ಶಾಸಕ ಸುನೀಲ್ ಕುಮಾರ್‌ಗೆ ಎರಡು ನಾಲಿಗೆ: ರಮೇಶ್ ಕಾಂಚನ್ ಟೀಕೆ

Update: 2023-10-22 13:36 GMT

ಶಾಸಕ ಸುನೀಲ್ ಕುಮಾರ್‌

ಉಡುಪಿ, ಅ.22: ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ ಎನ್ನುವ ಶಾಸಕ ಸುನೀಲ್ ಕುಮಾರ್ ಎರಡು ನಾಲಿಗೆಯವರು ಎಂಬುದು ಸಾಬೀತುಪಡಿಸಿದ್ದಾರೆ. ಈ ಹಿಂದೆ ಇವರೇ ಇದೊಂದು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುವ ನಿಟ್ಟಿನಲ್ಲಿ ಪರಶುರಾಮನ ಮೂರ್ತಿಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಆದರೆ ಈಗ ತಮ್ಮ ವರಸೆಯನ್ನು ಬದಲಾಯಿಸಿರುವ ಸುನೀಲ್ ಕುಮಾರ್ ಅವರಿಗೆ ಎಷ್ಟು ನಾಲಿಗೆ ಎನ್ನುವುದು ಸ್ಪಷ್ಟಪಡಿಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಟೀಕಿಸಿದ್ದಾರೆ.

ತುಳುನಾಡಿನ ಜನರು ಪರಶುರಾಮನನ್ನು ಧಾರ್ಮಿಕ ಭಾವನೆಯಿಂದ ಕಾಣುತ್ತಿರುವುದು ಜಗತ್ತಿಗೆ ತಿಳಿದಿರುವ ವಿಚಾರ. ಹಾಗಿದ್ದಲ್ಲಿ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ತೆಂಗಿನ ಕಾಯಿ ಒಡೆದೋ, ಮಂಗಳಾರತಿ ಮಾಡಿ ನಮ್ಮ ಭಕ್ತಿ ತೋರಿಸಿದರೆ ಮಾತ್ರ ಅದನ್ನು ಧಾರ್ಮಿಕ ಕ್ಷೇತ್ರವಾಗಿ ಹೇಳಬೇಕೆಂದಿಲ್ಲ. ಪರಶುರಾಮನಿಗೆ ಧಾರ್ಮಿಕ ಗೌರವ ನೀಡಿದ ಬಳಿಕ ಅದು ಯಾವುದೇ ಸ್ಥಳ ವಾದರೂ ಕೂಡ ಅಲ್ಲೋಂದು ಭಕ್ತಿಯ ಸೆಳೆತ ಇರುತ್ತದೆ ಎನ್ನುವ ಕನಿಷ್ಠ ಜ್ಞಾನ ಸುನೀಲ್ ಕುಮಾರ್ ಅವರಿಗೆ ಇಲ್ಲವಾಗಿದೆ ಎಂದು ಅವರು ದೂರಿದರು.

ಕಾಂಗ್ರೆಸ್ ಎಂದೂ ಕೂಡ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಪರಶುರಾಮ ಥೀಮ್ ಪಾರ್ಕ್ ಕೂಡ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯಲು ನಮ್ಮದೇನು ಅಭ್ಯಂತರವಿಲ್ಲ. ಸರಕಾರದ ಹಣವನ್ನು ಭ್ರಷ್ಠಾಚಾರ ಮಾಡಿ ಹಿಂದೂ ಜನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ತಮ್ಮ ಮತಬ್ಯಾಂಕನ್ನು ಗಟ್ಟಿ ಮಾಡಿಕೊಂಡ ಸುನೀಲ್ ಕುಮಾರ್ ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News