ಅವೈದಿಕ ತುಳು ಸಂಸ್ಕೃತಿಯನ್ನು ಮೂಲರೂಪದಲ್ಲಿಯೇ ಉಳಿಸುವುದು ಅಗತ್ಯ: ದಿನೇಶ್ ಅಮೀನ್ ಮಟ್ಟು

Update: 2023-12-17 15:04 GMT

ಉಡುಪಿ, ಡಿ.17: ತುಳು ಸಂಸ್ಕೃತಿಯಲ್ಲಿ ಗುಡ್ಡಗಾಡು ಜನಾಂಗದ ಪಾತ್ರ ಇದೆ. ಇದು ಸಂಪೂರ್ಣ ಅವೈದಿಕವಾದ ಸಂಸ್ಕೃತಿಯಾಗಿದೆ. ಅದನ್ನು ಮೂಲ ರೂಪದಲ್ಲಿಯೇ ಉಳಿಸಬೇಕಾದ ಬಹಳ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಬನ್ನಂಜೆ ಬಾಬು ಅಮೀನ್-80 ಅಭಿನಂದನಾ ಸಮಿತಿ ವತಿಯಿಂದ ರವಿವಾರ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾದ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ 80ರ ಸಂಭ್ರಮ ‘ಸಿರಿತುಪ್ಪೆ’ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

ತುಳು ಸಂಸ್ಕೃತಿಯ ಎರಡು ಕಣ್ಣುಗಳಾಗಿರುವ ಯಕ್ಷಗಾನ ಮತ್ತು ದೈವ ಕೋಲಗಳು ಇಂದು ವಾಣಿಜ್ಯೀಕರಣವಾಗುತ್ತಿದೆ. ಇದನ್ನು ಅದರ ಮೂಲ ಸ್ವರೂಪದಲ್ಲಿಯೇ ಉಳಿಸಿದರೆ ಮಾತ್ರ ತುಳುನಾಡಿನ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಾಗು ತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ತುಳುನಾಡಿನ ಸಂಸ್ಕೃತಿ ಎಂಬುದು ಕಾಡು ಮಲ್ಲಿಗೆ. ಅದನ್ನು ಅದರಷ್ಟಿಗೆ ಬೆಳೆಸಲು ಬಿಡಬೇಕೆ ಹೊರತು ಅದನ್ನು ಬೇರೆ ಕಡೆ ಬೆಳೆಸಲು ನೋಡಬಾರದು. ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ ಸಂಸ್ಕೃತಿಯನ್ನು ಮಾರಾಟ ಮಾಡುವುದು ಸರಿ ಯಲ್ಲ. ತುಳು ಸಂಸ್ಕೃತಿ, ಕೋಲ, ಕಂಬಳ, ಕೋಳಿ ಅಂಕಗಳ ಬಗ್ಗೆ ಹೊರಗಿನವರಿಗೆ ತಿಳಿದು ಕೊಳ್ಳಬೇಕಾದ ಆಸಕ್ತಿ, ಕುತೂಹಲಗಳಿದ್ದರೆ ಅವರೇ ಇಲ್ಲಿಗೆ ಬರಬೇಕು ಎಂದರು.

ತುಳು ಭಾಷೆ ಇಂದು ಸಾಯುತ್ತಿದೆ. ಭಾಷೆ ಸತ್ತರೆ ಅದರೊಂದಿಗೆ ಸಂಸ್ಕೃತಿ ಮತ್ತು ಇಡೀ ಸಮುದಾಯವೇ ನಾಶವಾಗುತ್ತದೆ. ನಾವು ಇಂದು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ಗಲಾಟೆ ಮಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ ಎಂದ ಅವರು, ವಿಶ್ವವಿದ್ಯಾನಿಲಯಗಳು ಡಾಕ್ಟರೇಟ್ ಮಾನ ದಂಡಗಳನ್ನು ಬದಲಾಯಿಸುವ ಅಗತ್ಯ ಇದೆ. ಜಾನಪದ ವಿದ್ವಾಂಸರನ್ನು ಗೌರವ ಪ್ರಾಧ್ಯಾಕರನ್ನಾಗಿ ನೇಮಕ ಮಾಡಿ, ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕೊಟ್ಟು ಸಂಶೋಧನೆ ಮಾಡಿಸುವ ಕಾರ್ಯ ಮಾಡಬೇಕು ಎಂದರು.

ಬನ್ನಂಜೆ ಬಾಬು ಅಮೀನ್ ಬರೆದ ತುಳು ಸಂಸ್ಕೃತಿ ಆಚಾರ ವಿಚಾರ ಪುಸ್ತಕವನ್ನು ಮುಂದಿನ ತಲೆಮಾರಿಗೆ ದಾಟಿಸುವ ಬಗ್ಗೆ ಚೆರ್ಚ ಮಾಡಬೇಕಾಗಿದೆ. ಅದಕ್ಕಾಗಿ ಆಡಿಯೋ ಪುಸ್ತಕಗಳನ್ನು ಹೊರತರಬೇಕು. ಇದರಿಂದ ಕನ್ನಡ ಓದಲು ಬಾರದ ತುಳುನಾಡಿನ ಯುವಜನತೆ ಕೂಡ ಅದನ್ನು ಅರ್ಥ ಮಾಡಲು ಸಾಧ್ಯವಾಗುತ್ತದೆ. ಈ ರೀತಿಯ ಪ್ರಯೋಗ ಮಾಡಿದ್ದರೆ ತುಳು ಸಂಸ್ಕೃತಿ ಉಳಿಸಲು ಸಾಧ್ಯವಿಲ್ಲ. ಇದು ನಮ್ಮ ಮುಂದೆ ಇರುವ ಬಹಳ ದೊಡ್ಡ ಸವಾಲು ಎಂದು ಅವರು ಹೇಳಿದರು.

ನಮ್ಮ ಭೂತಗಳು ಒಂದು ಕಾಲದ ಸಾಮಾಜಿಕ ಹೋರಾಟಗಾರರು. ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮಕ್ಕಾಗಿ ಹೋರಾಡಿದವರು. ನಮ್ಮ ದೈವಗಳನ್ನು ಕೊಲೆ ಮಾಡಿರಬಹುದೇ ಹೊರತು ಅವು ಮಾಯವಾಗಿಲ್ಲ. ಇವರನ್ನು ಜನರು ಬಾಯಿಯಿಂದ ಬಾಯಿಗೆ ಪಾಡ್ದಾನಗಳ ಮೂಲಕ ಸಾಯಲು ಬಿಡಲಿಲ್ಲ. ಪಾಡ್ದಾನಗಳಿಲ್ಲದಿದ್ದರೆ ನಮಗೆ ನಮ್ಮ ದೈವಗಳ ಬಗ್ಗೆ ಗೊತ್ತೇ ಇರುತ್ತಿರಲಿಲ್ಲ ಎಂದು ಅವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಾಂತ ಕುಲಪತಿ ಪ್ರೊ.ಚಿನ್ನಪ್ಪ ಗೌಡ ವಹಿಸಿದ್ದರು. ಕುದ್ರೋಳಿ ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್. ‘ಸಿರಿ ಕುರಲ್’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿದರು. ಸಮಿತಿಯ ಅಧ್ಯಕ್ಷ ಜಯಕರ ಶೆಟ್ಟಿ ಶುಭಾಶಂಸನೆಗೈದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಕಿಶನ್ ಜೆ.ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಬನ್ನಂಜೆ ಬಾಬು ಅಮೀನ್ ದಂಪತಿಯನ್ನು ಅಭಿನಂದಿಸಲಾಯಿತು. ಸಮಿತಿಯ ಕಾರ್ಯಾಧ್ಯಕ್ಷ ರಘುನಾಥ ಮಾಬಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ದಯಾನಂದ ಕರ್ಕೇರ ಸ್ವಾಗತಿಸಿದರು. ಕಾರ್ಯದರ್ಶಿ ಪಾಂಡು ಕೆಳಾರ್ಕಳಬೆಟ್ಟು ವಂದಿಸಿದರು. ಅರ್ಪಿತಾ ಶೆಟ್ಟಿ ಹಾಗೂ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಅಳಿವಿನಂಚಿನಲ್ಲಿರುವ ತುಳುನಾಡಿನ ಪರಿಕರಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ, ಕುಂಬಾರಿಕೆ ಸೇರಿದಂತೆ ಜನಪದದ ಇತರೆ ಪ್ರಕಾರಗಳ ಪ್ರಾತಕ್ಷಿತೆ ನಡೆಯಿತು.

ಬಾಬು ಅಮೀನ್‌ಗೆ ಪುಸ್ತಕ ತುಲಭಾರ

ಅಭಿನಂದನಾ ಸಮಿತಿಯ ವತಿಯಿಂದ 80ರ ಸಂಭ್ರಮದ ಹಿನ್ನೆಲೆಯಲ್ಲಿ ಬನ್ನಂಜೆ ಬಾಬು ಅಮೀನ್ ಅವರಿಗೆ ಅವರೇ ಬರೆದ ಪುಸ್ತಕಗಳಿಂದ ತುಲಭಾರ ನೆರವೇರಿಸಲಾಯಿತು.

ತುಲಭಾರದಲ್ಲಿನ ಪುಸ್ತಕಗಳನ್ನು ಉಡುಪಿ ಪರಿಸರದ ಶಾಲೆಗಳ ಗ್ರಂಥಾಲಯಗಳಿಗೆ ವಿತರಿಸುವುದಾಗಿ ಸಂಘಟಕರು ತಿಳಿಸಿದ್ದಾರೆ.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News