ಅಂಬೇಡ್ಕರ್ ಗೆ ಅವಮಾನ: ವಿಜಯನಗರ ಜಿಲ್ಲಾ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ
ವಿಜಯನಗರ: ಸಂಸತ್ ನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ನೀಡಿರುವ ಅವಮಾನಕರ ಹೇಳಿಕೆಯನ್ನು ಖಂಡಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ಇಂದಿನ ವಿಜಯನಗರ ಜಿಲ್ಲಾ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೊಸಪೇಟೆ ನಗರದಲ್ಲಿ ಬಂದ್ಗೆ ಬಹುತೇಕ ಉತ್ತಮ ಸ್ಪಂದನ ವ್ಯಕ್ತವಾಗಿತ್ತು. ಹೊಸಪೇಟೆಯಲ್ಲಿ ಪ್ರಮುಖ ಮಾರುಕಟ್ಟೆಗಳೆಲ್ಲ ಮುಚ್ಚಿದ್ದವು. ಸದಾ ಜನರಿಂದ ಗಿಜಿಗಿಡುತ್ತಿದ್ದ ಬಸ್ ನಿಲ್ದಾಣ ಪರಿಸರ, ಮೇನ್ ಬಜಾರ್, ಗಾಂಧಿ ಚೌಕ್ಗಳಲ್ಲಿ ರಸ್ತೆಗಳು ಬಿಕೋ ಎನ್ನುತ್ತಿವೆ. ಕಾಲೇಜ್ ರಸ್ತೆಯ ಇಕ್ಕೆಲಗಳಲ್ಲಿ ಇರುವ ಮಾಲ್ಗಗಳು ಸಹ ಬಂದ್ಗೆ ಬೆಂಬಲ ಸೂಚಿಸಿದ್ದು ಕಂಡು ಬಂತು. ಕೆಲವು ಪೆಟ್ರೋಲ್ ಬಂಕ್ಗಳು ಮುಚ್ಚಿದ್ದವು.
ಇನ್ನು ಸಂವಿಧಾನ ಸಂರಕ್ಷಣಾ ಸಮಿತಿಯಿಂದ ನಗರದ ವಾಲ್ಮೀಕಿ ವೃತದಿಂದ ದುರ್ಗಾ ಮಸೀದಿ ರೋಡ್ ಮಹಾತ್ಮ ಗಾಂಧಿ ವೃತ ಬಸ್ ಸ್ಟ್ಯಾಂಡ್ ರೋಡ್ ಮತ್ತು ಪುನೀತ್ ರಾಜಕುಮಾರ್ ವೃತ್ತ ದಿಂದ್ದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆದವು.
ಬಳಿಕ ಕೇಂದ್ರ ಗೃಹಸಚಿವ ಅಮಿತ್ ಶಾರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಹೊಸಪೇಟೆ ತಾಲೂಕು ದಂಡಾಧಿಕಾರಿ ಶೃತಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮರಡಿ ಜಂಬಯ್ಯ ನಾಯಕ. ಬಣ್ಣದ ಮನೆಯ ಸೋಮಶೇಖರ್, ಸ್ಲಂ ವೆಂಕಟೇಶ್, ಸಣ್ಣ ಮಾರಪ್ಪ, ರಾಮಚಂದ್ರ ಬಾಬು, ಸಂತೋಷ್, ಮುಹಮ್ಮದ್ ಇಮಾಮ್ ನಿಯಾಝಿ, ನಿಮಗಲ್ಲ ರಾಮಕೃಷ್ಣ, ಬಡ ವಲಿ, ಅಬ್ದುಲ್ ಖಾದರ್ ರಫ್ಫಾಯಿ, ಹುಲಿಗೆಮ್ಮ, ನಾಗರತ್ನಮ್ಮ, ತಾರೆಹಳ್ಳಿ ಹನುಮಂತಪ್ಪ, ಎಲ್.ಮಂಜುನಾಥ, ಜಾಫರ್, ಅಫ್ಸಲ್ ಬೇಗ್, ಮಹೇಶ, ಪೀರ್ ಬಾಷಾ ಮತ್ತಿತರರು ಉಪಸ್ಥಿತರಿದ್ದರು.