ಸರ್ಕಾರದಿಂದ ಕಲ್ಯಾಣ ಮಂಡಳಿಯ ಅನುದಾನ ದುರ್ಬಳಕೆ ತಡೆಗೆ ಹೋರಾಟ: ಬಾಲಕೃಷ್ಣ ಶೆಟ್ಟಿ
ಪಡುಬಿದ್ರಿ ಸುಜ್ಲಾನ್ ಕಾಲನಿಯ ಸಭಾಭವನದಲ್ಲಿ ನಡೆದ ಪಡುಬಿದ್ರಿ ಪ್ರದೇಶದ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಸಂಘದ 16ನೇ ವಾರ್ಷಿಕ ಮಹಾಸಭೆಯನ್ನು ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು.
ಪಡುಬಿದ್ರಿ: ಕಟ್ಟಡ ಕಾರ್ಮಿಕರ ಹಕ್ಕುಗಳನ್ನು ಪಡೆದುಕೊಳ್ಳಲು ಇರುವ ಕಲ್ಯಾಣ ಮಂಡಳಿಯ ಅನುದಾನವನ್ನು ಸರ್ಕಾರಗಳು ದುರ್ಬಳಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.
ಭಾನುವಾರ ಪಡುಬಿದ್ರಿಯ ಸುಜ್ಲಾನ್ ಕಾಲನಿಯ ಸಭಾಭವನದಲ್ಲಿ ನಡೆದ ಪಡುಬಿದ್ರಿ ಪ್ರದೇಶದ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಸಂಘದ 16ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಮಂಡಳಿಯ ಅನುದಾನವನ್ನು ವಿವಿಧ ಕಾರ್ಯಗಳಿಗೆ ಬಳಕೆ ಮಾಡುವ ಮೂಲಕ ಕಾರ್ಮಿಕರಿಗೆ ಸಿಗಬೇಕಾದ ಹಕ್ಕುಗಳಿಂದ ವಂಚಿತರಾಗುತಿದ್ದಾರೆ. ಕೊರೊನಾ ಸಮಯದಲ್ಲಿ ಅಂದಿನ ರಾಜ್ಯ ಸರ್ಕಾರವು ಕಿಟ್ ಕೊಡುವ ಮೂಲಕ ಕೋಟ್ಯಾಂತರ ರೂಪಾಯಿ ಯನ್ನು ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದರು.
ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಕಾರ್ಮಿಕರು ಅಲ್ಲದೆ ನಕಲಿ ಕಾರ್ಡುದಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ರಾಜ್ಯದ ಅಂದಿನ ಮುಖ್ಯಮಂತ್ರಿಯ ಹಾಗೂ ಅಂದಿನ ಕಾರ್ಮಿಕ ಸಚಿವರ ತವರೂರಲ್ಲಿ ಲಕ್ಷಾಂತರ ಮಂದಿ ಕಲ್ಯಾಣ ಮಂಡಳಿಗೆ ನಕಲಿ ನೋಂದಾವಣೆ ನಡೆದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿ ಅರ್ಹರಿಗೆ ಮಾತ್ರ ನೋಂದಾವಣೆಗೆ ಅವಕಾಶ ನೀಡುವ ಮೂಲಕ ನಕಲಿ ಕಾರ್ಡುದಾರರನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಅಧ್ಯಕ್ಷ ವಾಮನ ಟಿ. ಕೋಟ್ಯಾನ್, ಜಿಲ್ಲಾ ಸಂಘದ ಅಧ್ಯಕ್ಷ ಶೇಖರ್ ಬಂಗೇರಾ, ಕಾರ್ಯದರ್ಶಿ ಶಶಿಧರ, ಕಟಪಾಡಿ ಘಟಕದ ಅಧ್ಯಕ್ಷ ವಾಮನ ಪೂಜಾರಿ, ಮುದರಂಗಡಿ ಘಟಕದ ಕಾರ್ಯದರ್ಶಿ ಪ್ರಸಾದ್ ಆಚಾರ್ಯ, ಪಡುಬಿದ್ರಿ ಘಟಕದ ಉಪಾಧ್ಯಕ್ಷ ರಘುನಾಥ ದೇವಾಡಿಗ ಉಪಸ್ಥಿತರಿದ್ದರು.
ವಿಜಯ ಶೆಟ್ಟಿ ಸ್ವಾಗತಿಸಿದರು.