ಮಹಾಶಿವರಾತ್ರಿ ಉತ್ಸವಕ್ಕೆ ಭಟ್ಕಳ ಮುರ್ಡೇಶ್ವರದಲ್ಲಿ ಸಿದ್ಧತೆ: ಸಚಿವ ಮಂಕಾಳ ವೈದ್ಯ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ಕಳೆದ ವರ್ಷದಿಂದ ಆರಂಭಗೊಂಡ ಮಹಾಶಿವರಾತ್ರಿ ಉತ್ಸವವನ್ನು ಈ ಬಾರಿಯೂ ವಿಜೃಂಭಣೆಯೊಂದಿಗೆ ಆಚರಿಸಲು ಸಿದ್ಧತೆಗಳು ನಡೆಯುತ್ತಿದ್ದು, ಸ್ಥಳೀಯರು ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿನಂತಿಸಿದ್ದಾರೆ.
ಬುಧವಾರ ತಾಲೂಕು ಆಡಳಿತ ಭವನದಲ್ಲಿ ನಡೆದ ಮಹಾಶಿವರಾತ್ರಿ ಉತ್ಸವದ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿ ದರು. ಹಿಂದಿನ ವರ್ಷದಂತೆ ಈ ವರ್ಷವೂ ದೇವಾಲಯವನ್ನು ನಸುಕಿನ ಜಾವ 4 ಗಂಟೆಗೆ ತೆರೆಯಲು ಆಡಳಿತ ಮಂಡಳಿಯವರಿಗೆ ವಿನಂತಿಸಲಾಗಿದೆ. ಇದರಿಂದ ಪಾದಯಾತ್ರೆ ನಡೆಸಿ ಬರುವ ಭಕ್ತರಿಗೆ ಬೆಳಿಗ್ಗೆಯಿಂದಲೇ ದೇವರ ದರ್ಶನ ಸಾಧ್ಯವಾಗಲಿದೆ. ಶಿವರಾತ್ರಿ ಪ್ರಯುಕ್ತ ಶಿರೂರು, ಭಟ್ಕಳ, ಉತ್ತರಕೊಪ್ಪ, ಮಂಕಿ, ಹೊನ್ನಾವರದಿಂದ ಬರುವ ಭಕ್ತರಿಗೆ ವಿಶೇಷ ಬಸ್ ಸೌಲಭ್ಯ ಒದಗಿಸಲು ಕನಿಷ್ಠ 20 ಬಸ್‌ಗಳ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ.
ಶಿವರಾತ್ರಿಯ ಜಾಗರಣೆಯ ಅಂಗವಾಗಿ ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ರಾಜ್ಯದ ಪ್ರಸಿದ್ಧ ಕಲಾವಿದರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳಿಗೆ ಸಹ ಅವಕಾಶ ನೀಡಲಾಗಿದೆ. ಆಸಕ್ತರು ಶುಕ್ರವಾರದೊಳಗೆ ತಹಸೀಲ್ದಾರ ಅಥವಾ ಸಹಾಯಕ ಆಯುಕ್ತರ ಕಚೇರಿಯಲ್ಲಿ ಹೆಸರು ನೊಂದಾಯಿಸಬಹುದು. ಭಕ್ತಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಇತರ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಮಾತನಾಡಿ, ಶಿವರಾತ್ರಿಯಂದು ಸರಬರಾಜಾಗುವ ಆಹಾರದ ಗುಣಮಟ್ಟವನ್ನು ಮುಂಚಿತ ವಾಗಿ ಪರೀಕ್ಷಿಸಬೇಕು. ನೀರಿನ ಸ್ವಚ್ಛತೆ, ಸ್ಥಳದ ಪರಿಸರ ಸುಧಾರಣೆ, ವಿದ್ಯುತ್ ಸಂಪರ್ಕ, ಅಗ್ನಿಶಾಮಕ ವ್ಯವಸ್ಥೆ, ಮೊಬೈಲ್ ಶೌಚಾಲಯಗಳು ಮುಂತಾದ ಸೌಲಭ್ಯಗಳನ್ನು ಪರಿಶೀಲಿಸಿ, ಯಾವುದೇ ಅಸೌಕರ್ಯ ಉಂಟಾಗದಂತೆ ನೋಡಿಕೊಳ್ಳಬೇಕೆಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಮಾತನಾಡಿ, ಕಳೆದ ಬಾರಿಗೆ ಶಿವನ ಮೂರ್ತಿಯನ್ನು ವಿಕೃತಗೊಳಿಸಿ ಶಾಂತಿ ಭಂಗ ಮಾಡಲು ಯತ್ನಿಸಿದ ಅಕ್ರಮ ಚಟುವಟಿಕೆಯನ್ನು ತಡೆದು ಆರೋಪಿಗಳನ್ನು ಬಂಧಿಸಿದ್ದೆವು. ಈ ಬಾರಿ ಅಂತಹ ಯಾವುದೇ ಪ್ರಯತ್ನಗಳು ನಡೆದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಸಂದೇಶಗಳನ್ನು ಹರಡಿದರೆ, ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಎಸಿ ಕಾವ್ಯಾರಾಣಿ, ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಡಿವೈಎಸ್‌ಪಿ ಮಹೇಶ್ ಎಮ್. ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸಭೆಯಲ್ಲಿ ಜನತೆ ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.