ಚಲಿಸುತಿದ್ದ ರೈಲನ್ನೇರುವ ವೇಳೆ ಬಿದ್ದ ಯುವತಿ: ರಕ್ಷಿಸಿದ ಆರ್‌ಪಿಎಫ್ ಮಹಿಳಾ ಸಿಬ್ಬಂದಿ; ರೈಲ್ವೆಯಿಂದ ಬಹುಮಾನ

Update: 2024-09-20 16:12 GMT

ಅಪರ್ಣರಿಗೆ ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ ಚೆಕ್‌ ಹಸ್ತಾಂತರ

ಉಡುಪಿ, ಸೆ.20: ಚಲಿಸುತಿದ್ದ ರೈಲನ್ನು ಓಡಿ ಬಂದು ಹತ್ತುವ ವೇಳೆ ಆಯತಪ್ಪಿ ಬಿದ್ದ ಯುವತಿಯೊಬ್ಬರನ್ನು ಅಲ್ಲಿದ್ದ ರೈಲ್ವೆ ಪೊಲೀಸ್ ಪಡೆಯ ಮಹಿಳಾ ಸಿಬ್ಬಂದಿ ಸಮಯೋಚಿತ ಕಾರ್ಯಾಚರಣೆಯಿಂದ ರಕ್ಷಿಸಿದ ಘಟನೆ ಇಂದು ಬೆಳಗ್ಗೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮಂಗಳೂರಿನಿಂದ ಬೆಳಗ್ಗೆ 7:30ಕ್ಕೆ ಆಗಮಿಸಿದ ಮಂಗಳೂರು ಸೆಂಟ್ರಲ್- ಮಡಗಾಂವ್ ಪ್ಯಾಸೆಂಜರ್ ರೈಲು ಉಡುಪಿ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ನಿಂತು ಚಲಿಸಲಾರಂಭಿಸಿದ ವೇಳೆ ತಿಂಡಿ ತರಲು ಇಳಿದಿದ್ದ ಯುವತಿ ಅವಸರವಸರವಾಗಿ ಓಡಿಬಂದು ಪ್ಲಾಟ್‌ಫಾರ್ಮ್ ನಂ.1ರಲ್ಲಿ ರೈಲು ಬೋಗಿ ಹತ್ತುವ ವೇಳೆ ಆಯತಪ್ಪಿ ಕೆಳಕ್ಕುರುಳಿದ್ದಳು.

ಅಲ್ಲೇ ಪಕ್ಕದಲ್ಲಿ ನಿಂತು ಅಲ್ಲಿದ್ದ ಪ್ರಯಾಣಿಕರನ್ನು ದೂರ ಸರಿಸುತಿದ್ದ ಆರ್‌ಪಿಎಫ್ ಮಹಿಳಾ ಸಿಬ್ಬಂದಿ ಅಪರ್ಣ ತಕ್ಷಣ ಇದನ್ನು ಗಮನಿ ಧಾವಿಸಿ ಬಂದು ಆಕೆಯನ್ನು ಮೇಲಕ್ಕೆ ಎಳೆದುಕೊಂಡರು. ಅದಾಗಲೇ ಯುವತಿಯ ಕಾಲುಗಳು ಪ್ಲಾಟ್‌ಫಾರಂ ಹಾಗೂ ಚಲಿಸುವ ರೈಲಿನ ಮದ್ಯೆ ಸಿಲುಕಿತ್ತು. ಒಂದಿಬ್ಬರು ಪ್ರಯಾಣಿಕರ ನೆರವಿನಿಂದ ಅಪರ್ಣ ಅವರು ಯುವತಿಯನ್ನು ಮೇಲಕ್ಕೆಳೆದುಕೊಂಡು ಆಕೆಯನ್ನು ಅಪಾಯದಿಂದ ಪಾರು ಮಾಡಿದರು.

ಘಟನೆ ತಿಳಿದಾಕ್ಷಣ ರೈಲ್ವೆ ಗಾರ್ಡ್ ವಾಕಿಟಾಕಿ ಮೂಲಕ ರೈಲನ್ನು ನಿಲ್ಲಿಸಲು ಸೂಚಿಸಿದ್ದು, ಲೋಕೊ ಪೈಲೆಟ್ ರೈಲನ್ನು ನಿಲ್ಲಿಸಿದರು. ನಿಲ್ದಾಣದಲ್ಲಿದ್ದ ಆರ್‌ಪಿಎಫ್ ಇನ್‌ಸ್ಪೆಕ್ಟರ್ ತಕ್ಷಣ ಸ್ಥಳಕ್ಕೆ ಧಾವಿಸಿ ಬಂದು ಮಹಿಳಾ ಪ್ರಯಾಣಿಕರ ಯೋಗ ಕ್ಷೇಮ ವಿಚಾರಿಸಿದರು. ಆಕೆಗೆ ಯಾವುದೇ ಗಾಯಗಳಾಗಿರಲಿಲ್ಲ. ಮಹಿಳಾ ಕಾನ್‌ಸ್ಟೇಬಲ್ ಆಕೆಯನ್ನು ಸುರಕ್ಷಿತವಾಗಿ ರೈಲು ಹತ್ತಿಸಿದರು. ಮುಂದೆ ಕುಂದಾಪುರ ಹಾಗೂ ಭಟ್ಕಳ ನಿಲ್ದಾಣಗಳಲ್ಲೂ ಆಕೆಯ ಆರೋಗ್ಯವನ್ನು ಸಿಬ್ಬಂದಿಗಳು ವಿಚಾರಿಸಿದ್ದರು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಮಂಗಳೂರು ಕಂಕನಾಡಿ ಜಂಕ್ಷನ್‌ನಲ್ಲಿ ರೈಲನ್ನೇರಿದ್ದ ಯುವತಿ ನಿಹಾರಿಕಾ ಡಿ.ಎನ್. ಗೋಕರ್ಣಕ್ಕೆ ತೆರಳುತಿದ್ದರು ಎಂದು ತಿಳಿದುಬಂದಿದೆ. ಅಪರ್ಣ ಅವರ ಸಮಯಪ್ರಜ್ಞೆಯ ನಡೆಯಿಂದ ಆಕೆ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಅಪರ್ಣ ಅವರ ಕಾರ್ಯದ ಬಗ್ಗೆ ಉಡುಪಿ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಆರ್‌ಪಿಎಫ್ ಸಿಬ್ಬಂದಿ ಅಪರ್ಣ ಅವರ ಸಮಯೋಚಿತ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಾರವಾರದ ಆರ್‌ಆರ್‌ಎಂ ಆಕೆಗೆ 5000ರೂ. ನಗದು ಬಹುಮಾನವನ್ನು ಘೋಷಿಸಿದರು. ಕೊಂಕಣ ರೈಲ್ವೆಯ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ ಅವರು 5000ರೂ.ಗಳ ಚೆಕ್‌ನ್ನು ಅಪರ್ಣ ಅವರಿಗೆ ಉಡುಪಿ ನಿಲ್ದಾಣದಲ್ಲಿ ಹಸ್ತಾಂತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News