ಕೆಡಿಪಿ ಸಭೆಯಲ್ಲಿ ಸುನೀಲ್ ಕುಮಾರ್ ನಡೆ ನಾಚಿಕೆಗೇಡು: ರಮೇಶ್ ಕಾಂಚನ್
ಉಡುಪಿನ: ಜಿಲ್ಲೆಯ ಅಭಿವೃದ್ದಿಗಳ ಬಗ್ಗೆ ಗಂಭೀರ ಚರ್ಚೆ ಮಾಡಬೇಕಾದ ಕೆ.ಡಿ.ಪಿ ಸಭೆಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಯಲ್ಲಿ ಜವಬ್ದಾರಿಯುತ ಸ್ಥಾನದಲ್ಲಿರುವ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಕೀಳು ಮಟ್ಟದ ಸಂಭಾಷಣೆ ಗಳನ್ನು ಬಳಸಿ ಜಿಲ್ಲೆಯ ಒರ್ವ ನಿಷ್ಟಾವಂತ ಪೊಲೀಸ್ ಅಧಿಕಾರಿಯೊಬ್ಬರ ಜೊತೆ ನಡೆದುಕೊಂಡಿರುವ ಅಸಭ್ಯ ವರ್ತನೆ ಇಡೀ ಜಿಲ್ಲೆಯ ಜನ ತಲೆತಗ್ಗಿಸುವಂತಾಗಿದೆ. ಶಾಸಕರ ಈ ನಡೆ ನಾಚೀಕೆಗೇಡು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಉನ್ನತ ಅಧಿಕಾರಿಗಳು ಸೇರಿರುವ ಕೆಡಿಪಿ ಸಭೆಯಲ್ಲಿ ತನ್ನನ್ನು ಗೆಲ್ಲಿಸಿರುವ ಕ್ಷೇತ್ರದ ಅಭಿವೃದ್ದಿ ಬಗ್ಗೆ ಮಾತನಾಡ ಬೇಕಾಗಿತ್ತು. ಅದನ್ನ ಬಿಟ್ಟು ಅಧಿಕಾರಿಗಳ ಜೊತೆ ತಾನೊಬ್ಬ ಜವಬ್ದಾರಿಯುತ ಜನಪ್ರತಿನಿಧಿ ಎನ್ನುವುದನ್ನು ಮರೆತು ಅನಾಗರಿಕರಂತೆ ವರ್ತಿಸಿರುವುದು ಖಂಡನೀಯವಾಗಿದೆ ಎಂದರು.
ಹಿಂದಿನ ಬಿಜೆಪಿ ಸರಕಾರದಲ್ಲಿ ಕಡು ಭ್ರಷ್ಟತೆಯಲ್ಲಿ ತೊಡಗಿ ದರ್ಪ, ಅಹಂಕಾರದಿಂದ ಮೆರೆದು ಅಧಿಕಾರ ಕಳೆದುಕೊಂಡರು ಇವರಿಗೆ ಇನ್ನೂ ಬುದ್ದಿ ಬಂದಿಲ್ಲ. ತಮ್ಮ ಆಡಳಿತವಧಿಯಲ್ಲಿ ಇಡೀ ಜಿಲ್ಲೆಯಲ್ಲೇ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ತಮ್ಮ ಕಾನೂನು ಬಾಹಿರ ಚಟುವಟಿಕೆಗಳನ್ನು ರಾಜಾರೋಷ ವಾಗಿ ಮಾಡಿಸಿಕೊಳ್ಳುತ್ತಿದ್ದ ಬಿಜಿಪಿ ಶಾಸಕರಿಗೆ ಇಂದು ಕಾನೂನು, ಕಟ್ಟಳೆಗಳನ್ನು ಅನುಸರಿಸುವುದು ಕಷ್ಟವಾಗುತ್ತಿದ್ದಂತಿದೆ ಎನ್ನುವುದರ ಉದಾಹರಣೆಯೇ ಎಸ್ಪಿಯೊಂದಿಗೆ ನಡೆದುಕೊಂಡ ರೀತಿಯನ್ನು ತೋರಿಸುತ್ತದೆ.
ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ಮಾಡುವಾಗ ಅಧಿಕಾರಿಗಳು ಇವರ ತಾಳಕ್ಕೆ ಕುಣಿಯಲಿಲ್ಲ ಎಂದಾಗ ಅವ ರನ್ನು ಹೀನಾಯವಾಗಿ ಬೈದು, ಬೆದರಿಸಿ ಬೋಗಸ್ ಪ್ರತಿಮೆಯನ್ನು ಸ್ಥಾಪಿಸಿದರು. ಅದೇ ರೀತಿ ಕಾಂಗ್ರೆಸ್ ಸರಕಾರದಲ್ಲೂ ಜಿಲ್ಲೆಯಲ್ಲಿನ ಪ್ರಾಮಾಣಿಕ ಅಧಿಕಾರಿಗಳು ಇವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಹಕರಿಸುತ್ತಿಲ್ಲ ಎಂದು ಪ್ರಾಮಾಣಿಕ ಅಧಿಕಾರಿಗಳನ್ನು ಕೆಡಿಪಿಯಂತಹ ಅಭಿವೃದ್ಧಿ ಪರ ಚಿಂತನೆ ಮಾಡಬೇಕಾದ ಸಭೆಗಳಲ್ಲಿ ಅನಗತ್ಯ ವಾಗಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಹೆದರಿಸಿ ಬೆದರಿಸುವ ತಂತ್ರಕ್ಕೆ ಮೊರೆಹೋಗಿರುವುದು ಶಾಸಕರ ಘನತೆಗೆ ಸರಿಯಾದದ್ದಲ್ಲ ಎಂದು ಅವರು ಟೀಕಿಸಿದರು.