ವರದಿ ಅವೈಜ್ಞಾನಿಕವಲ್ಲ; ಮೊದಲು ಜಾರಿಗೊಂಡು ಚರ್ಚೆಯಾಗಲಿ: ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ

ಜಯಪ್ರಕಾಶ್ ಹೆಗ್ಡೆ
ಉಡುಪಿ, ಎ.14: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿ ವೈಜ್ಞಾನಿಕವಾಗಿ ಸಿದ್ಧಪಡಿ ಸಿದ ವರದಿ. ಅದನ್ನು ಅವೈಜ್ಞಾನಿಕ ಎಂದು ಕರೆಯುವಂತಿಲ್ಲ. ಇದು ಜಾತಿ ಗಣತಿ ಅಲ್ಲವೇ ಅಲ್ಲ. ಇದು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ತಯಾರಿಸಿದ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ. ಮಾಡಿರುವ ಸಮೀಕ್ಷೆಗಳಲ್ಲಿ ಜಾತಿಯೂ ಒಂದು ಅಂಶ ಅಷ್ಟೇ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಸ್ರಷ್ಟ ಪಡಿಸಿದ್ದಾರೆ.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರ ರೊಂದಿಗೆ ಮಾತನಾಡುತಿದ್ದರು.
ತಾನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ವರದಿಯ ಕುರಿತಂತೆ ಎ.17ರಂದು ಕ್ಯಾಬಿನೆಟ್‌ನಲ್ಲಿ ಚರ್ಚೆಯಾದ ಬಳಿಕ ಹೇಳಿಕೆ ನೀಡೋಣ ಎಂದು ನಿರ್ಧರಿಸಿದ್ದೆ. ಆದರೆ ಪ್ರಸ್ತುತ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಜನರಲ್ಲಿ ಹಾಗೂ ಕೆಲವು ವರ್ಗದಲ್ಲಿ ಗೊಂದಲ ಉಂಟಾಗಿರುವು ದರಿಂದ ಸ್ಪಷ್ಟನೆ ನೀಡಬೇಕಾಗಿದೆ ಎಂದರು.
ಕೆಲವರಿಗೆ ತಮ್ಮ ಜಾತಿ ಬಿಟ್ಟು ಹೋಗಿದೆ ಎಂಬ ಅಭಿಪ್ರಾಯವಿದೆ. ರಾಜ್ಯದಲ್ಲಿ ಎಷ್ಟು ಜಾತಿಗಳಿವೆಯೋ ಎಲ್ಲವನ್ನು ಈ ವರದಿಯಲ್ಲಿ ಒಳಗೊಳಿಸಲಾಗಿದೆ. ಈ ಸಂಖ್ಯೆ ಎಷ್ಟು ಎಂದು ಈಗ ನಾನು ಹೇಳಲು ಸಾಧ್ಯ ವಿಲ್ಲ. ನಾವು ಜಾತಿ ಹೇಳುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಕೆಲವರು ತಮ್ಮ ಜಾತಿಯ ಬಗ್ಗೆ ಮಾಹಿತಿ ಇಲ್ಲದವರು ಸಹ ಇದ್ದಾರೆ. ಇಂತಹ ಸುಮಾರು ಅಂತಹ ಐನೂರು ಜಾತಿಗಳು ಸಿಕ್ಕಿವೆ. ಹೀಗಾಗಿ ವರದಿಯಲ್ಲಿ ಜಾತಿಯ ಸಮೀಕ್ಷೆ ಆಗಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೆಗ್ಡೆ ಸ್ಪಷ್ಟ ಪಡಿಸಿದರು.
ಕಾಂತರಾಜ್ ಅವರು ಆಯೋಗದ ಅಧ್ಯಕ್ಷರಾಗಿದ್ದಾಗ ಒಂದು ಫಾರ್ಮೆಟ್ ತಯಾರಿಸಿದ್ದರು. ಇದು 54 ಪ್ರಶ್ನಾವಳಿಗಳನ್ನು ಒಳಗೊಂಡಿತ್ತು. ಹೀಗಾಗಿ ಈ ವರದಿಯನ್ನು ಅವೈಜ್ಞಾನಿಕ ಎನ್ನುವಂತಿಲ್ಲ. ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಇದು ಜಾತಿ ಗಣತಿ ಅಲ್ಲವೇ ಅಲ್ಲ. ಮಾಡಿರುವ ಸಮೀಕ್ಷೆಯಲ್ಲಿ ಜಾತಿ ಒಂದು ಅಂಶ ಅಷ್ಟೇ. ಜನರು ಹೇಳಿರುವ ಜಾತಿಯನ್ನು ಇದರಲ್ಲಿ ಬರೆದುಕೊಳ್ಳಲಾಗಿದೆ. ಜನರ ಜಾತಿಯನ್ನು ನಾವು ನಿರ್ಧರಿಸಲು ಆಗಲ್ಲ. ಮನೆಯವರು ಕೊಟ್ಟ ಜಾತಿಯನ್ನು ಇದರಲ್ಲಿ ನಮೂದಿಸಲಾಗಿದೆ ಎಂದರು.
ವರದಿ ಸಾರ್ವಜನಿಕಗೊಂಡ ನಂತರ ಈ ಬಗ್ಗೆ ಚರ್ಚೆ ಮಾಡಬಹುದು. ವರದಿಯಲ್ಲಿ ತಪ್ಪಿದ್ದರೆ ಸರಿಪಡಿಸಿ ಕೊಳ್ಳಲು ಅವಕಾಶ ಇದ್ದೆ ಇದೆ. ತಪ್ಪಾಗಿದ್ದರೆ ಸರಿ ಮಾಡುತ್ತೇವೆ ಎಂದು ಸರಕಾರವೂ ಹೇಳಿದೆ. ಶೇ.95ರಷ್ಟು ಸರಿ ಇದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದುದರಿಂದ ಏನನ್ನು ನೋಡದೆ ಇದು ವೈಜ್ಞಾನಿಕ ವರದಿ ಅಲ್ಲ ಎನ್ನಬಾರದು ಎಂದು ಜಯಪ್ರಕಾಶ್ ಹೆಗ್ಡೆ ಟೀಕಾಕಾರರಿಗೆ ಉತ್ತರಿಸಿದರು.
ಅದೇ ರೀತಿ ಸಿದ್ದರಾಮಯ್ಯ ಕೂತುಕೊಂಡು ವರದಿ ಬರೆಸಿದ್ದಾರೆ ಎನ್ನುವುದು ಸರಿಯಲ್ಲ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಪ್ರತಿ ಹಳ್ಳಿಯಲ್ಲಿ ತರಬೇತಿಗೊಂಡ ಶಿಕ್ಷಕರು ಹೋಗಿ ಸಮೀಕ್ಷೆ ಮಾಡಿದ್ದಾರೆ. ಯಾವ ಶಿಕ್ಷಕರಿಗೂ ವೈಯಕ್ತಿಕ ಆಸಕ್ತಿ ಇರಲು ಸಾಧ್ಯವಿಲ್ಲ. ನೀಡಿರುವ ಫಾರ್ಮೆಟ್ ಅನ್ನು ತುಂಬಿಸಿಕೊಂಡು ಬಂದಿದ್ದಾರೆ. ಇದು ಖಾಸಗಿ ಯವರು ತಯಾರಿಸಿದ ವರದಿಯಲ್ಲ. ಮೊದಲು ಸಚಿವ ಸಂಪುಟ ವರದಿ ಬಗ್ಗೆ ಚರ್ಚೆ ಮಾಡಲಿ ಎಂದೂ ಹೆಗ್ಡೆ ನುಡಿದರು.
ನಮ್ಮ ಜಾತಿಯ ಸಂಖ್ಯೆ ಕಡಿಮೆಯಾಗಿದೆ ಎಂದು ಕೆಲವರು ಹೇಳುತ್ತಾರೆ. ರಾಜ್ಯದಿಂದ ಹೊರಗುಳಿದವರು ಈ ಲೆಕ್ಕಾಚಾರದಲ್ಲಿ ಬರಲ್ಲ. ಲಿಂಗಾಯತರು ಈ ಬಗ್ಗೆ ದೂರಿದ್ದಾರೆ. ಲಿಂಗಾಯಿತ ಎಂದು ಹೇಳುವ ಬದಲು ಹಿಂದೂ ಗಾಣಿಗ ಎಂದು ಕೆಲವರು ಮಾಹಿತಿ ಕೊಟ್ಟಿದ್ದಾರೆ. ಸರ್ವೇ ಮಾಡುವಾಗ ಯಾರು ಏನು ಹೇಳಿ ದ್ದಾರೋ ಗೊತ್ತಿಲ್ಲ. ಅಧಿಕಾರಿಗಳಿಗೆ ಅದನ್ನು ಸರಿ ಪಡಿಸಲು ಸಾಧ್ಯವಿಲ್ಲ. ತಪ್ಪಿದ್ದರೆ ದೂರು ಕೊಟ್ಟು ಸರಿ ಪಡಿಸಬಹುದು. ಸರಿಪಡಿಸಲು ಅಧಿಕಾರಿಗಳು ಇದ್ದಾರೆ. ಈ ವರದಿ ಜಾರಿ ಮಾಡಲು ಆಗದಿದ್ದರೆ ಮರು ಸಮೀಕ್ಷೆ ಮಾಡಿ ಏನು ಪ್ರಯೋಜನ ಎಂದವರು ಪ್ರಶ್ನಿಸಿದರು.
ಊಹಾಪೋಹ ಬೇಡ; ವರದಿ ಜಾರಿಯಾಗಲಿ: ಇದು ವೈಜ್ಞಾನಿಕವಾಗಿ ತಯಾರಿಸಲಾದ ವರದಿ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರ್ವೆಯಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್‌ನವರು ವರದಿ ಅಪ್ಲೋಡ್ ಮಾಡಿದ್ದಾರೆ. ಅವರು ಯಾರಿಗೂ ಪಾಸ್ವರ್ಡ್ ಕೊಡುವುದಿಲ್ಲ. ಈಗ ಎಲ್ಲಾ ರೀತಿಯ ಊಹಾಪೋಹಗಳು ಚರ್ಚೆಯಾಗುತ್ತಿವೆ ಎಂದವರು ಬೇಸರವ್ಯಕ್ತಪಡಿಸಿದರು.
ವರದಿ ಮೊದಲು ಸಚಿವ ಸಂಪುಟದಲ್ಲಿ ಚರ್ಚೆಯಾಗಲಿ.ಸಾಕಷ್ಟು ಪ್ರಯತ್ನದ ನಂತರ ವರದಿ ತಯಾರಿಸ ಲಾಗಿದೆ. ಜನರ ಮನಸ್ಸಿನಲ್ಲಿರುವ ಅನುಮಾನ ದೂರಗೊಳ್ಳಲು ವರದಿ ಸಾರ್ವಜನಿಕಗೊಳ್ಳಬೇಕು. ಅದಕ್ಕೂ ಮೊದಲು ಸಚಿವ ಸಂಪುಟದಲ್ಲಿ ಚರ್ಚೆ ಆಗಬೇಕು. ವರದಿ ಜಾರಿ ಆಗಬೇಕು ಎಂದು ನಾನು ಹಾರೈಸುತ್ತೇನೆ ಎಂದು ಹೆಗ್ಡೆ ಹೇಳಿದರು.
ಬಿಜೆಪಿಯಲ್ಲಿ ದ್ವಂದ್ವ ಯಾಕೆ?
ಈ ನಡುವೆ ನಾವು ಒಂದು ಮಧ್ಯಂತರ ವರದಿ ನೀಡಿದ್ದೆವು. ಹಿಂದಿನ ಸರಕಾರ ಮಧ್ಯಂತರ ವರದಿಯಲ್ಲಿ ಅನೇಕ ಅಂಶಗಳನ್ನು ಸ್ವೀಕರಿಸಿದೆ. ಸುಪ್ರೀಂ ಕೋರ್ಟಿಗೆ ಹೋದ ಕಾರಣ ಜಾರಿ ಮಾಡುವುದಿಲ್ಲ ಎಂದಿ ದ್ದರು. ಆಗ ಬಿಜೆಪಿ ಒಪ್ಪಿದ ವರದಿಯನ್ನು ಈಗ ನಿರಾಕರಿಸುವುದು ಎಷ್ಟು ಸರಿ ಎಂದು ಹೆಗ್ಡೆ ಪ್ರಶ್ನಿಸಿದರು.
ಬಿಜೆಪಿ ಸರಕಾರ ಇದ್ದಾಗಲೇ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡಿದ್ದರು. ಬಿಜೆಪಿಯಲ್ಲಿ ಇದ್ದವರನ್ನೇ ಆಯ್ಕೆ ಮಾಡಿದ್ದರು. ಈ ಸಮಿತಿ ಮಾಡಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ ಎಂದೂ ಅವರು ಹೇಳಿದರು.
"ಜಾತಿ ಅನ್ನುವುದು ‘ಆ್ಯಂಟಿನೇಷನಲ್’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮ ಕೊನೆಯ ಭಾಷಣದಲ್ಲಿ ಹೇಳಿದ್ದರು. ಜಾತೀಯತೆ ಅನ್ನೋದು ನಮ್ಮ ದೇಶದಿಂದ ತೊಲಗಬೇಕು ಎಂದವರು ತಿಳಿಸಿದ್ದರು. ಜಾತೀಯತೆ ಹೋಗಬೇಕಿದ್ದರೆ ಈ ಸರ್ವೇ ರಿಪೋರ್ಟ್ ಜಾರಿಗೊಳ್ಳಬೇಕು. ಸಮಾಜದಲ್ಲಿ ಸಮಾನತೆ ಬರಬೇಕಾದರೆ ಎಲ್ಲರಿಗೂ ಅವಕಾಶ ಸಿಗಬೇಕು. ಎಲ್ಲರಿಗೂ ಅವಕಾಶ ಸಿಗಬೇಕಾದರೆ ಸೂಕ್ತ ಮೀಸಲಾತಿ ಸಿಗಬೇಕು". -ಕೆ.ಜಯಪ್ರಕಾಶ್ ಹೆಗ್ಡೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ.
ಬಹಿರಂಗಗೊಂಡಿರುವ ಲೆಕ್ಕಾಚಾರದ ಬಗ್ಗೆ ಏನೂ ಹೇಳಲಾರೆ
ನಾವು ನೀಡಿದ ವರದಿಯಲ್ಲಿ ಪ್ರತಿ ಜಾತಿಯ ಸ್ಥಿತಿಗತಿ ಸಮೀಕ್ಷೆ ಆಗಿದೆ. ಈಗ ಬಹಿರಂಗಗೊಂಡಿರುವ ಜಾತಿ ಲೆಕ್ಕಾಚಾರ ಸತ್ಯವೋ, ಸುಳ್ಳೋ ನಾನು ಹೇಳಲಾರೆ. ನಾವು ಸರಕಾರಕ್ಕೆ ವರದಿ ಕೊಟ್ಟು ಆಗಿದೆ. ಕಾಂತರಾಜ್ ಅಧ್ಯಕ್ಷರಾಗಿದ್ದಾಗ ಸಮೀಕ್ಷೆ ಮಾಡಲಾಗಿತು. ಅದರ ಆಧಾರದ ಮೇಲೆ ನಾನು ವರದಿ ಕೊಟ್ಟಿದ್ದೇನೆ. ವರದಿ ಲೀಕ್ ಆಗಿದೆ ಅನ್ನುವ ವಿಚಾರ ನಾನು ಒಪ್ಪಲ್ಲ. ವರದಿ ಸರಿ ಇಲ್ಲ ಎಂದು ಹೇಳುವುದು ಕೂಡ ನಾನು ಒಪ್ಪಲ್ಲ ಎಂದು ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತರಬೇತಿ ನೀಡಿ ವರದಿ ಮಾಡಲಾಗಿದೆ. ಶಿಕ್ಷಕರು ಅಧಿಕಾರಿಗಳು ತರಬೇತಿ ಪಡೆದು ಸಮೀಕ್ಷೆ ಮಾಡಿದ್ದಾರೆ. ಸುಮ್ಮನೆ ಮನೆಯಲ್ಲಿ ಕುಳಿತು ಆ ಫಾರ್ಮೆಟ್ ತುಂಬಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಗಳು ಕಾಂತರಾಜ್ ಅವರನ್ನು ಕೂರಿಸಿ ವರದಿ ತಯಾರಿಸಿದ್ದಾರೆ ಅನ್ನೋದು ಸರಿಯಲ್ಲ. ಇದು ಸತ್ಯಕ್ಕೆ ದೂರವಾದ ಮಾತು.ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ನನ್ನ ಕೆಲಸದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹೀಗೆ ಬರೆಯಿರಿ, ಹಾಗೆ ಬರೆಯಿರಿ ಎಂದು ನಮಗೆ ಹೇಳಿಲ್ಲ. ಅಷ್ಟು ಪ್ರಶ್ನೆಗಳಿಗೆ ಕಾಂತರಾಜ್ ಒಬ್ಬರಿಗೆ ಕುಳಿತು ಉತ್ತರ ಬರೆಯಲು ಸಾಧ್ಯನಾ? ಎಂದವರು ಪ್ರಶ್ನಿಸಿದರು.
ಇದು ಕಾಂತರಾಜ್ ಬರೆದ ವರದಿಯಲ್ಲ ಅಧಿಕಾರಿಗಳು ಸಮೀಕ್ಷೆ ಮಾಡಿ ತಯಾರಿಸಿದ ವರದಿ. ಮರು ಸಮೀಕ್ಷೆ ಆಗಬೇಕು ಅನ್ನುವುದು ಸರಿಯಲ್ಲ. ವರದಿಯನ್ನು ಮೊದಲು ನೋಡಿ. ಸಚಿವ ಸಂಪುಟದಲ್ಲಿ ಮೊದಲು ಚರ್ಚೆಯಾಗಲಿ. ವರದಿ ಸಾರ್ವಜನಿಕ ಗೊಂಡ ನಂತರ ತಪ್ಪಿದ್ದರೆ ತಿದ್ದಲು ಅವಕಾಶ ಇದೆ. ಬಿಟ್ಟುಹೋದ ವಿಚಾರಗಳನ್ನು ಸೇರಿಸಲು ಅವಕಾಶವಿದೆ. ಇದು ಜನರಿಂದ ಮಾಹಿತಿ ಸಂಗ್ರಹಿಸಿಯೇ ಸಿದ್ಧವಾದ ವರದಿ ಎಂದು ಸ್ಪಷ್ಟಪಡಿಸಿದರು.
ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದು...
*ರಾಜ್ಯದಲ್ಲಿ ಆರು ಕೋಟಿ 30 ಲಕ್ಷ ಜನ ಜನಸಂಖ್ಯೆ ಇತ್ತು. 5 ಕೋಟಿ 98 ಲಕ್ಷ ಜನರನ್ನು ವರದಿ ಒಳಗೊಂಡಿದೆ. ವರದಿಯಲ್ಲಿ ಇಂತದ್ದು ತಪ್ಪಾಗಿದೆ ಎಂದು ಹೇಳಿದರೆ ಸರಿಪಡಿಸಿಕೊಳ್ಳಲು ಇನ್ನೂ ಅವಕಾಶ ಇದೆ.
*ನನ್ನನ್ನು ನೇಮಕ ಮಾಡಿದ್ದೆ ಬಿಜೆಪಿ ಸರಕಾರ. ಸಮಿತಿಯ ಎಲ್ಲಾ ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಸರಕಾರ. ಬಿಜೆಪಿ ಸರ್ಕಾರ ಇದ್ದಾಗಲೇ ಮಧ್ಯಂತರ ವರದಿ ಕೊಟ್ಟಿದ್ದೆವು. ಆಗ ಒಪ್ಪಿ ಈಗ ವಿರೋಧಿಸುವುದು ಸರಿಯಲ್ಲ, ಇದು ರಾಜಕೀಯ.
*ದೊಡ್ಡ ಜಾತಿಗಳಿಗೆ ಆತಂಕ ಕಾಡಲು ಕಾರಣ ಇದೆ. ತಮ್ಮ ಜಾತಿಗಳ ಸಂಖ್ಯೆ ಜಾಸ್ತಿ ಇದೆ ಎಂದು ಎಲ್ಲರ ಅಭಿಪ್ರಾಯ ಇತ್ತು. ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿದ ನಂತರ ಸತ್ಯಾಂಶ ಬಯಲಾಗಲಿದೆ. ಜನರು ಈ ವರದಿಯನ್ನು ಒಪ್ಪುತ್ತಾರೆ.
*ಸಮ ಸಮಾಜ ನಿರ್ಮಾಣಕ್ಕೆ ಈ ವರದಿ ಜಾರಿ ಆಗಬೇಕು.ಅವಕಾಶ ವಂಚಿತರಿಗೆ ಅವಕಾಶ ಸಿಗಲು ಮೀಸಲಾತಿ ಬೇಕು. ಬಿಜೆಪಿಯವರಿಗೆ ವರದಿಯನ್ನು ಪಡೆದು ರೆಜೆಕ್ಟ್ ಮಾಡಬಹುದಿತ್ತಲ್ಲ. ಆ ರೀತಿ ಬಿಜೆಪಿ ಅಂದು ಮಾಡಿಲ್ಲ. ವರದಿ ತಯಾರಿಸಲು 163 ಕೋಟಿ ರೂಪಾಯಿ ಖರ್ಚಾಗಿದೆ.
*ವಿಶೇಷ ಸಚಿವ ಸಂಪುಟ ಸಭೆ ಬಹಳ ಮಹತ್ವದ್ದು. ಸರಿಯಾದ ಚರ್ಚೆಯಾಗಿ ಸಚಿವರು ಕನ್ವಿನ್ಸ್ ಆಗಬೇಕು. ಎಲ್ಲರೂ ಒಪ್ಪಿ ವಿಧಾನಸಭೆ ಮುಂದೆ ತೆಗೆದುಕೊಂಡು ಹೋಗಬೇಕು. ನಾನು ವಿರೋಧ ಮಾಡಿದರೆ ಮತ ಕಡಿಮೆಯಾಗಬಹುದು ಎಂದು ಆಲೋಚಿಸಬಾರದು.ವಾಸ್ತವಂಶ ಆಲೋಚನೆ ಮಾಡಿ ಜನರಿಗೆ ಅನುಕೂಲ ಮಾಡಬೇಕು.
*ರಾಜ್ಯದ ಹಿಂದುಳಿದವರಿಗೆ ಸಹಾಯ ಆಗಬೇಕು ಎಂಬ ಭಾವನೆ ಇದ್ದರೆ ವರದಿಯನ್ನು ಒಪ್ಪಬೇಕು. ಮುಂದುವರಿದ ಜಾತಿಗಳಲ್ಲೂ ಹಿಂದುಳಿದವರು ಇದ್ದಾರೆ. ಹೀಗಾಗಿ ಈ ವರದಿಯನ್ನು ಎಲ್ಲರೂ ಒಪ್ಪಬೇಕು.