ಇಸ್ಲಾಂ ಶಾಂತಿಯನ್ನು ಬೋಧಿಸುತ್ತದೆ, ಹಿಂಸೆಯನ್ನಲ್ಲ: ಡಾ. ಮುನಿರಿ ಅತಿಕುರ್ ರೆಹಮಾನ್

ಭಟ್ಕಳ: ರಾಬಿತಾ ಸೊಸೈಟಿ ಭಟ್ಕಳದ ಪ್ರಧಾನ ಕಾರ್ಯದರ್ಶಿ ಹಾಗೂ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಸದಸ್ಯರಾದ ಡಾ. ಮುನಿರಿ ಅತಿಕುರ್ ರೆಹಮಾನ್ ಅವರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಇತ್ತೀಚಿನ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆಯು ಅತ್ಯಂತ ದುಃಖಕರವಾಗಿದ್ದು, ಇಂತಹ ಭಯೋತ್ಪಾದಕ ಕೃತ್ಯಗಳು ನಾಚಿಕೆಗೇಡಿನವು ಮತ್ತು ಕಠಿಣ ಖಂಡನೆಗೆ ಅರ್ಹವಾಗಿವೆ ಎಂದು ಅವರು ಹೇಳಿದ್ದಾರೆ. ಡಾ. ಮುನಿರಿ ಅವರು ಸಂತ್ರಸ್ತರಿಗಾಗಿ ದುಃಖ ವ್ಯಕ್ತಪಡಿಸಿದ್ದು, ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಮುನಿರಿ, "ಈ ದಾಳಿಯನ್ನು ಎಷ್ಟೇ ಖಂಡಿಸಿದರೂ ಸಾಕಾಗದು. ಈ ಕ್ರೂರ ಕೃತ್ಯಕ್ಕೆ ಕಾರಣರಾದವರನ್ನು ಶೀಘ್ರವಾಗಿ ಗುರುತಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ," ಎಂದರು. ಧರ್ಮದ ಹೆಸರಿನಲ್ಲಿ ನಡೆಯುವ ಅಪರಾಧ ಕೃತ್ಯಗಳು ದೇಶದ ಶಾಂತಿ ಮತ್ತು ಭದ್ರತೆಗೆ ಅಪಾಯಕಾರಿ ಎಂದು ಅವರು ಹೇಳಿದರು. ಇಂತಹ ಕೃತ್ಯನ ಗಳು ನಿರಪರಾಧಿಗಳ ಜೀವವನ್ನು ಬಲಿತೆಗೆದುಕೊಳ್ಳುವುದರ ಜೊತೆಗೆ ಜನರಲ್ಲಿ ಭಯವನ್ನು ಹರಡುತ್ತವೆ ಎಂದರು.
ಪಹಲ್ಗಾಮ್ ದಾಳಿಯ ನಂತರ, ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಮತ್ತು ಯಾವುದೇ ಧರ್ಮವು ಹಿಂಸೆಯನ್ನು ಬೆಂಬಲಿಸುವುದಿಲ್ಲ ಎಂದು ಡಾ. ಮುನಿರಿ ಸ್ಪಷ್ಟಪಡಿಸಿದರು. ಇಸ್ಲಾಂ ಶಾಂತಿ, ಪ್ರೀತಿ ಮತ್ತು ಸಹಿಷಣುತೆಯ ಧರ್ಮವಾಗಿದೆ ಎಂದು ಅವರು ಒತ್ತಿ ಹೇಳಿದರು.
ಕೆಲವು ದಾರಿತಪ್ಪಿದ ವ್ಯಕ್ತಿಗಳ ಕೃತ್ಯಗಳಿಗಾಗಿ ಯಾವುದೇ ನಿರ್ದಿಷ್ಟ ಸಮುದಾಯವನ್ನು ದೂಷಿಸಬಾರದು ಎಂದು ಡಾ. ಮುನಿರಿ ಎಲ್ಲರಿಗೂ ಮನವಿ ಮಾಡಿದರು. ಭಯೋತ್ಪಾದಕರು ಇಸ್ಲಾಂ ಅಥವಾ ಯಾವುದೇ ಧರ್ಮವನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ಹೇಳಿದರು. ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲು ಮತ್ತು ದೇಶಾದ್ಯಂತ ಸೌಹಾರ್ದ, ಸಹೋದರತೆ ಮತ್ತು ಶಾಂತಿಯನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡಲು ಅವರು ಎಲ್ಲರನ್ನೂ ಕೋರಿದರು.
ದಾಳಿಯಲ್ಲಿ ಜೀವ ಕಳೆದುಕೊಂಡವರ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಡಾ. ಮುನಿರಿ ತಮ್ಮ ಆಳವಾದ ಸಾಂತ್ವನ ಮತ್ತು ಒಡನಾಟವನ್ನು ವ್ಯಕ್ತಪಡಿಸಿದರು. "ಸಂತ್ರಸ್ತರ ಕುಟುಂಬಗಳನ್ನು ಮಾತ್ರ ವಲ್ಲ, ಇಡೀ ದೇಶವನ್ನೂ ಮತ್ತು ಸಮಸ್ತ ಮಾನವಕುಲವನ್ನೂ ಇಂತಹ ಕ್ರೂರ ಘಟನೆಗಳಿಂದ ರಕ್ಷಿಸಲು ನಾವು ಪ್ರಾರ್ಥಿಸುತ್ತೇವೆ," ಎಂದರು. ಭಯೋತ್ಪಾದನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಇಂತಹ ದಾಳಿಗಳನ್ನು ತಡೆಗಟ್ಟಲು ಸರ್ಕಾರವು ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇವೆ" ಎಂದು ಡಾ. ಮುನಿರಿ ಹೇಳಿದರು.