ಉತ್ತರ ಕನ್ನಡದಲ್ಲಿ ರಿಕ್ರಿಯೇಶನ್ ಕ್ಲಬ್‌ಗಳಿಗೆ ಪೊಲೀಸರಿಂದ ಕಿರುಕುಳ: ಅಸೋಸಿಯೇಷನ್ ಆರೋಪ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ರಿಕ್ರಿಯೇಶನ್ ಕ್ಲಬ್‌ಗಳಿಗೆ ಪೊಲೀಸರು ಅನಾವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾ ರಿಕ್ರಿಯೇಶನ್ ಕ್ಲಬ್ ಅಸೋಸಿಯೇಶನ್ ಅಧ್ಯಕ್ಷ ವಾಸು ನಾಯ್ಕ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 30ಕ್ಕೂ ಹೆಚ್ಚು ರಿಕ್ರಿಯೇಶನ್ ಕ್ಲಬ್‌ಗಳು ಕಾನೂನುಬದ್ಧ ಲೈಸೆನ್ಸ್ ಪಡೆದು, ರಮ್ಮಿ ಆಟದ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಆದರೆ ಪೊಲೀಸರು ಪದೇ ಪದೇ ಪರಿಶೀಲನೆ ಮಾಡುವ ನೆಪದಲ್ಲಿ ಆಟಗಾರರಿಗೆ ತೊಂದರೆ ಉಂಟುಮಾಡುತ್ತಿದ್ದು, ಕ್ಲಬ್‌ಗಳನ್ನು ತಡೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದರು. ರಿಕ್ರಿಯೇಶನ್ ಕ್ಲಬ್‌ಗಳು 24 ಗಂಟೆಗಳ ಸಿಸಿಟಿವಿ ಅವಲೋಕನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆದಿಲ್ಲ. ಉತ್ತರ ಕನ್ನಡದಲ್ಲಿ ಮಾತ್ರ ಕ್ಲಬ್‌ಗಳಿಗೆ ಅಡ್ಡಿಪಡಿಸಲಾಗುತ್ತಿದ್ದು, ಇತರ ಜಿಲ್ಲೆಗಳಲ್ಲಿ ಈ ಸಮಸ್ಯೆ ಇಲ್ಲ ಎಂದರು.
ಈ ಸಮಸ್ಯೆಯನ್ನು ಜಿಲ್ಲಾ ಎಸ್‌ಪಿ ಮತ್ತು ಗೃಹಸಚಿವರಿಗೆ ಮನವಿ ಮಾಡಿದ್ದರೂ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಜ. 28ರಿಂದ ಎಲ್ಲಾ ಕ್ಲಬ್‌ಗಳನ್ನು ಪುನರಾರಂಭ ಮಾಡಲಾಗುತ್ತಿದ್ದು, ಕಾನೂನಾತ್ಮಕ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಸೋಶಿಯೇಶನ್ ಉಪಾಧ್ಯಕ್ಷ ಪರಮೇಶ್ವರ ಭಟ್ಟ ಶಿರಸಿ, ಗಿರೀಶ ನಾಯ್ಕ, ಸಂದೀಪ ಪೂಜಾರಿ, ಜಟ್ಟಪ್ಪ ನಾಯ್ಕ, ವಿನಯ ಪಡಿಯಾರ, ನಾಗರಾಜ ಶೆಟ್ಟಿ, ಅನಿಲ ಶಿರಸಿಕರ್, ತಿಮ್ಮಪ್ಪ ನಾಯ್ಕ ಮುಂತಾದವರಿದ್ದರು.