ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸಕ್ಕಾಗಿ AIITAಯಿಂದ ರಾಜ್ಯ ಮಟ್ಟದ ಆನ್‌ಲೈನ್ ಸೆಮಿನಾರ್

ಬೆಂಗಳೂರು: ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳಲ್ಲಿ ಭಯ ಮತ್ತು ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ಐಟಾ) ಕರ್ನಾಟಕ ಜ. 26ರಂದು ರಾತ್ರಿ 9 ಗಂಟೆಗೆ ರಾಜ್ಯಮಟ್ಟದ ಆನ್‌ಲೈನ್ ಮಾರ್ಗದರ್ಶನ ಮತ್ತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಐಟಾ ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಖ್ಯಾತ ಮನೋವೈದ್ಯರು ಹಾಗೂ ಉಮ್ಮೀದ್ ವ್ಯಸನ ನಿವಾರಣೆ ಮತ್ತು ಪುನರ್ವಸತಿ ಕೇಂದ್ರದ ಸ್ಥಾಪಕಿ ಡಾ. ಆಸಿಫಾ ಖಲೀಲ್ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮಲ್ಲಿ ಆತ್ಮವಿಶ್ವಾಸವನ್ನು ಮತ್ತು ಮಾಸನಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಅಗತ್ಯ ಸಲಹೆಗಳನ್ನು ಪಡೆಯಬಹುದಾಗಿದೆ.
ಲೈವ್ ಪ್ರಸಾರ: ಆನ್‌ಲೈನ್ ಕಾರ್ಯಕ್ರಮವನ್ನು AIITA Karnataka ಯೂಟ್ಯೂಬ್ ಚಾನೆಲ್ ಮೂಲಕ ಲೈವ್ ಪ್ರಸಾರ ಮಾಡಲಾಗುವುದು.
ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪರೀಕ್ಷಾ ಒತ್ತಡದಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಒತ್ತಡವನ್ನು ಅನುಭವಿಸುತ್ತಿ ರುವ ಘಟನೆಗಳು ವರದಿಯಾಗಿದ್ದು, ಪುತ್ತೂರಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಸದರಿ ವಿಷಯವನ್ನು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಮನವರಿಕೆ ಮಾಡಿಸಿ ಐಟಾದ ಯೂಟ್ಯೂಬ್ ಚಾನೆಲ್ ಲೈವ್ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸಲು ಪ್ರೇರೇಪಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.