ಡಾ. ಸವಿತಾ ಕಾಮತ್‌ಗೆ ಐಐಎಂಬಿಯಲ್ಲಿ ಅಗ್ರಸ್ಥಾನ

ಭಟ್ಕಳ, ಏಪ್ರಿಲ್ 25, 2025: ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (ಐಐಎಂಬಿ) ನಡೆಸಿದ ಆಸ್ಪತ್ರೆ ನಿರ್ವಹಣಾ ಕೋರ್ಸ್‌ನಲ್ಲಿ ಕರ್ನಾಟಕದ 20 ವೈದ್ಯರಲ್ಲಿ 15 ಮಂದಿ ಯಶಸ್ವಿಯಾಗಿ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಈ ಪೈಕಿ ಭಟ್ಕಳ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ. ಸವಿತಾ ಕಾಮತ್, ಚಿಕ್ಕಬಳ್ಳಾಪುರದ ಡಾ. ರಮೇಶ್ ಮತ್ತು ಬೆಂಗಳೂರಿನ ಡಾ. ರಾಧಾಕೃಷ್ಣ ಅವರು ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ವಿಶೇಷವಾಗಿ, ಡಾ. ಸವಿತಾ ಕಾಮತ್ ಅವರು ಕೋರ್ಸ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.
ಕರ್ನಾಟಕದಾದ್ಯಂತ ಆಯ್ಕೆಯಾದ 20 ವೈದ್ಯರು ಈ ಕೋರ್ಸ್‌ನಲ್ಲಿ ಭಾಗವಹಿಸಿದ್ದರು. ಆಸ್ಪತ್ರೆ ನಿರ್ವಹಣೆಯ ಆಧುನಿಕ ತಂತ್ರಗಳು, ಆರೋಗ್ಯ ಸೇವೆಯ ಗುಣಮಟ್ಟ ಸುಧಾರಣೆ ಮತ್ತು ಆಡಳಿತ ಕೌಶಲ್ಯಗಳನ್ನು ಕಲಿಯುವ ಈ ಕೋರ್ಸ್, ವೈದ್ಯಕೀಯ ಕ್ಷೇತ್ರದಲ್ಲಿ ನಾಯಕತ್ವ ಮತ್ತು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಡಾ. ಸವಿತಾ ಕಾಮತ್ ಅವರ ಈ ಸಾಧನೆ ವೃತ್ತಿಪರ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಡಾ. ಸವಿತಾ ಅವರ ಈ ಯಶಸ್ಸಿಗೆ ಆರೋಗ್ಯ ಕ್ಷೇತ್ರದ ಗಣ್ಯರು, ಸಹೋದ್ಯೋಗಿಗಳು ಮತ್ತು ಭಟ್ಕಳದ ಜನತೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಸಾಧನೆ ರಾಜ್ಯದ ಆರೋಗ್ಯ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸಲು ಸ್ಫೂರ್ತಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡಾ. ಸವಿತಾ ಕಾಮತ್ ಅವರು ಭಟ್ಕಳ ಸರ್ಕಾರಿ ಆಸ್ಪತ್ರೆಯನ್ನು ಉನ್ನತ ಮಟ್ಟಕ್ಕೆ ಏರಿಸುವಲ್ಲಿ ಅಪಾರ ಶ್ರಮವಹಿಸಿದ್ದಾರೆ. ಇವರ ಪ್ರಯತ್ನದಿಂದ ಭಟ್ಕಳ ತಾಲೂಕು ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಿಗಿಂತಲೂ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಉತ್ತಮ ವೈದ್ಯರಾಗಿ ಮತ್ತು ಆಡಳಿತಾಧಿಕಾರಿಯಾಗಿ ಡಾ. ಸವಿತಾ ಅವರು ತಮ್ಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದ್ದಾರೆ.
ಇವರ ಯಶಸ್ವಿಗೆ ಭಟ್ಕಳದ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ವೈದ್ಯರು ಶಿಕ್ಷಣ ಸಂಸ್ಥೆಯ ಪ್ರಮುಖರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ