್ನಂಜೆ ಗ್ರಾಪಂ ವ್ಯಾಪ್ತಿಯ ಮರ್ಕೋಡಿ ಹೊಳೆ ಪರಿಸರದಲ್ಲಿ ಹಾಗೂ ಒಳ ಭಾಗದ ರಸ್ತೆಯ ಬದಿಗಳಲ್ಲಿ ಹೊರ ಗ್ರಾಮ ಗಳಿಂದ ಮನೆಯ ತ್ಯಾಜ್ಯ, ಕೆಟರಿಂಗ್ ತ್ಯಾಜ್ಯ, ಮಾಂಸ, ಕೋಳಿಗಳ ತ್ಯಾಜ್ಯ ಎಸೆಯುತ್ತಿರುವ ಘಟನೆಗಳು ತಡೆಯುವಲ್ಲಿ ಗ್ರಾಪಂ ನಿರಂತರವಾಗಿ ಹೋರಾಡುತ್ತಿದೆ. ಎಸೆದವರನ್ನು ಹುಡುಕಿ 5 ಸಾವಿರ ರೂ. ದಂಡ ವಿಧಿಸಿ, ಅವರಿಂದಲೇ ವಿಲೇವಾರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಆದರೂ ವಿದ್ಯಾವಂತರಲ್ಲಿಯೇ ಇನ್ನೂ ಜಾಗೃತಿ ಮೂಡದಿರುವುದು ಹಾಗೂ ಇಂತಹ ಘಟನೆ ಮುರುಕಳಿಸುತ್ತಿರುವುದು ಬೇಸರ ತಂದಿದೆ".
-ಮಾಲಿನಿ ಶೆಟ್ಟಿ, ಅಧ್ಯಕ್ಷರು, ಇನ್ನಂಜೆ ಗ್ರಾಪಂ