ಪಾಕಿಸ್ತಾನ ಪರ ಬೇಹುಗಾರಿಕೆ ಪ್ರಕರಣ| ವೇತನ್ ಲಕ್ಷ್ಮಣ, ಅಕ್ಷಯ್ ರವಿ ಸಹಿತ ಒಟ್ಟು 8 ಮಂದಿ ಸೆರೆ: ಎನ್‌ಐಎ ವರದಿ
ಕಾರವಾರ, ಫೆ.19: ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆ ಮತ್ತು ಕೇರಳದ ಕೊಚ್ಚಿ ನೌಕಾನೆಲೆಯ ಸೂಕ್ಷ್ಮ ಮಾಹಿತಿ ಯನ್ನು ಪಾಕಿಸ್ತಾನ ಮೂಲದ ಬೇಹುಗಾರರಿಗೆ ಹಂಚಿಕೊಂಡಿದ್ದ ಮೂವರು ಆರೋಪಿಗಳನ್ನು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಂಧಿಸಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಿಂದ ಮಂಗಳವಾರ ವೇತನ್ ಲಕ್ಷ್ಮಣ ತಾಂಡೇಲ ಮತ್ತು ಅಕ್ಷಯ್ ರವಿ ನಾಯ್ಕ ಎಂಬ ಯುವಕರನ್ನು ಬಂಧಿಸಲಾಗಿದೆ. ಕೊಚ್ಚಿಯಿಂದ ಅಭಿಲಾಷ್ ಪಿ.ಎ. ಎಂಬ ಯುವಕನನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಬಂಧಿತರ ಸಂಖ್ಯೆ 8ಕ್ಕೆ ಏರಿದೆ ಎಂದು ಎನ್‌ಐಎ ಹೇಳಿದೆ.
ಬಂಧಿತ ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಗುಪ್ತಚರ ಆಪರೇಟಿವ್‌ಗಳೊಂದಿಗೆ (ಪಿಐಒ) ಸಂಪರ್ಕದಲ್ಲಿರುವುದು ಕಂಡು ಬಂದಿದೆ. ಅವರು ಕಾರವಾರ ನೌಕಾನೆಲೆ ಮತ್ತು ಕೊಚ್ಚಿ ನೌಕಾನೆಲೆಯಲ್ಲಿ ಭಾರತೀಯ ರಕ್ಷಣಾ ಸಂಸ್ಥೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು ಮತ್ತು ಎನ್‌ಐಎ ತನಿಖೆಯ ಪ್ರಕಾರ, ಮಾಹಿತಿಯ ವಿನಿಮಯವಾಗಿ ಪಿಐಒಗಳಿಂದ ಹಣವನ್ನು ಪಡೆಯುತ್ತಿದ್ದರು ಎಂದು ಎನ್‌ಐಎ ತಿಳಿಸಿದೆ.
ಬಂಧಿತ ಯುವಕರ ವಿರುದ್ಧ ಐಪಿಸಿಯ ಸೆಕ್ಷನ್ 120 ಬಿ ಮತ್ತು 121 ಎ, ಯುಎ(ಪಿ) ಕಾಯ್ದೆಯ ಸೆಕ್ಷನ್ 17 ಮತ್ತು 18 ಮತ್ತು ಸೆಕ್ಷನ್ 3ರ ಅಡಿಯಲ್ಲಿ ಆಂಧ್ರ ಪ್ರದೇಶದ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಮೂಲತಃ ದಾಖಲಿಸಿದ ಪ್ರಕರಣದಲ್ಲಿ ಇದುವರೆಗೆ ಇಬ್ಬರು ಪಾಕಿಸ್ತಾನಿ ಆಪರೇಟಿವ್‌ಗಳು ಸೇರಿದಂತೆ ಐವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.