ಶಾಂತಿ ಕಾಪಾಡಬೇಕಾದ ಪ್ರಧಾನಿಯಿಂದ ಜನಾಂಗೀಯ ದ್ವೇಷದ ಹೇಳಿಕೆ ಅಪಾಯಕಾರಿ: ವೀರಪ್ಪ ಮೊಯ್ಲಿ

Update: 2024-04-22 08:05 GMT

ಉಡುಪಿ, ಎ.22: ಭಾರತದಲ್ಲಿ 20 ಕೋಟಿ ಜನಸಂಖ್ಯೆ ಇರುವ ಮುಸ್ಲಿಮ್ ಜನಾಂಗದ ವಿರುದ್ಧ ದೇಶದ ಪ್ರಧಾನಿ ನರೇಂದ್ರ ಮೋದಿ ದ್ವೇಷದ ಜ್ವಾಲೆಯನ್ನೇ ಹರಿದುಬಿಟ್ಟಿದ್ದಾರೆ. ದೇಶದ ಶಾಂತಿ ನೆಮ್ಮದಿ ಕಾಪಾಡಬೇಕಾದ ಒಬ್ಬ ಪ್ರಧಾನಿ, ಜನಾಂಗ ದ್ವೇಷ ಹರಡುವ ಕೆಲಸ ಮಾಡುತ್ತಿರುವುದು ಅಪಾಯಕಾರಿ. ಸರ್ವಾಧಿಕಾರ ಆಡಳಿತದಲ್ಲಿ ಮಾತ್ರ ಇಂತಹ ಹೇಳಿಕೆ ಬರಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾಂಗೀಯ ದ್ವೇಷದಿಂದ ಆ ವ್ಯಕ್ತಿಗಳು ಹಾಗೂ ಇಡೀ ದೇಶವೇ ನಾಶವಾಗುತ್ತದೆ. ನರೇಂದ್ರ ಮೋದಿಯ ಈ ನಡೆ ದೇಶಕ್ಕೆ ಒಳ್ಳೆಯದಲ್ಲ. 2014ರಲ್ಲಿ ಡಾ.ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಆರೋಪ ಮಾಡಿ, 2019ರಲ್ಲಿ ದೇಶಭಕ್ತಿ ಭಾವನೆ ಪ್ರಚೋದಿಸಿ ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಇವರು ಅಧಿಕಾರಕ್ಕೆ ಬಂದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಂತಹ ಯಾವುದೇ ಗಿಮಿಕ್ ನಡೆಯುವುದಿಲ್ಲ. ಅದಕ್ಕಾಗಿ ಹತಾಶ ಭಾವನೆಯಿಂದ ಬಾಯಿಗೆಬಂದ ಹೇಳಿಕೆಗಳನ್ನು ಮೋದಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದ ಜನತೆಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಹತಾಶ ಭಾವನೆ ಮೂಡುತ್ತಿದೆ. ಇದರ ಪರಿಣಾಮ ನಾಗಲ್ಯಾಂಡ್ನಲ್ಲಿ ನಾಲ್ಕು ಲಕ್ಷ ಮಂದಿ ಚುನಾವಣಾ ಬಹಿಷ್ಕಾರ ಮಾಡಿದರು. ಜನತೆಯ ಹೃದಯದಲ್ಲಿ ಒಂದು ರೀತಿಯ ಲಾವರಸದ ಒಳ ಹರಿಯುತ್ತಿದೆ. ಆ ಲಾವರಸ ಈ ಬಾರಿಯ ಚುನಾವಣೆಯಲ್ಲಿ ಜ್ವಾಲಮುಖಿಯಾಗಿ ಸ್ಫೋಟಗೊಳ್ಳಲಿದೆ ಎಂದು ಮೊಯ್ಲಿ ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆ ನಡೆಸಲು 60 ದಿನಗಳನ್ನು ತೆಗೆದುಕೊಂಡ ಇವರು, ಇನ್ನು ಒಂದು ದೇಶ ಒಂದು ಚುನಾವಣೆ ಮಾಡಲು ಒಂದು ವರ್ಷವೇ ಬೇಕಾದೀತು. ಈ ಎಲ್ಲ ಗೊಂದಲಗಳಿಂದ ಕೂಡಿರುವ ಈ ಕಲ್ಪನೆ ಅನುಷ್ಠಾನಗೊಳಿಸುವುದು ಅಷ್ಟು ಸುಲಭ ಅಲ್ಲ. ಅದಕ್ಕಾಗಿ ಸಂವಿಧಾನ ತಿದ್ದುಪಡಿ ಮತ್ತು ಸಾಕಷ್ಟು ಆಡಳಿತದಲ್ಲಿ ಸುಧಾರಣೆ ಆಗಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇಂದು ಪ್ರಜಾಪ್ರಭುತ್ವದ ಧ್ವನಿ ಕ್ಷೀಣ ಆಗುತ್ತಿದೆ. ಈ ದೇಶಕ್ಕೆ ದಕ್ಷತೆಯಿಂದ ಕೆಲಸ ಮಾಡುವ ಉತ್ತಮ ಆಡಳಿತಗಾರ ಬೇಕೇ ಹೊರತು ಕಮಿಂಟಿಯೇಟರ್ ಅಲ್ಲ. ಮೋದಿ ಈಗ ಎನ್ ಡಿಎ, ಬಿಜೆಪಿ ಬಿಟ್ಟು 'ಮೋದಿ ಗ್ಯಾರಂಟಿ' ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಈ ಬಗ್ಗೆ ಈಗಾಗಲೇ ಜನ ಎಚ್ಚೆತ್ತುಕೊಂಡಿದ್ದಾರೆ. ಇವರು 400 ಅಲ್ಲ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ನಟ ಶಿವರಾಜ್ ಕುಮಾರ್, ಮುಖಂಡರಾದ ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಅಶೋಕ್ ಕುಮಾರ್ ಕೊಡವೂರು, ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಡಿ.ಆರ್.ರಾಜು, ಭಾಸ್ಕ ರಾವ್ ಕಿದಿಯೂರು, ನವೀನ್ ಶೆಟ್ಟಿ ಉಪಸ್ಥಿತರಿದ್ದರು.

‘ಮುಖ್ಯಮಂತ್ರಿ ಅವಕಾಶವನ್ನು ನಿರಾಕರಿಸಿದ್ದ ನಟ ರಾಜಕುಮಾರ್’

‘ಅಂದು ಆಂಧ್ರ ಪ್ರದೇಶದಲ್ಲಿ ಎನ್.ಟಿ.ರಾಮ ರಾವ್, ತಮಿಳುನಾಡಿನಲ್ಲಿ ಎಂಜಿಆರ್ ರಾಜಕೀಯಕ್ಕೆ ಬಂದಿದ್ದರು. ಅದೇ ರೀತಿ ಕರ್ನಾಟಕದಲ್ಲೂ ಡಾ.ರಾಜಕುಮಾರ್ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತುಗಳಿದ್ದವು. ಅದಕ್ಕಾಗಿ ನಾವು ಡಾ.ರಾಜಕುಮಾರ್ ಹಾಗೂ ಪಾವರ್ತಮ್ಮರನ್ನು ದಿಲ್ಲಿಗೆ ಕರೆದುಕೊಂಡು ಹೋಗಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿಸಿದ್ದೇವು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಶಿವರಾಜ್ ಕುಮಾರ್ ಉಪಸ್ಥಿತಿಯಲ್ಲಿ ಈ ಹಳೆಯ ನೆನಪನ್ನು ಸ್ಮರಿಸಿದರು.

‘ಆದರೆ ಡಾ.ರಾಜಕುಮಾರ್ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿ ಈ ಅವಕಾಶವನ್ನು ನಯವಾಗಿ ನಿರಾಕರಿಸಿದರು. ಒಂದು ವೇಳೆ ರಾಜಕುಮಾರ್ ಅವತ್ತು ರಾಜಕೀಯಕ್ಕೆ ಬರುತ್ತಿದ್ದರೆ ಇಂದಿಗೂ ಕರ್ನಾಟಕದ ರಾಜಕೀಯದಲ್ಲಿ ರಾರಾಜಿಸುತ್ತಿರುತ್ತಿದ್ದರು. ಬಳಿಕ ರಾಜ್ಯಸಭಾ ಸದಸ್ಯತ್ವ ಸ್ವೀಕರಿಸುವಂತೆ ಇಂದಿರಾ ಗಾಂಧಿ ಕೇಳಿಕೊಂಡರು. ಅದನ್ನು ಕೂಡ ನಯವಾಗಿ ತಿರಸ್ಕರಿಸಿದ ತ್ಯಾಗಜೀವಿ ಡಾ.ರಾಜಕುಮಾರ್ ಎಂದು ಮೊಯ್ಲಿ ಹೇಳಿದರು.

‘ಅಪ್ಪಾಜಿಗೆ ವೈಯಕ್ತಿಕವಾಗಿ ರಾಜಕೀಯ ಇಷ್ಟ ಇರಲಿಲ್ಲವೇ ಹೊರತು ಆಸಕ್ತಿ ಇದ್ದವರಿಗೆ ರಾಜಕೀಯಕ್ಕೆ ಹೋಗಲೇ ಬೇಡ ಎಂದವರಲ್ಲ. ಅವರಿಗೆ ರಾಜಕೀಯ ಇಷ್ಟ ಇಲ್ಲದಿದ್ದರೆ ಯಾಕೆ ಓಟು ಹಾಕುತ್ತಿದ್ದರು. ಅದೇರೀತಿ ಅವರಿಗೆ ರಾಜಕೀಯ ಹಿನ್ನೆಲೆಯೇ ಬೇಡದಿದ್ದರೆ ರಾಜಕೀಯ ಧುರೀಣ ಬಂಗಾರಪ್ಪರ ಮನೆಯಿಂದ ಹೆಣ್ಣು ಯಾಕೆ ತರಬೇಕಿತ್ತು?’

-ಶಿವರಾಜ್ ಕುಮಾರ್, ನಟ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News