ಪ್ರತ್ಯೇಕಗೊಂಡ ಮೂವರು ದಂಪತಿಗಳಿಗೆ ಕೋರ್ಟ್‌ನಲ್ಲಿ ‘ಪುನರ್ವಿವಾಹ’

Update: 2024-12-14 15:20 GMT

ಉಡುಪಿ, ಡಿ.14: ಕಳೆದ ಹಲವು ವರ್ಷಗಳಿಂದ ಪ್ರತ್ಯೇಕವಾಗಿದ್ದ ಮೂವರು ದಂಪತಿಗಳನ್ನು ಉಡುಪಿಯ ಕೌಟುಂಬಿಕ ನ್ಯಾಯಾಲಯ ಒಂದುಗೂಡಿಸಿ ಪರಸ್ಪರ ಮಾಲಾರ್ಪಣೆ ಮಾಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕ್ಷಣಕ್ಕೆ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಸಾಕ್ಷಿಯಾಯಿತು.

ಪ್ರಕರಣದ ಹಿನ್ನಲೆ: ಸೊರಬದ ರಾಘವೇಂದ್ರ ಆಚಾರ್ಯ ಅವರು ಮಂದಾರ್ತಿ ಮುದ್ದುಮನೆಯ ಮಾಲತಿ ಅವರೊಂದಿಗೆ 2018ರ ಎಪ್ರಿಲ್ ತಿಂಗಳು ಯಡ್ತಾಡಿಯ ಚಾಮುಂಡೇಶ್ವರಿ ಸಭಾಭವನದಲ್ಲಿ ವಿವಾಹವಾಗಿದ್ದರು. ಮದುವೆ ಆದ ಸ್ವಲ್ಪ ಸಮಯದ ನಂತರ ಮಾಲತಿ ಗಂಡನ ಮನೆಯಿಂದ ತನ್ನ ತವರು ಮನೆ ಸೇರಿದ್ದರು. ಈ ದಂಪತಿಗೆ ಗಂಡು ಮಗು ಸಹ ಇದ್ದು ಪರಸ್ಪರ ಭಿನ್ನಾಭಿಪ್ರಾಯದಿಂದ ಮಾಲತಿ ತನ್ನ ಗಂಡನ ಮನೆಗೆ ಹೋಗಲು ಒಪ್ಪುತ್ತಿರಲಿಲ್ಲ.

ಗಂಡ ರಾಘವೇಂದ್ರ ತನಗೆ ಹೆಂಡತಿ ಬೇಕೆಂದು ಸೊರಬದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಲಯದಲ್ಲಿ ಅರ್ಜಿ ಯನ್ನು ದಾಖಲಿಸಿ ತೀರ್ಪನ್ನು ಪಡೆದುಕೊಂಡಿದ್ದರು. ನ್ಯಾಯಾಲಯದ ಆದೇಶದಂತೆ ಪತ್ನಿ ಮಾಲತಿ ನಿಗದಿತ ಅವಧಿ ಯೊಳಗೆ ಮನೆಗೆ ಹೋಗದೆ ಇದ್ದಾಗ ರಾಘವೇಂದ್ರ ತನ್ನ ಪತ್ನಿ ಮಾಲತಿ ವಿರುದ್ಧ ವಿಚ್ಚೇದನ ಕೋರಿ ಸೊರಬದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಲಯದಲ್ಲಿ ಪುನಃ ಅರ್ಜಿ ಸಲ್ಲಿಸಿದ್ದರು.

ಪತ್ನಿ ಮಾಲತಿ ಈ ಪ್ರಕರಣಕ್ಕೆ ಹಾಜರಾಗಿ ನಂತರ ವಿಚ್ಚೇದನ ಅರ್ಜಿಯನ್ನು ಉಡುಪಿಗೆ ವರ್ಗಾಯಿಸಬೇಕೆಂದು ರಾಜ್ಯದ ಉಚ್ಛ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಉಚ್ಛ ನ್ಯಾಯಲಯ ಸದ್ರಿ ಪ್ರಕರಣವನ್ನು ಉಡುಪಿಯ ಕೌಟುಂಬಿಕ ನ್ಯಾಯಲಯಕ್ಕೆ ವರ್ಗಾಯಿಸಲು ಆದೇಶ ನೀಡಿದ್ದು, ನಂತರ ಉಭಯತರು ಉಡುಪಿಯ ಕೌಟುಂಬಿಕ ನ್ಯಾಯಲಯಕ್ಕೆ ಹಾಜರಾಗಿದ್ದರು.

ರಾಜಿಗೆ ಮುಂದಾದ ವಕೀಲರು: ಅರ್ಜಿದಾರರ ಹಾಗು ಎದುರುದಾರರ ಪರ ಹಾಜರಾದ ವಕೀಲರು ಈ ಪ್ರಕರಣ ರಾಜಿ ಯಿಂದ ಬಗೆಹರಿಸಿಕೊಳ್ಳ ಬಹುದಾದ ಪ್ರಕರಣವೆಂದು ತಿಳಿದು ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.

ಇಂದು ಡಿ.14ರಂದು ನಡೆದ ರಾಷ್ಟ್ರಿಯ ಲೋಕ ಅದಾಲತ್‌ನಲ್ಲಿ ಅರ್ಜಿದಾರರು ಮತ್ತು ಎದುರುದಾರರನ್ನು ಒಟ್ಟಾಗಿ ಜೀವನ ಸಾಗಿಸುವಂತೆ ಮನವೊಲಿಸಿದ್ದು, ಅರ್ಜಿದಾರರು ಮತ್ತು ಎದುರುದಾರರು ಪರಸ್ಪರ ಪತಿ- ಪತ್ನಿಯರಾಗಿ ಜೀವನ ಸಾಗಿಸಲು ಸಂತೋಷದಿಂದ ಒಪ್ಪಿಕೊಂಡರು.

ಕೌಟುಂಬಿಕ ನ್ಯಾಯಲಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಧೀಶ ಕಿರಣ್ ಎಸ್ ಗಂಗಣ್ಣನವರ್, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಧೀಶ ಶ್ರೀನಿವಾಸ ಸುವರ್ಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಪಿ.ಆರ್. ಯೋಗೇಶ್, ವಕೀಲರ ಸಂಘದ ಅಧ್ಯಕ್ಷರಾದ ರೆನೋಲ್ಡ್ ಪ್ರವೀಣ್‌ಕುಮಾರ್, ಉಪಾಧ್ಯಕ್ಷ ಮಿತ್ರಕುಮಾರ್ ಶೆಟ್ಟಿ, ನ್ಯಾಯಾಂಗೇತರ ಸಂದಾನಕಾರ ಮತ್ತು ವಕೀಲರಾದ ರಮೇಶ್ ಶೆಟ್ಟಿ ಅರ್ಜಿದಾರರ ಪರ ನ್ಯಾಯವಾದಿ ಎಚ್.ಆನಂದಮಡಿವಾಳ, ಎದುರುದಾರರ ಪರ ನ್ಯಾಯವಾದಿ ಶಶಿಕಲಾ ತೋನ್ಸೆ ಅವರ ಸಮ್ಮುಖದಲ್ಲಿ ದಂಪತಿಗಳು ಪರಸ್ಪರ ಮಾಲಾರ್ಪಣೆ ಮಾಡಿಕೊಂಡು ತಮ್ಮ ಮಗುವಿನೊಂದಿಗೆ ಹೊಸ ದಾಂಪತ್ಯ ಜೀವನಕ್ಕೆ ನಾಂದಿಹಾಡಿದರು.

ದಂಪತಿಗಳು ಒಂದಾದ ಬಗ್ಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.

ಇನ್ನೆರಡು ಪ್ರಕರಣ: ಗೋಪಾಲ್ ಶೆಟ್ಟಿ ಮತ್ತು ಆಶಾಲತಾ ಶೆಟ್ಟಿ 2011ರಲ್ಲಿ ವಿವಾಹವಾದ ಕೆಲವೇ ತಿಂಗಳುಗಳ ಬಳಿಕ ಸಣ್ಣಪುಟ್ಟ ಮನಸ್ತಾಪದಿಂದ ದಂಪತಿಗಳು 13 ವರ್ಷಗಳಿಂದ ದೂರವಿದ್ದರು. ಈಗ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಜೋಡಿ ಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್ ಎಸ್.ಗಂಗಣ್ಣವರ್,ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್ ನೇತೃತ್ವದಲ್ಲಿ ಇಬ್ಬರಿಗೂ ದಾಂಪತ್ಯ ಜೀವನದ ಮೌಲ್ಯವನ್ನು ತಿಳಿಸಲಾಯಿತು.

ಇದರಿಂದ ಇಬ್ಬರು ಒಟ್ಟಾಗಿ ಬಾಳಲು ಪರಸ್ಪರ ಒಪ್ಪಿಗೆ ಸೂಚಿಸಿದ ಬಳಿಕ, ನ್ಯಾಯಾಧೀಶರ ಸಮ್ಮುಖದಲ್ಲೇ ಹೂವಿನ ಹಾರವನ್ನು ಬದಲಾಯಿಸಿ, ಸಿಹಿಯನ್ನು ತಿನ್ನಿಸುವ ಮೂಲಕ ದಂಪತಿಗಳ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸಲಾಯಿತು.

ಅದೇ ರೀತಿ 2021ರಿಂದ ಪತ್ಯೇಕವಾಗಿದ್ದ ಕರ್ಣಾನಂದ ಮತ್ತು ಕೀರ್ತಾಕುಮಾರಿ ದಂಪತಿಗಳು ಶನಿವಾರದ ಲೋಕ ಅದಾಲತ್‌ನಲ್ಲಿ ಒಂದಾದರು.

"ಒಡೆದ ಮನಸುಗಳಿಗೆ ಉಚಿತವಾಗಿ ತಿಳಿಹೇಳುವ, ಸಲಹೆ ನೀಡುವ, ಒಟ್ಟಾಗಿ ಸಂಸಾರ ಸಾಗಿಸಲು ನೆರವು ನೀಡುವಂತಹ ಕೆಲಸವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಾಡುತ್ತಿರುತ್ತದೆ".

-ಕಿರಣ್ ಎಸ್. ಗಂಗಣ್ಣವರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ.

ಕೌಟುಂಬಿಕ ಭಿನ್ನಾಭಿಪ್ರಾಯಗಳ ಬಗ್ಗೆ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು ರಾಜೀ ಮುಖೇನ ಇತ್ಯಾರ್ಥ ಪಡಿಸಲು ನ್ಯಾಯವಾದಿಗಳು ಮತ್ತು ನ್ಯಾಯಾಲಯ ಪ್ರಯತ್ನಿಸಿದರೆ ಬಹಳಷ್ಟು ಕೌಟುಂಬಿಕ ಪ್ರಕರಣಗಳು ಇತ್ಯಾರ್ಥ ಗೊಳ್ಳುವುದರೊಂದಿಗೆ ಬೇರ್ಪಟ್ಟ ಕುಟುಂಬಗಳನ್ನು ಒಂದುಗೂಡಿಸಬಹುದು.

-ಎಚ್.ಆನಂದ ಮಡಿವಾಳ, ಅರ್ಜಿದಾರರ ಪರ ವಕೀಲರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News