ಉಡುಪಿ ಜಿಲ್ಲೆಯ 73 BSNL ಟವರ್‌ಗಳಲ್ಲಿ ಬ್ಯಾಟರಿ ಬ್ಯಾಕಪ್ ಇಲ್ಲ!

ಕುಂದಾಪುರ, ಎ.17: ಉಡುಪಿ ಜಿಲ್ಲೆಯಲ್ಲಿ 196 ಬಿಎಸ್‌ಎನ್‌ಎಲ್ ಟವರ್‌ಗಳ ಪೈಕಿ 73ರಲ್ಲಿ ಬ್ಯಾಟರಿ ಬ್ಯಾಕಪ್ ಇಲ್ಲ ಎಂಬ ಮಾಹಿತಿಯನ್ನು ಬಿಎಸ್‌ಎನ್‌ಎಲ್ ಅಧಿಕಾರಿಗಳು ಗುರುವಾರ ಕುಂದಾಪುರ ತಾಪಂ ಸಭಾಂಗಣ ದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟವನ್ನು ಉತ್ತಮಗೊಳಿಸುವಿಕೆ ಹಾಗೂ ಸಲಹೆ ಸೂಚನೆಗಳ ಕುರಿತ ಸಭೆಯಲ್ಲಿ ನೀಡಿದ್ದಾರೆ.
ಬ್ಯಾಟರಿ ಬ್ಯಾಕಪ್ ಇಲ್ಲದೆ ಗುಡುಗು-ಮಿಂಚು ಬಂದಾಗ ಬ್ಯಾಟರಿ ದುಸ್ಥಿತಿಗೆ ತಲುಪುತ್ತದೆ. ಈಗಾಗಾಲೇ 10 ಬ್ಯಾಟರಿ ಬ್ಯಾಕಪ್ ಕೇಂದ್ರ ಸರಕಾರದ ಅನುದಾನದಿಂದ ಬಂದಿದ್ದು ಉಳಿದಿದ್ದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ವಿದ್ಯುತ್ ಸಂಪರ್ಕ ಕಡಿತವಾದಾಗ ಬ್ಯಾಟರಿ, ಜನರೇಟರ್ ಸಂಪರ್ಕ ಗೊಳಿಸಲು ಗ್ರಾ.ಪಂ ಸಿಬ್ಬಂದಿ (ಪಂಪು ಚಾಲಕ) ನೇಮಕ ಸೂಕ್ತ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದರು. ತುರ್ತು ಸಮಯಕ್ಕೆ ಅನುಕೂಲವಾಗುವಂತೆ ಪ್ರತಿ ಟವರ್ ಇರುವಲ್ಲಿ ಡಿ.ಜಿ. ಬ್ಯಾಟರಿ ನೀಡಲು ಹಾಗೂ ಗ್ರಾಪಂ ಒಂದಕ್ಕೆ ನಿರ್ವಹಣೆಗೆ ತಿಂಗಳಿಗೆ 3 ಸಾವಿರ ಹಣ ನೀಡಲು ನಿರ್ಧರಿಸಲಾಯಿತು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ವಾದರೆ ಬಿಎಸ್‌ಎನ್‌ಎಲ್ ಸಂಪರ್ಕ ಕಡಿತಗೊಳ್ಳುತ್ತದೆ. ಬ್ಯಾಟರಿ, ಜನರೇಟರ್ ಮೊದಲಾದ ಮೂಲ ಸೌಕರ್ಯ ಒದಗಿಸಿ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಮಡಾಮಕ್ಕಿ, ಅಮಾಸೆಬೈಲು ಬೊಳ್ಮೆನೆ ಮೊದಲಾದೆಡೆ ಹೊಸದಾಗಿ ಟವರ್ ನಿರ್ಮಿಸಿದ್ದು ಸರಿಯಾದ ನೆಟ್‌ವರ್ಕ್ ಇಲ್ಲದೆ ಜನರು ಪರದಾಡುತ್ತಿದ್ದಾರೆ ಎಂದು ದೂರಿದರು.
ಟವರ್ ಮಾಡುವುದರಿಂದ ಪ್ರಯೋಜನವಿಲ್ಲ. ಅದು ಜನರಿಗೆ ಅನುಕೂಲ ವಾಗುವ ರೀತಿ ಇರಬೇಕು. ಕುಂದಾಪುರದ ಬಿಎಸ್‌ಎನ್‌ಎಲ್ ಕಚೇರಿಗೆ ಯಾವ ದೂರು ನೀಡಿದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪವಿದೆ. ಅಧಿಕಾರಿ-ಸಿಬ್ಬಂದಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಕಾರ್ಯ ನಿರ್ವಹಿಸ ಬೇಕು ಎಂದು ಅವರು ತಿಳಿಸಿದರು.
ಕ್ರಿಮಿನಲ್ ಕೇಸ್ ಎಚ್ಚರಿಕೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೆಲವು ಕಡೆ ಬಿಎಸ್‌ಎನ್‌ಎಲ್ ಸಂಸ್ಥೆಯಿಂದ ಹೊಸ ಟವರ್ ಮಾಡಿದರೂ ಕೂಡ ಸಮರ್ಪಕ ನೆಟ್‌ವರ್ಕ್ ಇಲ್ಲ ಎಂಬ ದೂರುಗಳು ಗ್ರಾಹಕರಿಂದ ಬರುತ್ತಿವೆ. ಕೇವಲ ಉತ್ತಮ ನೆಟ್‌ವರ್ಕ್ ನೀಡುತ್ತೇವೆ ಎಂದು ಪ್ರಚಾರ ಗಿಟ್ಟಿಸಿ ಕೊಂಡು ಏನು ಪ್ರಯೋಜನವಿಲ್ಲ. ಉತ್ತಮ ಸೇವೆ ನೀಡುವ ಮೂಲಕ ಇರುವ ಗ್ರಾಹಕರನ್ನು ಉಳಿಸಿ ಕೊಂಡು, ಸಂಸ್ಥೆ ಬೆಳೆಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿ.ಎಸ್.ಎನ್.ಎಲ್.ಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಖಾಸಗಿಯ ವರಿಗಿಂತ ಉತ್ತಮ ಸೇವೆ ಕೊಟ್ಟರೆ ಗ್ರಾಹಕರನ್ನು ಉಳಿಸಿಕೊಳ್ಳುವುದಲ್ಲದೆ ಹೊಸ ಗ್ರಾಹಕರನ್ನು ಸೆಳೆಯಬಹುದು. ಟವರ್ ನಿರ್ಮಿಸಿ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಇದ್ದು ಸುಮ್ಮನೆ ಕಾಟಾಚಾರದ ಕೆಲಸ ಮಾಡಿದರೆ ಸಂಬಂಧ ಪಟ್ಟವರ ಮೇಲೆ ಕ್ರಿಮಿನಿಲ್ ಕೇಸು ದಾಖಲಿಸಲು ಪತ್ರ ಬರೆಯಲಾಗುತ್ತದೆ. ಆಯಾಯ ಗ್ರಾಪಂಗಳ ಗ್ರಾಮಸಭೆ, ಸಾಮಾನ್ಯ ಸಭೆಗಳಿಗೆ ಖುದ್ದು ಬಿಎಸ್‌ಎನ್‌ಎಲ್ ಅಧಿಕಾರಿಗಳು ಹೋಗಬೇಕು. ಆ ಗ್ರಾಮದ ಜನರ ಸಮಸ್ಯೆ ಅರಿತು ಪರಿಹಾರ ನೀಡಲು ಸಾಧ್ಯ ಎಂದು ಅವರು ತಿಳಿಸಿದರು.
ಗೋಪಾಡಿ ಗ್ರಾಪಂ ಅಧ್ಯಕ್ಷ ಸ್ಥಳೀಯವಾಗಿರುವ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಸಭೆಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ್ ಶೆಣೈ, ಬಿಎಸ್‌ಎನ್‌ಎಲ್ ಪಿಜಿಎಂ ನವೀನ್ ಗುಪ್ತಾ, ಮುಖ್ಯಸ್ಥ ಜನಾರ್ದನ್, ಬಿಎಸ್‌ಎನ್‌ಎಲ್ ನಾಮನಿರ್ದೇಶಿತ ಸದಸ್ಯರಾದ ಪ್ರದೀಪ್ ಕೊಠಾರಿ, ಶೈಲೇಂದ್ರ ಶೆಟ್ಟಿ, ಗೋಪಾಲ ಕೃಷ್ಣ, ಸಂಸ್ಥೆಯ ವಿವಿಧ ವಿಭಾಗದ ಅಧಿಕಾರಿಗಳು, ಮೆಸ್ಕಾಂ ಸಂಬಂದಪಟ್ಟವರು ಉಪಸ್ಥಿತರಿದ್ದರು.