ಗ್ರಾಮೀಣ ಮಕ್ಕಳಿಗೆ ಆಟದ ಜೊತೆ ಇಂಗ್ಲಿಷ್ ಪಾಠ!
ಉಡುಪಿ: ಆಂಗ್ಲ ಭಾಷೆಯ ಪ್ರಭಾವಕ್ಕೆ ಇಂದು ಕನ್ನಡ ಶಾಲೆಗಳು ಕಣ್ಣು ಮುಚ್ಚುತ್ತಿವೆ. ಕೆಲವು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದ್ದರೂ ಗುಣಮಟ್ಟ ಇಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಪೋಷಕರು ಕಳುಹಿಸುತ್ತಿಲ್ಲ. ಇದರ ಪರಿಣಾಮ ಸರಕಾರಿ ಶಾಲೆ ಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿವೆ. ಆದರೆ ಇಲ್ಲೊಂದು ಸರಕಾರಿ ಶಾಲೆ ಈ ಎಲ್ಲ ತೊಡಕನ್ನು ನಿವಾರಿಸಲು ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಭಾಷೆ ಕಲಿಸುವ ಮೂಲಕ ಈ ಶಾಲೆ ಮಕ್ಕಳ ಸಂಖ್ಯೆಯನ್ನು ಕೂಡ ಹೆಚ್ಚಿಸಿಕೊಂಡಿದೆ.
ಇದು ಕುಂದಾಪುರ ತಾಲೂಕಿನ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶಿಷ್ಟ ಸಾಧನೆ. ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ ಗುಣಮಟ್ಟದ ಇಂಗ್ಲಿಷ್ ಕಲಿಕೆಗಾಗಿಯೇ ಅತ್ಯಾಧುನಿಕ ತಂತ್ರಜ್ಞಾನದ ಇಂಗ್ಲಿಷ್ ಭಾಷಾ ಪ್ರಯೋಗಾಲಯ ಮತ್ತು ಇಂಗ್ಲಿಷ್ ಆಡಿಯೋ ವಿಜುವಲ್ ತರಗತಿಯನ್ನು ವಿಶಿಷ್ಟ ರೀತಿಯಲ್ಲಿ ಸಿದ್ಧಪಡಿಸಲಾಗಿದೆ.
ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯ ವರೆಗೆ ಸುಮಾರು 202 ಮಕ್ಕಳು ಕಲಿಯುತ್ತಿದ್ದು, ಜಪ್ತಿ, ಗಾವಳಿ, ಕೊಳ್ಕೆಬೈಲು, ಕೇದೂರು, ಯಡ್ಯಾಡಿ- ಮತ್ಯಾಡಿ, ಶಿರಿಯಾರ, ಮೊಗೆಬೆಟ್ಟು, ದೇವಸ್ಥಾನ ಬೆಟ್ಟು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಸರಕಾರಿ ಶಾಲೆಯಾದರೂ ಈ ಶಾಲೆಗೆ ಬೇಡಿಕೆ ಹೆಚ್ಚಿದ್ದು, ಅದಕ್ಕಾಗಿ ದೂರದ ಊರುಗಳಿಂದಲೇ ಹೆಚ್ಚಾಗಿ ಮಕ್ಕಳು ಈ ಶಾಲೆಗೆ ದಾಖಲಾಗಿದ್ದಾರೆ.
ಅತ್ಯಾಧುನಿಕ ಕಲಿಕಾ ಲ್ಯಾಬ್
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ನೀಡುವ ಉದ್ದೇಶದಿಂದ ಈ ಶಾಲೆಯಲ್ಲಿ 2015ರಲ್ಲೇ ಸ್ಪೋಕನ್ ಇಂಗ್ಲಿಷ್ ತರಗತಿ ಆರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ 8:30ರಿಂದ 9:30ರವರೆಗೆ ಈ ತರಗತಿಯನ್ನು ಶಿಕ್ಷಕ ಅಶೋಕ್ ತೆಕ್ಕಟ್ಟೆ ನಡೆಸಿಕೊಂಡು ಬರುತ್ತಿದ್ದಾರೆ.
ಇದೀಗ ಅದರ ಮುಂದುವರಿದ ಭಾಗವಾಗಿ ಎನ್ಜಿಒ, ದಾನಿಗಳು ಹಾಗೂ ಪೋಷಕರ ಸಹಕಾರದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಆಂಗ್ಲ ಭಾಷಾ ಕಲಿಕಾ ಪ್ರಯೋಗಾಲಯ(ಇಂಗ್ಲಿಷ್ ಲ್ಯಾಂಗುವೇಜ್ ಲರ್ನಿಂಗ್ ಲ್ಯಾಬ್) ಸ್ಥಾಪಿಸಲಾಗಿದೆ.
ಮಕ್ಕಳ ಕಲಿಕೆಗೆ ಅನುಕೂಲವಾ ಗುವ ನಿಟ್ಟಿನಲ್ಲಿ ಕಲಿಕಾ ಸಾಮಗ್ರಿ ಗಳನ್ನು ಈ ಲ್ಯಾಬ್ನಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಜೋಡಿಸಿಡ ಲಾಗಿದೆ. ಇಲ್ಲಿ ಮಕ್ಕಳು ಆಟ ಆಡುತ್ತ... ಅನುಭವಿಸುತ್ತ...ಖುಷಿಪಡುತ್ತಾ ಆಂಗ್ಲ ಭಾಷೆಯನ್ನು ಕಲಿಯುತ್ತಿದ್ದಾರೆ. ಈ ವ್ಯವಸ್ಥೆ ಯಿಂದ ಮಕ್ಕಳು ಅತ್ಯಂತ ಸುಲಭವಾಗಿ ಮತ್ತು ಹೆಚ್ಚು ಆಕರ್ಷಣೀಯವಾಗಿ ಭಾಷೆಯನ್ನು ಕಲಿಯುತ್ತಿದ್ದಾರೆ.
ಈ ಮೂಲಕ ಇಡೀ ಕೋಣೆಯನ್ನು ಸಂಪನ್ಮೂಲ ಕೊಠಡಿಯ ನ್ನಾಗಿ ಪರಿವರ್ತಿಸಲಾಗಿದೆ. ಇಡೀ ಕೊಠಡಿಯ ಗೋಡೆಯ ಮೇಲೆ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಮಕ್ಕಳು ಕಲಿಯಲು ಇರುವ ಆಂಗ್ಲ ಭಾಷಾ ಸಂಬಂಧಿತ ವಿಚಾರಗಳನ್ನು ಪ್ರದರ್ಶಿಸಲಾಗಿದೆ. ಆಯಾ ಪಾಠಗಳಲ್ಲಿ ಆ ವಿಷಯಗಳು ಬಂದಾಗ ಮಕ್ಕಳಿಗೆ ಕಲಿಸಲು ಬಳಸಿಕೊಳ್ಳಲಾಗುತ್ತಿದೆ.
ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ
ಇಂಗ್ಲಿಷ್ ಆಡಿಯೋ ವಿಜುವಲ್ ತರಗತಿಯಲ್ಲಿ ಪ್ರೊಜೆಕ್ಟರ್ ಅಳವಡಿ ಸಲಾಗಿದೆ. ವೈ-ಫೈ ಮೂಲಕ ಮಕ್ಕಳಿಗೆ ಪಠ್ಯೇತರ ಜ್ಞಾನವನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ಈ ತರಗತಿಗಳನ್ನು ಎಲ್ಲ ಮಕ್ಕಳು ಬಳಸುವ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಇಲ್ಲಿರುವ ಒಟ್ಟು 30 ಕಂಪ್ಯೂಟರ್ಗಳಲ್ಲಿ ಆಂಗ್ಲ ಭಾಷೆ ಕಲಿಕೆಗೆ ಸಂಬಂಧಿಸಿ ಸಾಫ್ಟ್ ವೇರ್ ಅಳವಡಿಸಲಾಗಿದೆ ಎಂದು ಅಶೋಕ್ ತೆಕ್ಕಟ್ಟೆ ತಿಳಿಸಿದರು.
ಇಲ್ಲಿನ ಪ್ರತೀ ತರಗತಿಯಲ್ಲಿ ತೆರೆದ ಗ್ರಂಥಾಲಯಗಳಿವೆ. ಅವುಗಳಿಗೆ ಬೀಗ ಹಾಕುವುದಿಲ್ಲ. ಮಕ್ಕಳು ಅಗತ್ಯವಿದ್ದಾಗ ತೆರಳಿ ಪುಸ್ತಕಗಳನ್ನು ಓದಬಹುದು. ಅದೇ ರೀತಿ ರೀಡಿಂಗ್ ಕಾರ್ನರ್ನಲ್ಲಿ ಮಕ್ಕಳಿಗೆ ಓದಲು ಇಂಗ್ಲಿಷ್ ವಾರಪತ್ರಿಕೆಗಳನ್ನು ಕೂಡ ಇಡಲಾಗಿದೆ. ಹೀಗೆ ಮಕ್ಕಳಿಗೆ ಓದುವ, ಕಲಿಯುವ, ಬರೆಯುವ ಸೇರಿದಂತೆ ಸಂಪೂರ್ಣ ತರಬೇತಿ ಸಿಗುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
‘ನಮ್ಮ ಶಾಲೆಯಲ್ಲಿನ ಈ ಹೊಸ ಪ್ರಯೋಗ ಹಲವು ಶಾಲೆಗಳಿಗೆ ಸ್ಫೂರ್ತಿಯಾಗಿದೆ. ಜಿಲ್ಲೆ ಮಾತ್ರವಲ್ಲ, ಹೊರ ಜಿಲ್ಲೆಯವರು ಕೂಡ ಇದನ್ನು ನೋಡಿ ಅವರ ಶಾಲೆಗಳಲ್ಲೂ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ನಮ್ಮ ಶಾಲೆ ಮಕ್ಕಳು ಮಾತ್ರವಲ್ಲ, ಪೋಷಕರ ಹೆಮ್ಮೆಯಾಗಿದೆ. ಇದು ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಆಗಲು ಬಹಳಷ್ಟು ಸಹಕಾರಿಯಾಗಿದೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕ ಶೇಖರ್ ಕುಮಾರ್.
ನಮ್ಮ ಶಾಲೆಯಲ್ಲಿನ ಆಂಗ್ಲ ಭಾಷಾ ಕಲಿಕಾ ತರಗತಿಯಿಂದ ನಾನು ಸಂತೋಷ ಪಡುತ್ತಿದ್ದೇವೆ. ಈ ತರಗತಿಯನ್ನು ನಾವೆಲ್ಲ ತುಂಬಾ ಪ್ರೀತಿಸುತ್ತೇವೆ ಮತ್ತು ತುಂಬಾ ಖಷಿಯಲ್ಲಿ ಇಂಗ್ಲಿಷ್ ಕಲಿಯು ತ್ತಿದ್ದೇವೆ. ಇದರಿಂದ ನಾವು ಸುಲಭವಾಗಿ ಇಂಗ್ಲಿಷ್ ಕಲಿಯಲು ಸಾಧ್ಯವಾಗಿದೆ.
- ಹರ್ಷಿನಿ, 7ನೇ ತರಗತಿ ವಿದ್ಯಾರ್ಥಿನಿ
2015ರಲ್ಲಿ ಆರಂಭಿಸಿದ ಇಂಗ್ಲಿಷ್ ಸ್ಪೋಕನ್ ತರಗತಿಯ ಮುಂದುವರಿದ ಭಾಗವಾಗಿ ‘ಹ್ಯಾಪಿ ಇಂಗ್ಲಿಷ್’ ತರಗತಿ ಯನ್ನು ಸ್ಥಾಪಿಸಲಾಗಿದೆ. ಇದು ಬೇರೆ ಶಾಲಾ ಶಿಕ್ಷಕರ ಮಾತ್ರವಲ್ಲ, ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿದ್ದು, ಗುಣಮಟ್ಟದ ಇಂಗ್ಲಿಷ್ನ್ನು ಕಲಿಸಲಾಗುತ್ತಿದೆ. ಇದನ್ನು ನೋಡಲು ಬೇರೆ ಆಂಗ್ಲ ಮಾಧ್ಯಮ ಶಾಲೆಯವರು ಕೂಡ ಬಂದಿದ್ದಾರೆ. ಕಳೆದ ವರ್ಷ ತೀರ್ಥಹಳ್ಳಿಯ ಪ್ರೌಢಶಾಲೆಯ ಶಿಕ್ಷಕರು ತಮ್ಮ ಮಕ್ಕಳೊಂದಿಗೆ ಬಂದು ನೋಡಿ ಹೋಗಿದ್ದಾರೆ.
- ಶೇಖರ್ ಕುಮಾರ್, ಮುಖ್ಯ ಶಿಕ್ಷಕರು