ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ರೂಮ್ ಪಡೆದು ವಂಚನೆ: ತಮಿಳುನಾಡಿನ ಆರೋಪಿ ಬಿಮ್ಸೆಂಟ್ ಜಾನ್ ಸೆರೆ

Update: 2024-12-10 15:28 GMT

 ಬಿಮ್ಸೆಂಟ್ ಜಾನ್

ಮಣಿಪಾಲ, ಡಿ.10: ದೇಶದ ವಿವಿಧ ರಾಜ್ಯಗಳಲ್ಲಿನ ಪ್ರತಿಷ್ಠಿತ ಫೈವ್ ಸ್ಟಾರ್ ಹೊಟೇಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ತಮಿಳುನಾಡು ಮೂಲಕ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡು ರಾಜ್ಯದ ತೂತುಕುಡಿಯ ಬಿಮ್ಸೆಂಟ್ ಜಾನ್(67) ಬಂಧಿತ ಆರೋಪಿ. ಈತ ಡಿ.7ರಂದು ಮಣಿಪಾಲ ಕಂಟ್ರಿ ಇನ್ ಹೊಟೇಲ್‌ನಲ್ಲಿ ತನಗೆ ಕಾನ್ಫರೆನ್ಸ್ ಮೀಟಿಂಗ್ ಇದೆ ಎಂಬುದಾಗಿ ಹೇಳಿ ರೂಮ್ ಪಡೆದುಕೊಂಡಿದ್ದನು.

ಮುಂಗಡ ಹಣವನ್ನು ಡಿ.9ರಂದು ಕೊಡುವುದಾಗಿ ಹೇಳಿ ಡಿ.12ರಂದು ರೂಮ್ ಚೆಕ್‌ಔಟ್ ಮಾಡುತ್ತೇನೆ ಎಂದು ಹೊಟೇಲ್ ಮ್ಯಾನೇಜರ್‌ನ್ನು ನಂಬಿಸಿ ರೂಮ್‌ನಲ್ಲಿ ಉಳಿದುಕೊಂಡಿದ್ದನು. ಬಳಿಕ ಹೊಟೆಲ್‌ನಲ್ಲಿಯೇ ಊಟ ತಿಂಡಿ ಮಾಡಿ ಒಟ್ಟು 39,298ರೂ. ಬಿಲ್ ಮಾಡಿ ಹಣ ಕೊಡದೇ ಪರಾರಿಯಾಗಿ ನಂಬಿಸಿ ಮೋಸ ಮಾಡಿರುವುದಾಗಿ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಆರೋಪಿ ಜೋನ್‌ ನನ್ನು ಮಣಿಪಾಲದಲ್ಲಿ ಡಿ.9ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಇದೇ ರೀತಿ ದೇಶದ ದೆಹಲಿ, ಮಹಾರಾಷ್ಟ್ರ ಥಾಣೆ, ಕೇರಳದ ಕೊಲ್ಲಂ ಸೇರಿದಂತೆ ಹಲವು ರಾಜ್ಯಗಳಲ್ಲಿನ ಪ್ರತಿಷ್ಠಿತ ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ರೂಮ್ ಪಡೆದು ಕೊಂಡು ಸಾವಿರಾರು ರೂ. ಬಿಲ್ ಮಾಡಿ, ಬಳಿಕ ಹಣ ಪಾವತಿಸದೆ ಪರಾರಿಯಾಗಿ ವಂಚಿಸುತ್ತಿದ್ದನು ಎಂದು ತಿಳಿದುಬಂದಿದೆ.

ಪದವೀಧರನಾಗಿರುವ ಈತನ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 49 ಪ್ರಕರಣಗಳು ದಾಖಲಾಗಿವೆ. ಈತ ಅವಿವಾಹಿತನಾಗಿದ್ದು ಈತ ಈ ರೀತಿಯ ವಂಚನೆ ಪ್ರಕರಣದಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಬಂಧಿತನಾಗಿದ್ದನು. ಈ ಪ್ರಕರಣದಲ್ಲಿ ಈತ 1996ರಲ್ಲಿ ಐದು ವರ್ಷ ಜೈಲುಶಿಕ್ಷೆಯನ್ನು ಅನುಭವಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪಾಲ ಪೊಲೀಸರು ಆರೋಪಿಯನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News