ಅತ್ಯುತ್ತಮ ರಾಷ್ಟ್ರಕ್ಕಾಗಿ ಶ್ರಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಸಹಾಯಕ ಆಯುಕ್ತ ಮಹೇಶಚಂದ್ರ
ಕುಂದಾಪುರ, ಆ.15: ಗುಲಾಮರಿಗಿಂತ ಅತ್ಯಂತ ಕೀಳಾಗಿ ಭಾರತದ ಪ್ರಜೆಗಳನ್ನು ನಡೆಸಿಕೊಂಡ ಬ್ರಿಟಿಷರ ದಾಸ್ಯದಿಂದ ಹೊರಬಂದ ದಿನವಿದು. ಇಂದು ನಮ್ಮ ದೇಶ ಸರಿಯಾದ ಅಭಿವೃದ್ದಿಯ ಹಾದಿಯಲ್ಲಿದ್ದು, ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರವಾಗಿ ಬೆಳೆದು ನಿಂತಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ಮಹೇಶಚಂದ್ರ ಹೇಳಿದ್ದಾರೆ.
ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಗುರುವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಜರಗಿದ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಸ್ವಾತಂತ್ರ್ಯ ಸಂದೇಶ ನೀಡಿದರು.
ನಮ್ಮ ದೇಶವನ್ನು ಮುನ್ನಡೆಸಲು ವಿಶ್ವದ ಅತ್ಯುತ್ತಮ ರಾಷ್ಟ್ರವಾಗಿ ಶ್ರಮಿಸುವುದು ನಮ್ಮ ಜವಾಬ್ದಾರಿಯಾಗಬೇಕು. ಉಡುಪಿ ಜಿಲ್ಲೆ ಅನೇಕ ಧರ್ಮಕೇಂದ್ರಗಳ ತವರೂರಾಗಿದೆ. ಕೃಷ್ಣಮಠದ ರಥಬೀದಿಯಲ್ಲಿ ಸ್ವಾತಂತ್ರ್ಯ ಹೋರಾಟದ ಸಭೆ, ನಾಟಕಗಳು ನಡೆದಿದ್ದು, ಮಹಾತ್ಮ ಗಾಂಧೀಜಿಯೂ ಉಡುಪಿ, ಕುಂದಾಪುರಕ್ಕೆ ಬಂದಿದ್ದಾರೆ. ಸಾಹಿತಿ ಡಾ.ಶಿವರಾಮ ಕಾರಂತರು ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನಗಳನ್ನು ಸ್ಮರಿಸಿಕೊಳ್ಳಬೇಕು. ಸ್ವಾತಂತ್ರ್ಯ ಸಿಕ್ಕಿ ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಈ ಹೊತ್ತಿಗೆ ಎಲ್ಲರಿಗೂ ಒಂದೇ ರೀತಿ ಸ್ವಾತಂತ್ರ್ಯ ಸಿಕ್ಕಿದೆಯಾ ಎನ್ನುವ ಜಿಜ್ಞಾಸೆ ನಮ್ಮೊಳಗಿದೆ. ಧರ್ಮ-ಜಾತಿಗಳ ಮಧ್ಯೆ ವೈಷಮ್ಯ ಹರಡಿ ಅನೇಕ ಮಂದಿ ಅದರ ಲಾಭ ಪಡೆಯುತ್ತಿದ್ದಾರೆ. ಹೊಂದಾಣಿಕೆಯ ಮೂಲಕ ನಾವೆಲ್ಲರೂ ಒಗ್ಗಟ್ಟಾ ದಾಗ ನಮ್ಮ ದೇಶ ಪ್ರಗತಿಯ ಪಥದತ್ತ ಸಾಗುತ್ತದೆ ಎಂದರು.
2023ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಗರಿಷ್ಠ ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ತಾಳೆ ಬೆಳೆ ಯೋಜನೆಯಡಿ ರೈತರಿಗೆ ತಾಳೆ ಗಿಡಗಳನ್ನು ವಿತರಿಸಲಾಯಿತು. ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿತರಿಸಲಾಗುವ ಟಾಕಿಂಗ್ ಲ್ಯಾಪ್‌ಟಾಪ್, ಹೊಲಿಗೆ ಯಂತ್ರ ಹಾಗೂ ಶ್ರವಣ ಸಾಧನಗಳನ್ನು ಹಸ್ತಾಂತರಿಸಲಾಯಿತು.
ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ತಾ.ಪಂ ಇಒ ಶಶಿಧರ ಕೆ.ಜಿ, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ವರ್ಣೇಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಮೀನು ಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಸಂದೀಪ್ ಖಾರ್ವಿ, ಸಂತೋಷ್ ಶೆಟ್ಟಿ, ಪ್ರಭಾಕರ ವಿ, ಶ್ರೀಧರ ಶೇರಿಗಾರ್, ನಿತ್ಯಾನಂದ ಕೆ.ಜಿ, ವೀಣಾ ಭಾಸ್ಕರ್, ಪ್ರಭಾವತಿ ಶೆಟ್ಟಿ, ಶ್ವೇತಾ ಸಂತೋಷ್, ವನಿತಾ ಬಿಲ್ಲವ, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ ಉಪಸ್ಥಿತರಿದ್ದರು.
ತಹಸೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಸ್ವಾಗತಿಸಿ, ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶೋಭಾ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.