ಮುಂದಿನ ವಿಚಾರಣೆವರೆಗೆ ವಕ್ಫ್ ಕಾಯಿದೆಯ ಪ್ರಮುಖ ತಿದ್ದುಪಡಿಗಳಿಗೆ ʼಸುಪ್ರೀಂʼ ತಡೆ ಸ್ವಾಗತಾರ್ಹ : ಸಚಿವ ಝಮೀರ್ ಅಹ್ಮದ್ ಖಾನ್
Update: 2025-04-17 20:36 IST

ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಕೇಂದ್ರ ವಕ್ಫ್ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೆಲ ಸೆಕ್ಷನ್‍ಗಳ ಜಾರಿಗೆ ತಡೆ ನೀಡಿರುವುದನ್ನು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಮೀರ್ ಅಹ್ಮದ್ ಖಾನ್ ಸ್ವಾಗತಿಸಿದ್ದಾರೆ.
ಗುರುವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದೇಶದ ಮುಸ್ಲಿಮ್ ಸಮುದಾಯ ಸುಪ್ರೀಂ ಕೋರ್ಟ್‍ನತ್ತ ಆಶಾಭಾವನೆಯಿಂದ ಎದುರು ನೋಡುತ್ತಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಶೇ.75ರಷ್ಟು ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರದ ಪರವಾಗಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವನಾಗಿ ನಾನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ತಿದ್ದುಪಡಿ ಕಾಯ್ದೆಯಲ್ಲಿ ಪ್ರಮುಖವಾಗಿ ಸಮುದಾಯದ ಆಕ್ಷೇಪಣೆ ಇದ್ದ ಮೂರು ಸೆಕ್ಷನ್‍ಗಳಿಗೆ ನ್ಯಾಯಾಲಯ ತಡೆ ನೀಡಿದೆ. ನಮಗೆ ಮೊದಲಿನಿಂದ ಈ ನೆಲದ ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಗೌರವ ನಂಬಿಕೆ ಇತ್ತು. ಅದರಂತೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಂತಾಗಿದೆ ಎಂದು ಅವರು ಹೇಳಿದ್ದಾರೆ.