ವಿಜಯಪುರ: ಭಾಗಪ್ಪ ಹರಿಜನ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

Update: 2025-02-14 11:15 IST
ವಿಜಯಪುರ: ಭಾಗಪ್ಪ ಹರಿಜನ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಪ್ರಕಾಶ್ | ರಾಹುಲ್ | ಸುದೀಪ್ | ಗದಿಗೆಪ್ಪ 

  • whatsapp icon

ವಿಜಯಪುರ, ಫೆ.14: ಭೀಮಾ ತೀರದ ಕುಖ್ಯಾತ ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎ1 ಪ್ರಕಾಶ್​ ಅಲಿಯಾಸ್​ ಪಿಂಟ್ಯಾ ಅಗರಖೇಡ್ ಮೇಲಿನಕೇರಿ (25), ಎ2 ರಾಹುಲ್ ತಳಕೇರಿ (20), ಎ3 ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), ಎ4 ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳು 

 ಘಟನೆ ವಿವರ: ಫೆ.11 ರಂದು ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಮದೀನಾ ನಗರದಲ್ಲಿ ರಾತ್ರಿ 09.30 ಗಂಟೆಯ ಸುಮಾರಿಗೆ ಭಾಗಪ್ಪ ಹುಚ್ಚಪ್ಪ ಹರಿಜನನಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ ಹಾಗೂ ಮಚ್ಚಿನಿಂದ ಕುತ್ತಿಗೆ, ಎದೆ ಮತ್ತು ಕೈಗಳಿಗೆ ಹಲ್ಲೆ ಮಾಡಿದ್ದರಿಂದ ಭಾಗಪ್ಪ ಹರಿಜನ  ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಮೃತನ ಮಗಳಾದ ಗಂಗೂಬಾಯಿ ಭಾಗಪ್ಪ ಹರಿಜನ ನೀಡಿದ ದೂರಿನ ಮೇರೆಗೆ ಗಾಂಧಿಚೌಕ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಮೃತ ಭಾಗಪ್ಪ ಹುಚ್ಚಪ್ಪ ಹರಿಜನನ ಮೇಲೆ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಅಫಜಲ್‌ಪುರ ಪೊಲೀಸ್ ಠಾಣೆಯಲ್ಲಿ1 ಕೊಲೆ ಪ್ರಕರಣ ಸೇರಿದಂತೆ ಒಟ್ಟು 06 ಕೊಲೆ ಪ್ರಕರಣಗಳು ದಾಖಲಾಗಿವೆ.

2024 ರ ಆಗಸ್ಟ್ 12 ರಂದು ವಿಜಯಪುರ ನಗರದ ಬಸವ ನಗರ ರಸ್ತೆಯಲ್ಲಿ ರವಿ ಮೇಲಿನಕೇರಿ ಎಂಬಾತನನ್ನು ತುಳಸಿರಾಮ ಹರಿಜನ ಹಾಗೂ ಆತನ ಸಹಚರರಾದ ಅಲೇಕ್ಸ್ ಗೊಲ್ಲರ, ಶಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿ ಇವರು ಸೇರಿಕೊಂಡು ಕೊಲೆ ಮಾಡಿದ್ದರು. (ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿರುತ್ತಾರೆ) ಈ ಪ್ರಕರಣದಲ್ಲಿ ತುಳಸಿರಾಮನಿಗೆ ಭಾಗಪ್ಪ ಹರಿಜನ್​ ಬೆಂಬಲ ನೀಡಿದ್ದಾನೆ ಆರೋಪ ಕೇಳಿ ಬಂದಿತ್ತು.

ಭಾಗಪ್ಪ ಹರಿಜನ ಹಾಗೂ ರವಿ ಮೇಲಿನಕೇರಿ ಇವರು ಸಂಬಂಧಿಕರಾಗಿರುತ್ತಾರೆ. ಇವರಿಬ್ಬರ ನಡುವೆ ಕೆಲವು ವರ್ಷಗಳಿಂದ ಹಣಕಾಸಿನ ವ್ಯವಹಾರವಿದ್ದು, ಇಬ್ಬರೂ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ.

ರವಿ ಮೇಲಿನಕೇರಿ ಮೃತಪಟ್ಟ ನಂತರ ಭಾಗಪ್ಪ ಹರಿಜನನು ರವಿಯ ತಮ್ಮನಾದ ಪ್ರಕಾಶ ಮೇಲಿನಕೇರಿಗೆ, "ನಿಮ್ಮ ಅಣ್ಣ ನನ್ನ ಹೆಸರು ಹೇಳಿ ಹಣ, ಆಸ್ತಿ ಮತ್ತು ವಾಹನ ಎಲ್ಲವನ್ನು ಮಾಡಿಕೊಂಡಿದ್ದಾನೆ. ಅವೆಲ್ಲವನ್ನು ನನಗೆ ಬಿಟ್ಟು ಕೊಡಬೇಕು ಅಂತಾ ಒತ್ತಡ ಹಾಕುತ್ತಿದ್ದು, ಹಲವಾರು ಬಾರಿ ಬೆದರಿಕೆ ಸಹ ಹಾಕಿದ್ದನು. ಇತ್ತೀಚೆಗೆ ಭಾಗಪ್ಪ ಈತನು ಪ್ರಕಾಶ ಮೇಲಿನಕೇರಿ ಈತನಿಗೆ ನೀವು ಆಸ್ತಿ ಬಿಟ್ಟುಕೊಡಬೇಕು. ಇಲ್ಲದಿದ್ದರೆ 10 ಕೋಟಿ ಹಣ ಕೊಡಬೇಕು. ಅದೂ ಆಗದಿದ್ದರೆ ನಿಮ್ಮ ಅಣ್ಣನ ಹೆಂಡತಿಯನ್ನು ನನ್ನ ಹತ್ತಿರ ಕಳುಹಿಸು. ಇದಲ್ಲದೇ ನಿನ್ನ ಅಣ್ಣನಿಗೆ ಹೊಡೆದ ತರಹ ನಿನಗೂ ಹೊಡೆಯುತ್ತೇನೆ" ಅಂತ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತನ್ನ ಅಣ್ಣನ ಕೊಲೆ ಭಾಗಪ್ಪ ಹರಿಜನನ ಆಜ್ಞೆಯ ಮೇರೆಗೆ ನಡೆದಿದೆ ಎಂಬ ಮಾಹಿತಿಯಾಧಾರದಲ್ಲಿ ಪ್ರಕಾಶ ಮೇಲಿನಕೇರಿಯು ತನ್ನ ಸಂಬಂಧಿಕ ಹಾಗೂ ಸ್ನೇಹಿತರೊಂದಿಗೆ ಸಂಚು ಮಾಡಿ ಫೆ.11 ರಂದು ರಾತ್ರಿ  ಭಾಗಪ್ಪ ಹರಿಜನನು ತನ್ನ ಮನೆಯ ಹೊರಗಡೆ ವಾಕಿಂಗ್ ಮಾಡುತ್ತಿದ್ದಾಗ ಕೊಲೆ ಮಾಡಿರುತ್ತಾರೆ ಎನ್ನಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಆಯುಧ ಹಾಗೂ ವಾಹನಗಳನ್ನು ಜಪ್ತಿ ಮಾಡುವುದು ಹಾಗೂ ಇನ್ನಿತರ ತನಿಖಾ ಕಾರ್ಯ ಪ್ರಗತಿಯಲ್ಲಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಐಪಿಎಸ್ ಮಾಹಿತಿ ನೀಡಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News