ಇಲ್ಲದ ಕೇಸು ಸೃಷ್ಟಿಸಿ NDTV ಯನ್ನು ಮುಗಿಸಲಾಯಿತೇ?
ದೇಶದ ಬಹುತೇಕ ಎಲ್ಲ ಪ್ರಮುಖ ನ್ಯೂಸ್ ಚಾನಲ್ ಗಳು ಮೋದಿ ಸರಕಾರದ ಭಟ್ಟಂಗಿಗಳಾಗಿದ್ದಾಗ ನೇರ ನಿಷ್ಠುರ ಪತ್ರಿಕೋದ್ಯಮ ನಡೆಸುತ್ತಿದ್ದ ಏಕೈಕ ಚಾನಲ್ NDTV ಯನ್ನು ಹೇಗೆ ವ್ಯವಸ್ಥಿತವಾಗಿ ಮುಗಿಸಿ ಬಿಡಲಾಯಿತು ಎಂಬುದು ಈಗ ಒಂದೊಂದಾಗಿ ಬಯಲಾಗುತ್ತಿದೆ.
ಅದರಲ್ಲಿ ಒಂದು ಪ್ರಮುಖ ಅಂಶ NDTV ಹಾಗೂ ಅದರ ಪ್ರಮೋಟರ್ ಗಳ ವಿರುದ್ಧದ ಸಿಬಿಐ ಕೇಸು. ಆ ಕೇಸನ್ನು ಬಿ ರಿಪೋರ್ಟ್ ಮಾಡಿದ್ದು NDTV ಹಾಗೂ ರಾಯ್ ದಂಪತಿ ಯಾವುದೇ ಅಕ್ರಮ ಎಸಗಿಲ್ಲ ಎಂದು ಸಿಬಿಐ ಸ್ವತಃ ಒಪ್ಪಿಕೊಂಡ ಮೇಲೆಯೇ ಹೊರತು ಸಾಕ್ಷ್ಯಾಧಾರಗಳ ಕೊರತೆಯಿಂದಲ್ಲ ಎಂದು ಈಗ ಬಯಲಾಗಿದೆ.
ಮೊದಲು NDTV ವಿರುದ್ಧ ಒಂದು ಕೇಸನ್ನು ಸೃಷ್ಟಿಸಲಾಯಿತು. ಅದರ ಹೆಸರಲ್ಲಿ ಆ ಸಂಸ್ಥೆಯ ಮೇಲೆ ದಾಳಿ ನಡೆಸಲಾಯಿತು. ಅದಕ್ಕೆ ಕಾನೂನಿನ ಹೆಸರಲ್ಲಿ ಕಿರುಕುಳ ನೀಡಲಾಯಿತು. ಅದನ್ನು ಹಂತಹಂತವಾಗಿ ಅದರ ಸ್ಥಾಪಕರ ಕೈಯಿಂದ ಕಿತ್ತುಕೊಳ್ಳಲಾಯಿತು. ಕೊನೆಗೆ ಅದು ತಮಗೆ ಬೇಕಾದವರ ಕೈಗೆ ಹೋದ ಮೇಲೆ ಈಗ ಹೇಗೆ ಅದರ ವಿರುದ್ಧದ ಕೇಸುಗಳೆಲ್ಲ ಬೋರಲು ಬೀಳುತ್ತಿವೆ ಎಂಬುದನ್ನು ನೋಡಿದರೆ ಅಚ್ಚರಿಯಾಗುತ್ತದೆ.
NDTV ಸಂಸ್ಥಾಪಕರಾದ ಪ್ರಣಯ್ ಮತ್ತು ರಾಧಿಕಾ ರಾಯ್ ವಿರುದ್ಧದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣವನ್ನು ಸಿಬಿಐ ಬಿ ರಿಪೋರ್ಟ್ ಹಾಕಿದೆ. ಅಂದರೆ ಕೇಸು ಮುಗಿಸಿದೆ.
ಆದರೆ ಇದಕ್ಕೆ ನಿಜಕ್ಕೂ ಕಾರಣವೇನು?
ಈ ಹಿಂದೆ ನಂಬಿದ್ದಂತೆ ಸಾಕ್ಷ್ಯಾಧಾರದ ಕೊರತೆಯೇನೂ ಕಾರಣವಲ್ಲ. ಅವರಿಗೆ ಕ್ಲೀನ್ ಚಿಟ್ ನೀಡಿರುವುದೇ ಸ್ವತಃ ಸಿಬಿಐ ಎಂಬುದು ಅದರ ಕ್ಲೋಶರ್ ರಿಪೋರ್ಟ್ ಮೂಲಕ ಗೊತ್ತಾಗಿದೆ.
ಐಸಿಐಸಿಐ ಬ್ಯಾಂಕ್ ಗೆ ಉದ್ದೇಶಪೂರ್ವಕವಾಗಿ 48 ಕೋಟಿ ರೂ ನಷ್ಟ ಉಂಟುಮಾಡಿದ್ದಾರೆ ಎಂಬ ಆರೋಪದಲ್ಲಿ ಅವತ್ತಿನ NDTV, ಪ್ರಣಯ್ ರಾಯ್, ರಾಧಿಕಾ ರಾಯ್ ಮತ್ತಿತರರ ವಿರುದ್ಧ 2017ರಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. 7 ವರ್ಷಗಳ ಬಳಿಕ ಮೊನ್ನೆ ಅಕ್ಟೋಬರ್ ನಲ್ಲಿ ಕೇಸ್ ಗೆ ಅಂತ್ಯ ಹಾಡಲಾಗಿತ್ತು.
ಸಿಬಿಐ ಹಾಕಿರುವ ಬಿ ರಿಪೋರ್ಟ್ನಲ್ಲಿ ಏನಿದೆ ಎಂಬುದು ಈಗ ಬಯಲಾಗಿದೆ. ಐಸಿಐಸಿಐ ಬ್ಯಾಂಕ್ ರಾಯ್ ದಂಪತಿಯ RRPR ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ಗೆ 375 ಕೋಟಿ ರೂ ಸಾಲವನ್ನು ಮಂಜೂರು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಿಬಿಐ ಹೇಳಿದೆ. ಬ್ಯಾಂಕಿಂಗ್ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ಈ ಮೊದಲು ಆರೋಪಿಸಲಾಗಿತ್ತು. ಆದರೆ, ಅದು ಸಾಮಾನ್ಯ ವಹಿವಾಟು ಮತ್ತು ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಸಿಬಿಐ ತನ್ನ ಕ್ಲೋಸರ್ ರಿಪೋರ್ಟ್ ನಲ್ಲಿ ಹೇಳಿದೆ.
ಅದೇ ಅವಧಿಯಲ್ಲಿ ICICI ಬ್ಯಾಂಕ್ ವಿತರಿಸಿದ ಇದೇ ರೀತಿಯ ಸಾಲಗಳ ಬಗ್ಗೆ ಸಿಬಿಐ ತನ್ನ ಕ್ಲೋಸರ್ ರಿಪೋರ್ಟ್ ನಲ್ಲಿ ವಿಶ್ಲೇಷಿಸಿದೆ. NDTVಗೆ ನೀಡಲಾಗಿದ್ದ ಸಾಲವೇ ಒಂದು ಪ್ರತ್ಯೇಕ ಪ್ರಕರಣವಲ್ಲ ಮತ್ತು ICICI ಬ್ಯಾಂಕ್ ಅಂತಹ ಸಾಲ ಸೌಲಭ್ಯವನ್ನು ನೀಡಿರುವ ಸುಮಾರು 30 ಪ್ರಕರಣಗಳಿವೆ ಎಂದು ಸಿಬಿಐ ಹೇಳಿದೆ.
ಈ ಕುರಿತ ಆರ್ಬಿಐ ಸ್ಪಷ್ಟೀಕರಣವನ್ನು ಸಿಬಿಐ ಉಲ್ಲೇಖಿಸಿದ್ದು, ಅಂಥ ಹಲವಾರು ಸಾಲಗಳನ್ನು ಬ್ಯಾಂಕ್ ಮಂಜೂರು ಮಾಡಿತ್ತು ಎಂದು ಒಪ್ಪಿಕೊಂಡಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 19(2) ಮತ್ತು ಆರ್‌ಬಿಐನ 28.08.1998 ರ ಸುತ್ತೋಲೆ ಉಲ್ಲಂಘಿಸಿ ಸಾಲ ನೀಡಲಾಗಿದೆ ಎಂಬ ಆರೋಪವಿತ್ತು.
ಆದರೆ, NDU-POA ವ್ಯವಸ್ಥೆಯಡಿ ಸಾಲ ಮಂಜೂರು ಅಡವಿಡುವ ಮೊತ್ತವಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ ಎಂಬುದನ್ನು ಸಿಬಿಐ ಹೇಳಿದೆ. ಷೇರುಗಳ ಪ್ರಾಥಮಿಕ ಭದ್ರತೆ ವಿರುದ್ಧ ಮುಂಗಡ ನೀಡುವುದನ್ನು ಆರ್ಬಿಐ ಮಾರ್ಗಸೂಚಿಗಳು ನಿಷೇಧಿಸುವುದಿಲ್ಲ ಎಂಬುದನ್ನು ಪ್ರಸ್ತಾಪಿಸಲಾಗಿದೆ.
2009ರ ಅಕ್ಟೋಬರ್ ವರೆಗೆ NDU-POA ವ್ಯವಸ್ಥೆ ಅಡಿಯಲ್ಲಿ ಬ್ಯಾಂಕ್ ಹಣಕಾಸು ಒದಗಿಸಿರುವ ಸುಮಾರು 30 ಪ್ರಕರಣಗಳಿವೆ. ಆ 30 ಸಾಲಗಾರರಿಗೆ ನೀಡಲಾದ ಒಟ್ಟು ಸಾಲ ರೂ.15000 ಕೋಟಿಗಳಷ್ಟಿತ್ತು. ಹೆಚ್ಚುವರಿಯಾಗಿ ಬ್ಯಾಂಕ್ NDU-POA ಅಡಿಯಲ್ಲಿ 65 ಸಾಲಗಾರರಿಗೆ ಹಣಕಾಸು ಒದಗಿಸಿದೆ.
NDU-POA ಎಂದರೆ 'ವಿಲೇವಾರಿ ಮಾಡದ ಅಂಡರ್‌ಟೇಕಿಂಗ್-ಪವರ್ ಆಫ್ ಅಟಾರ್ನಿ' ಮತ್ತು ಷೇರುದಾರರಿಂದ ಕಂಪೆನಿಯ ಷೇರುಗಳ ಮಾರಾಟವನ್ನು ತಡೆಯುವ ಒಪ್ಪಂದವಾಗಿದೆ. ಇದಕ್ಕೆ ಸೆಬಿಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ರಾಯ್ ದಂಪತಿ ಸೆಬಿ ನಿಯಮ ಪಾಲಿಸಲು ವಿಫಲರಾಗಿದ್ದಾರೆ ಎಂಬುದು ಎರಡನೇ ಆರೋಪವಾಗಿತ್ತು. ಅದಕ್ಕೆ ಸಿಬಿಐ ತನ್ನ ಕ್ಲೋಸರ್ ರಿಪೋರ್ಟ್ ನಲ್ಲಿ ಇಂಥ ಮಾದರಿಯ ಸಾಲಕ್ಕೆ ಸೆಬಿ ಅನುಮತಿ ಅಗತ್ಯವಿಲ್ಲ ಎಂದು ಹೇಳಿದೆ. ಷೇರುಗಳನ್ನು ಒತ್ತೆ ಇಡಲು NDTV ಸಂಸ್ಥಾಪಕರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಪಡೆಯಲು ವಿಫಲರಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಆ ಅನುಮತಿ ಕೂಡ ಅಗತ್ಯವಿಲ್ಲ ಎಂದು ಸಿಬಿಐ ಹೇಳಿದೆ.
ಬಡ್ಡಿ ದರ ಕಡಿತ ಕೂಡ ಪ್ರತ್ಯೇಕ ಪ್ರಕರಣವಲ್ಲ ಎಂಬ ಉತ್ತರವನ್ನೂ ಸಿಬಿಐ ಕೊಟ್ಟಿದೆ. ಐಸಿಐಸಿಐ ಬ್ಯಾಂಕ್ 2007ರಿಂ 2010ರ ಹಣಕಾಸು ವರ್ಷಗಳಲ್ಲಿ 83 ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ಬಡ್ಡಿದರ ಕಡಿಮೆ ಮಾಡಿದೆ. ಬಡ್ಡಿದರ ಕಡಿಮೆ ಮಾಡಲಾಗಿದ್ದುದು ಪ್ರತ್ಯೇಕ ಪ್ರಕರಣವಲ್ಲ ಮತ್ತು ICICI ಬ್ಯಾಂಕ್ ಗೆ ಮರುಪಾವತಿಗಾಗಿ RRPR ನ ಪ್ರಸ್ತಾಪ ಕೂಡ ಸಮ್ಮತಿ ಪಡೆದದ್ದೇ ಆಗಿತ್ತು ಎಂಬುದನ್ನು ಸಿಬಿಐ ಉಲ್ಲೇಖಿಸಿದೆ. NDTV ಸಂಸ್ಥಾಪಕರು RRPR ಮೂಲಕ, ಕಾನೂನು ಉಲ್ಲಂಘಿಸಿ VCPL ನಿಂದ ಸಾಲವನ್ನು ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ಕೂಡ ಸಿಬಿಐ ಸ್ಪಷ್ಟಪಡಿಸಿದೆ.
ಸಾಲ ತೆಗೆದುಕೊಂಡ ನಂತರ ಈ ಕಾನೂನು ಜಾರಿಗೆ ಬಂದಿತು ಎಂದು ಸಿಬಿಐ ತೀರ್ಮಾನಿಸಿದೆ. VCPL 2009ರ ಜುಲೈ 21ರ ಸಾಲ ಒಪ್ಪಂದದ ಅಡಿಯಲ್ಲಿ 2009ರ ಆಗಸ್ಟ್ 5 ರಂದು RRPR ಗೆ ರೂ.350 ಕೋಟಿಗಳನ್ನು ವರ್ಗಾಯಿಸಿತ್ತು. ಅಲ್ಲದೆ, 2010ರ ಜನವರಿ 25 ರ ಸಾಲ ಒಪ್ಪಂದದ ಆಧಾರದ ಮೇಲೆ 53.75 ಕೋಟಿ ರೂ ಗಳನ್ನು Shenano Retail ಮೂಲಕ ವರ್ಗಾಯಿಸಿತ್ತು.
ಅದು ರಿಲಯನ್ಸ್ ಸ್ಟ್ರಾಟೆಜಿಕ್ ಇನ್ವೆಸ್ಟ್ಮೆಂಟ್ & ಹೋಲ್ಡಿಂಗ್ಸ್ ಲಿಮಿಟೆಡ್ (RIIHL) ಅಡಿಯಲ್ಲಿ ಬರುವ ಕಂಪೆನಿ. ಬ್ಯಾಂಕಿಂಗ್ ಕಂಪೆನಿಗಳು, ಹಣಕಾಸು ಕಂಪೆನಿಗಳು, ವಿಮಾ ಕಂಪೆನಿಗಳು, ಸರ್ಕಾರಿ ಕಂಪೆನಿಗಳು ಇತ್ಯಾದಿಗಳನ್ನು ಹೊರತುಪಡಿಸಿ ಯಾವುದೇ ಕಂಪೆನಿಯು ಎರಡು ಪದರಗಳಿಗಿಂತ ಹೆಚ್ಚಿನ ಸಬ್ಸಿಡಿಗಳನ್ನು ಹೊಂದಿರಬಾರದು ಎಂಬ ನಿಯಮವನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಪ್ರಸ್ತಾಪಿಸಿದ್ದು 2017ರ ಸೆಪ್ಟೆಂಬರ್ 21 ರ ಗೆಜೆಟ್ ಅಧಿಸೂಚನೆಯಲ್ಲಿ ಮಾತ್ರ ಎಂದು ಸಿಬಿಐ ಹೇಳಿದೆ.
ಐಸಿಐಸಿಐ ಬ್ಯಾಂಕ್ ಗೆ 48 ಕೋಟಿ ರೂ ನಷ್ಟವಾಗಿದೆ ಎಂಬ NDTVಯ ಪ್ರವರ್ತಕರ ವಿರುದ್ಧದ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕಿನ ಅಧಿಕಾರಿಗಳು ಯಾವುದೇ ರಹಸ್ಯ ಅಥವಾ ಕ್ರಿಮಿನಲ್ ಪಿತೂರಿ ನಡೆಸಿಲ್ಲ ಮತ್ತು ಅಧಿಕೃತ ಸ್ಥಾನದ ದುರುಪಯೋಗವಾಗಿಲ್ಲ ಎಂದು ಹೇಳಲಾಗಿದೆ.
ಸಾಲದ ಮರುಪಾವತಿಗಾಗಿ 2009ರ ಆಗಸ್ಟ್ 5 ರಂದು ಅನುಮೋದಿಸಿದಂತೆ ಬಡ್ಡಿದರವನ್ನು ಶೇ.19 ರಿಂದ ಶೇ.9.65 ಕ್ಕೆ ಇಳಿಸುವಿಕೆ ಹಲವು ಆರ್ಥಿ ಅಂಶಗಳನ್ನು ಆಧರಿಸಿದೆ. ಅದು NDTV ಪ್ರವರ್ತಕರಿಗಾಗಿಯೆ ನೀಡಿದ್ದ ರಿಯಾಯ್ತಿಯಲ್ಲ. ಅಲ್ಲದೆ, RRPR ಶೇ. 9.6 ಬಡ್ಡಿಯೊಂದಿಗೆ ಸಾಲ ಮರುಪಾವತಿ ಮಾಡಿರುವುದು ಫಂಡ್ ನ ಸರಾಸರಿ ವೆಚ್ಚಕ್ಕಿಂತ ಹೆಚ್ಚೇ ಆಗಿದೆ ಎಂದು ಉಲ್ಲೇಖಿಸಲಾಗಿದೆ.
ಅದರಂತೆ, ಸಿಬಿಐ ವರದಿಯ ಪ್ರಕಾರ, ಐಸಿಐಸಿಐ ಬ್ಯಾಂಕ್ RRPR ಗೆ ಸಾಲ ಮಂಜೂರು ಮಾಡಿರುವಲ್ಲಿ ಯಾವುದೇ ಕಾನೂನು ಮತ್ತು ಮಾನದಂಡಗಳನ್ನು ಉಲ್ಲಂಘಿಸಿಲ್ಲ ಮತ್ತು ಯಾವುದೇ ಅಪರಾಧ ನಡೆದಿಲ್ಲ. ಐಸಿಐಸಿಐ ಬ್ಯಾಂಕ್‌ನಿಂದ 375 ಕೋಟಿ ರೂಪಾಯಿ ಸಾಲ ಪಡೆದಿದ್ದಕ್ಕೆ ಸಂಬಂಧಿಸಿದಂತೆ NDTV ಮತ್ತು ಅದರ ಸಂಸ್ಥಾಪಕರಾದ ಪ್ರಣಯ್ ಮತ್ತು ರಾಧಿಕಾ ರಾಯ್ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.
ಸಿಬಿಐ ದಾಳಿಯನ್ನು ಖಂಡಿಸಿ ಪತ್ರಕರ್ತರು ಮತ್ತು ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಸಿಬಿಐ ನಡೆಯನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಟೀಕಿಸಲಾಗಿತ್ತು. ಸಿಬಿಐ ಪ್ರಕರಣ ದಾಖಲಿಸುವಾಗ ಒಂದು ಸಂಗತಿ ಅಚ್ಚರಿ ಮೂಡಿಸಿತ್ತು. ಯಾವ ಐಸಿಐಸಿಐ ಬ್ಯಾಂಕ್ ಗೆ ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿ ಪ್ರಕರಣ ದಾಖಲಿಸಿತ್ತೊ ಆ ಐಸಿಐಸಿಐ ಬ್ಯಾಂಕ್ ತನ್ನದೇ ಆದ ಯಾವುದೇ ದೂರನ್ನು ದಾಖಲಿಸಿರಲಿಲ್ಲ.
ಹಾಗಿದ್ದೂ ಈ ವಿಷಯದಲ್ಲಿ ಯಾರದೋ ಖಾಸಗಿ ದೂರನ್ನು ತೆಗೆದುಕೊಂಡು ಕೇಸ್ ದಾಖಲಿಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಸಿಬಿಐನ ಮಾಜಿ ಅಧಿಕಾರಿಗಳೇ ಈ ನಡೆಯ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ NDTV ಮೋದಿ ವಿರುದ್ಧ ಮಾತಾಡಬಲ್ಲ, ಮೋದಿ ಸರ್ಕಾರವನ್ನು ಟೀಕಿಸಬಲ್ಲ ದೇಶದ ಏಕೈಕ ಸುದ್ದಿ ವಾಹಿನಿಯಾಗಿ ಗಮನ ಸೆಳೆದಿತ್ತು.
ಉಳಿದೆಲ್ಲ ವಾಹಿನಿಗಳೂ ಮಡಿಲ ಮೀಡಿಯಾಗಳಾಗಿ ಮೋದಿ ಭಜನೆ ಮಾಡುತ್ತಿದ್ದಾಗ, NDTV ದಿಟ್ಟ ಮಾಧ್ಯಮವಾಗಿ ನಿಂತಿತ್ತು. ಅದಾನಿ ಗ್ರೂಪ್ ಚಾನೆಲ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದಾಗ 2022ರ ಕೊನೆಯಲ್ಲಿ ಸಿಬಿಐ ರಾಯ್ ದಂಪತಿಯನ್ನು ವಿಚಾರಣೆ ನಡೆಸಿತ್ತು.
NDTV ಕೂಡ, ಅಂತ್ಯವಿಲ್ಲದ ಅದೇ ಹಳೆಯ ಸುಳ್ಳು ಆರೋಪಗಳ ನೆಪದಲ್ಲಿ ನೀಡುತ್ತಿರುವ ಸಂಘಟಿತ ಕಿರುಕುಳ ಎಂದು ಸಿಬಿಐ ನಡೆಯನ್ನು ಕಟು ಪದಗಳಲ್ಲಿ ಖಂಡಿಸಿತ್ತು. NDTV ಮತ್ತು ಅದರ ಪ್ರವರ್ತಕರು ಬಹು ಏಜೆನ್ಸಿಗಳ ಈ ದಾಳಿಯ ವಿರುದ್ದ ದಿಟ್ಟ ಹೋರಾಟ ನಡೆಸಲಿದೆ ಎಂದು ಚಾನೆಲ್ ಆಗ ಹೇಳಿಕೆ ನೀಡಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಲಜ್ಜವಾಗಿ ದುರ್ಬಲಗೊಳಿಸುವ ಈ ಪ್ರಯತ್ನಗಳಿಗೆ ನಾವು ಬಲಿಯಾಗುವುದಿಲ್ಲ. ದೇಶದ ಸ್ವಾಯತ್ತ ಸಂಸ್ಥೆಗಳನ್ನು ನಾಶಮಾಡಲು ಯತ್ನಿಸುತ್ತಿರುವವರಿಗೆ ನಾವು ಹೇಳುವುದಿಷ್ಟೆ, ನಾವು ಅಂಥ ಕೆಟ್ಟ ಶಕ್ತಿಗಳನ್ನು ಗೆಲ್ಲುತ್ತೇವೆ ಎಂದು ಅವತ್ತು ಚಾನೆಲ್ ಹೇಳಿತ್ತು.
ಅದಾದ ಬಳಿಕ ವ್ಯವಸ್ಥಿತವಾಗಿ ಅದಾನಿ ಸಮೂಹ NDTV ಯನ್ನು ಸ್ವಾಧೀನಪಡಿಸಿಕೊಂಡಿತು.
2022ರ ನವೆಂಬರ್ ನಲ್ಲಿ ರಾಯ್ ದಂಪತಿ NDTV ಆಡಳಿತ ಮಂಡಳಿಗೆ ರಾಜೀನಾಮೆ ನೀಡಿ ಹೊರಬರಬೇಕಾಯಿತು. NDTVಯನ್ನು ಮುಗಿಸುವ ಕೆಲಸ ದಿಢೀರನೆ ಆಗಿದ್ದೇನೂ ಆಗಿರಲಿಲ್ಲ. ಹಂತಹಂತವಾಗಿಯೇ ಅದನ್ನು ಮಾಡಿಕೊಂಡು ಬರಲಾಗಿತ್ತು. ವರ್ಷಗಳಷ್ಟು ಹಿಂದೆಯೆ ರಾಯ್ ದಂಪತಿ ಮೇಲೆ ಪ್ರಕರಣ ದಾಖಲಾಗುವುದರೊಂದಿಗೇ ಅದೆಲ್ಲಾ ಶುರುವಾಗಿತ್ತು.