ಪ್ರಧಾನಿಯ ತವರು ಗುಜರಾತಿನಲ್ಲಿ 10 ಉದ್ಯೋಗಗಳಿಗಾಗಿ 1,800 ಆಕಾಂಕ್ಷಿಗಳು!
ಬೆಚ್ಚಿ ಬೀಳಿಸುವ ವರದಿಯೊಂದು ಬಂದಿದೆ. ನಿರುದ್ಯೋಗದಿಂದ, ನಮ್ಮ ದೇಶದಲ್ಲಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವರದಿ ಹೇಳಿದೆ. ದೇಶದಲ್ಲಿ ಉದ್ಯೋಗದ ಹಸಿವು ಹೆಚ್ಚಿದೆ. ಉದ್ಯೋಗ ಇದೆ ಎಂದಾಕ್ಷಣ ಅದನ್ನು ಬಯಸುವ ಆಕಾಂಕ್ಷಿಗಳ ಪಟ್ಟಿಯೂ ಮಾರುದ್ದವಿರುತ್ತದೆ.
ಪ್ರಧಾನಿಯವರ ಪಕ್ಷದ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಬುಧವಾರ 2,216 ಹುದ್ದೆಗಳಿಗಾಗಿ ನಡೆದ ಸಂದರ್ಶನಕ್ಕೆ 25,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಬಂದಿದ್ದರು. ಮತ್ತೊಂದು ಕಡೆ, ಮಧ್ಯಪ್ರದೇಶದ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದ ಬಿಜೆಪಿ ಶಾಸಕ " ಡಿಗ್ರಿಗಳಿಂದ ಯಾವುದೇ ಪ್ರಯೋಜನವಿಲ್ಲ, ನೀವು ಪಂಚರ್ ಹಾಗು ರಿಪೇರಿ ಶಾಪ್ ತೆರೆಯಿರಿ " ಎಂದು ಯುವಜನರಿಗೆ ಹೇಳಿದ್ದಾರೆ.
ವಿಶ್ವಗುರು, ಇಡೀ ಜಗತ್ತಿಗೇ ಮೋದಿ ಬಾಸ್, ಐದು ಟ್ರಿಲಿಯನ್ ಇಕಾನಾಮಿ, ಉಕ್ರೇನ್ ರಷ್ಯಾ ಯುದ್ಧ ನಿಲ್ಲಿಸುವ ಮೋದೀಜಿ - ಬಿಜೆಪಿ ಐಟಿ ಸೆಲ್ ನ ಈ ಎಲ್ಲ ಅಬ್ಬರದ ಪ್ರಚಾರಗಳ ಹಿಂದಿನ ಪೊಳ್ಳುತನ ಈ ಮೂರು ಸಾಲುಗಳಲ್ಲೇ ಬಯಲಾಗುತ್ತದೆ. ಒಂದು ದೇಶದ ಆರ್ಥಿಕತೆಯ ಮೂಲಭೂತ ನಿಯಮವೆಂದರೆ, ದೇಶದ ಜನಸಾಮಾನ್ಯರ ಕೈಯಲ್ಲಿ ಹಣ ಓಡಾಡಬೇಕು. ಹಣವಿದ್ದರೆ ಮಾತ್ರ ಜನರು ಖರ್ಚು ಮಾಡಲು ಮುಂದಾಗ್ತಾರೆ. ಈ ರೀತಿ ಜನ ಖರ್ಚು ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಜನರಿಗೆ ಉದ್ಯೋಗಗಳು ಸಿಗುತ್ತದೆ. ಅವರ ಸಂಬಳದಲ್ಲಿ ಹೆಚ್ಚಳವಾಗುತ್ತದೆ. ಆದರೆ, ನಮ್ಮ ಸ್ವಯಂಘೋಷಿತ 'ವಿಶ್ವಗುರು', ದೇಶ ಅರ್ಥಶಾಸ್ತ್ರದ ಈ ಮೂಲಭೂತ ತತ್ವಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ.
ನಮ್ಮ ದೇಶದ ಜನಸಾಮಾನ್ಯರ ಕೈಯಲ್ಲಿ ಹಣ ಇಲ್ಲವಾಗಿದೆ; ಏಕೆಂದರೆ ಅವರಿಗೆ ಸರಿಯಾದ ಉದ್ಯೋಗವಿಲ್ಲ, ಇದ್ದರೂ ಅಗತ್ಯಕ್ಕೆ ಬೇಕಾದಷ್ಟು ಸಂಬಳವಿಲ್ಲ, ಹಾಗಾಗಿ, ಅವರು ಖರ್ಚು ಮಾಡಲು ಮುಂದಾಗುತ್ತಿಲ್ಲ ಅಥವಾ ಖರ್ಚು ಮಾಡುವ ಸಾಮರ್ಥ್ಯವೇ ಅವರಲ್ಲಿಲ್ಲ. ಆದ್ದರಿಂದ ಮತ್ತೆ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ.
ಇದಕ್ಕೆ ಅತ್ಯುತ್ತಮ ಉದಾಹರಣೆ ಮೊನ್ನೆ ಪ್ರಧಾನಿಯ ತವರು ಗುಜರಾತಿನಲ್ಲಿ 10 ಉದ್ಯೋಗಗಳಿಗಾಗಿ 1,800 ಆಕಾಂಕ್ಷಿಗಳು ಬಂದಿದ್ದರಿಂದ ರೇಲಿಂಗ್ ಕುಸಿದು ಸುದ್ದಿಯಾಗಿದೆ. ಈ ದುರ್ಘಟನೆ ನಡೆದು ಒಂದು ವಾರವೂ ಆಗಿಲ್ಲ; ಈಗ ಅದೇ ರೀತಿಯ ಇನ್ನೊಂದು ಘಟನೆ ಮುಂಬೈಯಿಂದ ವರದಿಯಾಗಿದೆ.
ಏರಪೋರ್ಟ್ ಲೋಡರ್ ಗಳ ಹುದ್ದೆಗಾಗಿ ಏರ್ ಇಂಡಿಯಾ ಹಮ್ಮಿಕೊಂಡಿದ್ದ ಉದ್ಯೋಗ ನೇಮಕಾತಿ ಅಭಿಯಾನದ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಜಮಾಯಿಸಿದ ಘಟನೆ ನಡೆದಿದೆ; ಕಾಲ್ತುಳಿತ ನಡೆಯಬಹುದಾದ ಭಯಾನಕ ಪರಿಸ್ಥಿತಿ ಎದುರಾಯಿತು. ಕೇವಲ 2,216 ಹುದ್ದೆಗಳಿಗಾಗಿ, ಅದೂ ಲೋಡರ್ ಗಳ ಹುದ್ದೆಗಾಗಿ 25,000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದರಿಂದ, ಅವರನ್ನು ನಿಯಂತ್ರಿಸಲು ವಿಮಾನ ನಿಲ್ದಾಣದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು ಎಂದು NDTV ವರದಿ ಮಾಡಿದೆ.
ಅಷ್ಟೇ ಅಲ್ಲ, ಹೀಗೆ ಜಮಾಯಿಸಿದ ಸಾವಿರಾರು ಅರ್ಜಿದಾರರು ಆಹಾರ ಮತ್ತು ನೀರಿಲ್ಲದೆ ಗಂಟೆಗಟ್ಟಲೆ ಕಾಯಬೇಕಾಯಿತು; ಇದರಿಂದ ಹಲವರು ಅಸ್ವಸ್ಥರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಏರ್-ಪೋರ್ಟ್ ಲೋಡರ್ ಗಳು ವಿಮಾನಗಳಲ್ಲಿ ಸಾಮಾನುಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು ಮತ್ತು ಬ್ಯಾಗೇಜ್ ಬೆಲ್ಟ್ ಗಳು ಮತ್ತು ರಾಂಪ್ ಟ್ರಾಕ್ಟರುಗಳನ್ನು ನಿರ್ವಹಿಸುವ ಕೆಲಸ ನಿರ್ವಹಿಸುತ್ತಾರೆ. ಏರ್ ಪೋರ್ಟ್ ಲೋಡರಗಳ ವೇತನ ತಿಂಗಳಿಗೆ 20,000 ರಿಂದ 25,000 ರೂಪಾಯಿ ಇರುತ್ತದೆ.
ಹತ್ತಿಪ್ಪತ್ತು ಸಾವಿರ ಸಂಬಳದ ಉದ್ಯೋಗಕ್ಕೆ ಹೀಗೆ ಸಾವಿರಗಟ್ಟಲೆ ಪದವೀಧರರು, ಸ್ನಾತಕೋತ್ತರ ಪದವೀಧರರು ಬಂದು ಸೇರುತ್ತಾರೆ ಅಂದರೆ ನಿರುದ್ಯೋಗದ ಪರಿಸ್ಥಿತಿ ಅದೆಷ್ಟು ಭಯಾನಕವಿದೆ ಎಂದು ತಿಳಿಯುತ್ತದೆ. ವಾಸ್ತವವಾಗಿ, ಇಂದು ನಮ್ಮ ದೇಶದಲ್ಲಿ ಉದ್ಯೋಗ ಬೇಕಾದವರಲ್ಲಿ 60% ಜನರು ಉದ್ಯೋಗ ಕ್ಷೇತ್ರದಿಂದ ಹೊರಗೆ ಉಳಿದಿದ್ದಾರೆ. ಹಲವರ ಭಾಗ್ಯದಲ್ಲಿ ಉದ್ಯೋಗವೇ ಇಲ್ಲದಾಗಿದೆ. ಉದ್ಯೋಗ ಸಿಕ್ಕಿದರೂ ಅವರ ಅರ್ಹತೆ, ಅಗತ್ಯಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ. ಸಿಗುವ ಸಂಬಳ ಸೂಕ್ತ ಪ್ರಮಾಣದಲ್ಲಿ ಹೆಚ್ಚುತ್ತಲೂ ಇಲ್ಲ.
ಇತ್ತೀಚಿಗೆ ಬೆಚ್ಚಿ ಬೀಳಿಸುವಂತಹ ಇನ್ನೊಂದು ವರದಿ ಬಂದಿದೆ. NCRB ದಾಖಲೆಗಳ ಅದರ ಪ್ರಕಾರ ನಿರುದ್ಯೋಗದಿಂದ, ನಮ್ಮ ದೇಶದಲ್ಲಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ, ಈ ಗಂಭೀರ ಸಮಸ್ಯೆಗೆ ಆರ್ಥಿಕ ತಜ್ಞರಿಂದ ಸಲಹೆ ಪಡೆದು, ಇದನ್ನು ನಿವಾರಿಸುವ ಬದಲು ನಮ್ಮ ದೇಶದ ಪ್ರಧಾನಿ ವಿಪಕ್ಷ ನಾಯಕನನ್ನು ಬಾಲಬುದ್ಧಿ ಎಂದು ಅಣಕಿಸುತ್ತಾ, ಐವತ್ತು ವರ್ಷಗಳ ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ನೆನೆಯುತ್ತಾ, ರಾಜಕೀಯ ಲಾಭ ಮಾಡಿಕೊಳ್ಳೋದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಜೊತೆಗೆ ತಮ್ಮ ಸರಕಾರದ ಅಧೀನ ಸಂಸ್ಥೆಗಳಂತಾಗಿರುವ ಸ್ವಾಯತ್ತ ಸಂಸ್ಥೆಗಳ ಮೂಲಕ ದೇಶದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಯಾಗಿದೆ ಎಂದು ವರದಿ ಹೊರಡಿಸುತ್ತಿದ್ದಾರೆ. ಮೊನ್ನೆ ಬಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯದ್ದೂ ಇದೇ ತರದ ವರದಿ. ದೇಶದಲ್ಲಿ ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉದ್ಯೋಗ ಸೃಷ್ಟಿ ಪ್ರಮಾಣ ದುಪ್ಪಟ್ಟಾಗಿದೆ ಎನ್ನುತ್ತದೆ ಆ ವರದಿ.
ಹಾಗಾದರೆ ಆ ಕೋಟಿಗಟ್ಟಲೆ ಉದ್ಯೋಗಗಳು ಯಾರಿಗೆ ಸಿಗುತ್ತಿವೆ ? ಎಲ್ಲಿ ಸಿಗುತ್ತಿವೆ ? ಪ್ರಧಾನಿ ಮೋದಿ ಹೇಳಿದ ಹಾಗೆ ಪಕೋಡ ಮಾರೋದನ್ನೂ, ಮೊನ್ನೆ ಬಿಜೆಪಿ ಶಾಸಕ ಹೇಳಿದ ಹಾಗೆ ಪಂಚರ್ ಹಾಕೋದನ್ನೂ ಆರ್ ಬಿ ಐ ಉದ್ಯೋಗ ಸೃಷ್ಟಿ ಅಂತಾನೆ ಲೆಕ್ಕ ಹಾಕಬೇಕೇ? ಪ್ರಧಾನಿ ಮೋದಿಯವರೇ ಇದಕ್ಕೆ ಉತ್ತರಿಸಬೇಕು.