ವಿಜಯನಗರ | ಸ್ವಯಂ ರಕ್ಷಣಾ ಕ್ರಮಗಳಿಂದ ಮಲೇರಿಯಾ ನಿರ್ಮೂಲನೆ ಸಾಧ್ಯ : ಡಾ.ಜಂಬಯ್ಯ

Update: 2025-04-25 18:23 IST
ವಿಜಯನಗರ | ಸ್ವಯಂ ರಕ್ಷಣಾ ಕ್ರಮಗಳಿಂದ ಮಲೇರಿಯಾ ನಿರ್ಮೂಲನೆ ಸಾಧ್ಯ : ಡಾ.ಜಂಬಯ್ಯ
  • whatsapp icon

ವಿಜಯನಗರ(ಹೊಸಪೇಟೆ) : ಮಲೇರಿಯಾ ನಿರ್ಮೂಲನೆ ಪ್ರತಿಯೊಬ್ಬ ಸಾರ್ವಜನಿಕರ ಜವಾಬ್ದಾರಿಯಾಗಬೇಕು. ಈ ನಿಟ್ಟಿನಲ್ಲಿ ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸಿದರೇ ನಿಯಂತ್ರಣ ಸುಲಭ ಸಾಧ್ಯ ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಜಂಬಯ್ಯ ಹೇಳಿದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ನಿಮಿತ್ತ ಏರ್ಪಡಿಸಿದ ʼಜಿಲ್ಲಾ ಮಟ್ಟದ ಜಾಗೃತಿ ಜಾಥಾʼವನ್ನು ಹಸಿರು ನಿಶಾನೆ ಪ್ರದರ್ಶಿಸಿ ಚಾಲನೆ ನೀಡಿ ಶುಕ್ರವಾರ ಅವರು ಮಾತನಾಡಿದರು.

ಸೋಂಕಿತ ಅನಾಫೀಲಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಹರಡುತ್ತದೆ. ಸಾರ್ವಜನಿಕರು ಮಲೇರಿಯಾ ನಿಯಂತ್ರಣಕ್ಕೆ ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸಿದರೇ ಗರಿಷ್ಠ ಮಟ್ಟದಲ್ಲಿ ನಿಯಂತ್ರಣ ಸಾಧ್ಯವಾಗಲಿದೆ. ಮನೆಗಳಲ್ಲಿ ಸೊಳ್ಳೆ ಪರದೆ ಬಳಕೆ, ಸೊಳ್ಳೆ ಬತ್ತಿ, ಮುಲಾಮು ಬಳಕೆ, ಬೇವಿನ ಎಲೆ, ಸಾಂಬ್ರಾಣಿ, ಧೂಪದ ಹೊಗೆ ಹಾಕುವುದು. ಮೈತುಂಬ ಬಟ್ಟೆ ಧರಿಸುವುದು ಸೇರಿದಂತೆ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲುಷಿತ ನೀರು ನಿಲ್ಲದಂತೆ ನೈರ್ಮಲ್ಯ ಕಾಪಾಡಬೇಕು. 1-14 ದಿನಗಳ ಚಿಕಿತ್ಸೆಯಿಂದ ಮಲೇರಿಯಾ ಸಂಪೂರ್ಣ ಗುಣಮುಖಸಾಧ್ಯ ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಸವರಾಜ ಮಾತನಾಡಿದರು. ಮಲೇರಿಯಾ ಜ್ವರ ನಿಯಂತ್ರಣ ಕ್ರಮಗಳ ಬಗ್ಗೆ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು. ಜಾಗೃತಿ ಜಾಥಾ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಆರಂಭಿಸಿ ಪ್ರಮುಖ ಬೀದಿಗಳ ಮೂಲಕ ವೀರ ಮದಕರಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ವಿವಿಧ ಘೋಷಣೆಗಳನ್ನು ಕೂಗುತ್ತಾ ಜನಜಾಗೃತಿ ಮೂಡಿಸಲಾಯಿತು.

ಈ ವೇಳೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸತೀಶ್‌ಚಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News