ರಾಜ್ಯ ಶಿಕ್ಷಣ ನೀತಿಯ ಅನಿವಾರ್ಯತೆ ಹಾಗೂ ಸಾಂವಿಧಾನಿಕ ಪ್ರಸ್ತುತತೆ

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಬಂದ ಕಾರಣಕ್ಕೆ ಒಂದು ಗೌಪ್ಯ ರಾಜಕೀಯ ಅಜೆಂಡಾವನ್ನು ತನ್ನ ಮಡಿಲಿನಲ್ಲಿರಿಸಿಕೊಂಡು ಅದರ ಸಾಕಾರಕ್ಕಾಗಿ ರಾಶಿನೀಯನ್ನು ಒಂದು ಸಾಧನವನ್ನಾಗಿ ಬಳಸುವ ಉದ್ದೇಶದಿಂದ ರೂಪಿಸಿದ ಒಂದು ರಾಜಕೀಯ ಪ್ರೇರಿತ ಶಿಕ್ಷಣ ನೀತಿ ಹೇಗೆ ರಾಷ್ಟ್ರೀಯ ಶಿಕ್ಷಣ ನೀತಿಯಾಗಲು ಸಾಧ್ಯ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ನೀತಿ ನಿರೂಪಣಾ ಪ್ರಕ್ರಿಯೆಯನ್ನು ರಾಜಕೀಯಕರಣ ಗೊಳಿಸಿದ್ದು ಕೇಂದ್ರವೋ ರಾಜ್ಯವೋ ಎಂಬುದನ್ನು ಜನ ಸಾಮಾನ್ಯರು ಅರಿಯಬೇಕಿದೆ. ಈ ನಿಟ್ಟಿನಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಪರ ವಿರೋಧದ ಚರ್ಚೆಗಳನ್ನು ಜನಸಾಮಾನ್ಯರು ಸತ್ಯಾಸತ್ಯತೆಯ ಬೆಳಕಿನಲ್ಲಿ ಚರ್ಚಿಸಬೇಕಿದೆ.

Update: 2023-12-19 05:52 GMT

Photo: freepik 

ರಾಷ್ಟ್ರೀಯ ಶಿಕ್ಷಣ ನೀತಿ (2020)ಯನ್ನು ರಾಜ್ಯ ಸರಕಾರ ತಿರಸ್ಕರಿಸಿ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಆಯೋಗವೊಂದನ್ನು ರಚಿಸಿದೆ (ನಂ. ಇಡಿ 166 ಯುಎನ್‌ಇ 2023). ಈ ಮಧ್ಯೆ, ಸರಕಾರದ ಈ ನಿರ್ಧಾರವನ್ನು ರಾಜಕೀಯಕರಣಗೊಳಿಸಲು ಮುಂದಾಗಿರುವ ಹಲವು ಸಂಘ ಸಂಸ್ಥೆಗಳು, ರಾಷ್ಟ್ರೀಯ ಶಿಕ್ಷಣ ನೀತಿ (ರಾಶಿನೀ) 2020ನ್ನು ಮುಂದುವರಿಸುವಂತೆ ಆಗ್ರಹಿಸಿ ಹಲವು ಬಗೆಯ ಅಭಿಯಾನಗಳನ್ನು ನಡೆಸುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ರಾಜ್ಯ ಸರಕಾರ ರಾಶಿನೀಯಲ್ಲಿ ರಾಜಕೀಯ ಮಾಡುತ್ತಿದೆ ಎಂದು ಈ ವರ್ಗ ಆರೋಪಿಸಿಸುತ್ತಿದೆ. ಆದರೆ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಬಂದ ಕಾರಣಕ್ಕೆ ಒಂದು ಗೌಪ್ಯ ರಾಜಕೀಯ ಅಜೆಂಡಾವನ್ನು ತನ್ನ ಮಡಿಲಿನಲ್ಲಿರಿಸಿಕೊಂಡು ಅದರ ಸಾಕಾರಕ್ಕಾಗಿ ರಾಶಿನೀಯನ್ನು ಒಂದು ಸಾಧನವನ್ನಾಗಿ ಬಳಸುವ ಉದ್ದೇಶದಿಂದ ರೂಪಿಸಿದ ಒಂದು ರಾಜಕೀಯ ಪ್ರೇರಿತ ಶಿಕ್ಷಣ ನೀತಿ ಹೇಗೆ ರಾಷ್ಟ್ರೀಯ ಶಿಕ್ಷಣ ನೀತಿಯಾಗಲು ಸಾಧ್ಯ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಈ ಹಿನ್ನೆಲೆಯಲ್ಲಿ ನೀತಿ ನಿರೂಪಣಾ ಪ್ರಕ್ರಿಯೆಯನ್ನು ರಾಜಕೀಯಕರಣ ಗೊಳಿಸಿದ್ದು ಕೇಂದ್ರವೋ ರಾಜ್ಯವೋ ಎಂಬುದನ್ನು ಜನ ಸಾಮಾನ್ಯರು ಅರಿಯಬೇಕಿದೆ. ಈ ನಿಟ್ಟಿನಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಪರ ವಿರೋಧದ ಚರ್ಚೆಗಳನ್ನು ಜನಸಾಮಾನ್ಯರು ಸತ್ಯಾಸತ್ಯತೆಯ ಬೆಳಕಿನಲ್ಲಿ ಚರ್ಚಿಸಬೇಕಿದೆ. ವಿಶೇಷವಾಗಿ, ಶಿಕ್ಷಣ ಕ್ಷೇತ್ರದ ಮೂಲ ವಾರಸುದಾರರಾದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮತ್ತು ಶಿಕ್ಷಣಾಸಕ್ತರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿದೆ. ಇಲ್ಲವಾದಲ್ಲಿ, ರಾಜಕೀಯ ಕಾರಣಗಳಿಗಾಗಿ ಜನರನ್ನು ದಿಕ್ಕುತಪ್ಪಿಸುವ ಪಕ್ಷ ರಾಜಕಾರಣ ಷಡ್ಯಂತ್ರಕ್ಕೆ ಕರ್ನಾಟಕದ ಪ್ರಜ್ಞಾವಂತರು ಬಲಿಪಶುಗಳಾಗುತ್ತಾರೆ. ರಾಶಿನೀಯಲ್ಲಿ ಗೌಪ್ಯ ರಾಜಕೀಯ ಅಜೆಂಡಾವೊಂದು ತುರುಕುವ ಕೇಂದ್ರದ ತಪ್ಪು ನಿರ್ಧಾರ ಹೇಗೆ ಒಕ್ಕೂಟದಲ್ಲಿನ ರಾಜ್ಯಗಳು ತಮ್ಮದೇ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿಕೊಳ್ಳುವ ಅನಿವಾರ್ಯತೆಯನ್ನು ಹುಟ್ಟು ಹಾಕಿತೆಂಬುದನ್ನು ವಸ್ತುನಿಷ್ಠವಾಗಿ ವಿಮರ್ಶಿಸುವ ಆಶಯ ಈ ಲೇಖನದ್ದಾಗಿದೆ.

ಭಾರತವನ್ನು ಹೇಗೆ ಕಟ್ಟಿಕೊಳ್ಳಬೇಕೆಂಬ ವಿಷಯದಲ್ಲಿ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು, ಆಧುನಿಕ ವೈಜ್ಞಾನಿಕ ಹಾಗೂ ವೈಚಾರಿಕ ಶಿಕ್ಷಣದ ಮೂಲಕ ಸ್ವಾತಂತ್ರ್ಯ ಚಳವಳಿಯ ಬಹು ದೊಡ್ಡ ಫಲಿತಾಂಶವಾಗಿ ಬಂದ ಸಂವಿಧಾನದ ಮೂಲ ಆಶಯಗಳಾದ ಬಹುತ್ವ ಬಹುಸಂಸ್ಕೃತಿ ಬಹುಭಾಷೆಯ ನೆಲೆಯಲ್ಲಿ ಭಾರತವನ್ನು ಒಂದು ಸಮಾಜವಾದಿ ಜಾತ್ಯತೀತ ಸಾರ್ವಭೌಮ ಪ್ರಜಾಸತ್ತಾತ್ಮಕ ರಾಷ್ಟ್ರವನ್ನಾಗಿಸುವ ಸಂವಿಧಾನ ನೆಲೆಯ ರಾಷ್ಟ್ರೀಯತೆ ಹಾಗೂ ರಾಷ್ಟ್ರಪ್ರೇಮದ ಆಶಯ. ಎರಡು, ಸಂವಿಧಾನದ ಮೂಲ ಆಶಯವನ್ನೇ ಗೌಣಗೊಳಿಸಿ, ಧರ್ಮ ಆಧಾರಿತ ಕೋಮುವಾದಿ ರಾಜಕಾರಣದ ನೆಲೆಯಲ್ಲಿ ದೇಶವನ್ನು ಜಾತಿ-ಧರ್ಮದ ಆಧಾರದಲ್ಲಿ ವಿಭಜಿಸಿ ಶಿಕ್ಷಣವನ್ನು ನಿರಾಕರಿಸುವ ಮೂಲಕ ದಾಸ್ಯಕ್ಕೆ ನೂಕುವ ಮನುಸ್ಮತಿ ಆಧಾರಿತ ರಾಷ್ಟ್ರೀಯತೆ ಹಾಗೂ ನಕಲಿ ದೇಶ ಪ್ರೇಮದ ಆಶಯ. ಮೊದಲನೆಯದು, ಬಹುಜನರ ಹಾಗೂ ಬಹುಸಂಖ್ಯಾತರ ಮುಕ್ತ ಸಂವಿಧಾನಬದ್ಧ ಆಶಯವಾದರೆ, ಎರಡನೆಯದು ಕೋಮುವಾದಿ ಸಂಘಟನೆಯೊಂದು ಸಂವಿಧಾನವನ್ನು ಗೌಣಗೊಳಿಸಿ ಜಾತಿ-ಧರ್ಮದ ಶ್ರೇಷ್ಠತೆಯ ನೆಲೆಯಲ್ಲಿ ಗೌಪ್ಯತೆಯಿಂದ ಪ್ರತಿಪಾದಿಸುವ ರಾಷ್ಟ್ರೀಯತೆ.

ಹಿಂದಿನ ಶಿಕ್ಷಣದ ರಾಷ್ಟ್ರೀಯ ನೀತಿಗಳಾದ 1968, 1979, 1986 ಮತ್ತು 1992ರ (ಪರಿಷ್ಕೃತ) ನೀತಿಗಳು ಸಂವಿಧಾನದ ಆಶಯಗಳನ್ನು ಬುನಾದಿಯನ್ನಾಗಿಸಿಕೊಳ್ಳುವ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಸಾಕಾರಗೊಳಿಸುವ ದಸ್ತಾವೇಜುಗಳಾಗಿದ್ದವು. ಆದ್ದರಿಂದ, ಈ ಎಲ್ಲಾ ನೀತಿಗಳು ಸಂವಿಧಾನದ ಮೂಲ ಆಶಯವನ್ನು ಒಳಮಾಡಿಕೊಂಡು ಸ್ಪಷ್ಟವಾಗಿ ಪ್ರತಿಪಾದಿಸಿವೆ. ಈ ಆಶಯವನ್ನು ಆ ನೀತಿಗಳಿಂದಲೇ ತೆಗೆದು ಉದ್ಧರಿಸುವುದಾದರೆ, ಶಿಕ್ಷಣ ಕುರಿತಾದ ರಾಷ್ಟ್ರೀಯ ನೀತಿ 1968 ತನ್ನ ಉದ್ದೇಶವನ್ನು ಈ ಕೆಳಕಂಡಂತೆ ತಿಳಿಸಿತ್ತು.

The Government of India is convinced that a radical reconstruction of education on the broad lines recommended by the education commission is essential for economic and cultural development of the country, for national integration and for realising the ideal of a socialistic pattern of society. This will involve a transformation of the system to relate it more closely to life of the people; a continuous effort to expand educational opportunity; a sustained and intensive effort to raise the quality of education at all stages; an emphasis on the development of science and technology; and the cultivation of moral and social values. (Para 3 National Policy on Education)

ಆನಂತರ, 1979 ರಲ್ಲಿ ರೂಪಿಸಲಾದ ಕರಡು ಶಿಕ್ಷಣ ಕುರಿತಾದ ರಾಷ್ಟ್ರೀಯ ನೀತಿಯು ತನ್ನ ಆಶಯವನ್ನು ಈ ಕೆಳಗಿನಂತೆ ದಾಖಲಿಸಿತ್ತು.

The aim of education should be the growth of the individual through truthful life without detriment to the welfare and progress of society and our cherished ideals of freedom, equality and social justice .To this end it should strengthen values of democracy, secularism and socialism .Education should promote national unity, pride in our culture heritage, and faith in the countryʼs future. The effort must be to inculcate scientific and moral values and to facilitate pursuit of knowledge (Para 1.2)

ಮುಂದೆ 1986 ರಲ್ಲಿ ವ್ಯಾಪಕ ಚರ್ಚೆ ಸಮಾಲೋಚನೆ ಮೂಲಕ ಒಂದು ಸಮಗ್ರ ಶಿಕ್ಷಣ ನೀತಿ ರೂಪುಗೊಂಡ ಸಂದರ್ಭದಲ್ಲಿ ಶಿಕ್ಷಣ ನೀತಿಯು ತನ್ನ ಆಶಯವನ್ನು ಈ ಕೆಳಗಿನಂತೆ ದಾಖಲಿಸಿತ್ತು.

The Constitution embodies the principles on which the National System of Education is conceived of.

The concept of a National System of Education implies that, up to a given level, all students, irrespective of caste, creed, location or sex, have access to education of a comparable quality. To achieve this, the Government will initiate appropriately funded programmes. Effective measures will be taken in the direction of the Common School System recommended in the 1968 Policy. (Para 3.1 and 3.2 )

ಈ ಮೇಲಿನ ಮೂರು ಶಿಕ್ಷಣದ ರಾಷ್ಟ್ರೀಯ ನೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈವರೆಗಿನ ಎಲ್ಲಾ ಶಿಕ್ಷಣ ನೀತಿಗಳು ಸಂವಿಧಾನದ ನೆಲೆಯಲ್ಲಿ ಒಂದು ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳುವ ಭಾಗವಾಗಿ ಎಲ್ಲಾ ಬಗೆಯ ಪ್ರಯತ್ನಗಳನ್ನು ಮಾಡುತ್ತಾ ಬಂದಿವೆ ಮತ್ತು ಆ ನಿಟ್ಟಿನಲ್ಲಿ ಮುಂಗಾಣ್ಕೆ ಹೊಂದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಉದ್ದೇಶದಿಂದ ನಾವು ಶಿಕ್ಷಣದ ರಾಷ್ಟ್ರೀಯ ನೀತಿಯ ಚೌಕಟ್ಟುಗಳನ್ನು ರೂಪಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಈ ಶಿಕ್ಷಣ ನೀತಿಗಳ ಮುಖ್ಯ ಗುರಿ ಗಣತಂತ್ರ ಒಕ್ಕೂಟದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಮತ್ತು ಆ ವ್ಯವಸ್ಥೆಯ ಮೂಲಕ ನಮ್ಮ ಸಂವಿಧಾನದ ಆಶಯಗಳನ್ನು ಈಡೇರಿಸಿಕೊಳ್ಳುವ ಬಗೆ ಹೇಗೆ ಎಂಬ ಮುಂಗಾಣ್ಕೆಯನ್ನು ಒದಗಿಸುವುದಾಗಿದೆ.

ಸ್ವಾತಂತ್ರ್ಯಾನಂತರ ಭಾರತದಲ್ಲಿ ಮೊದಲಬಾರಿಗೆ ಶಿಕ್ಷಣ ಆಯೋಗದ ವರದಿ(1964-66) ಅನ್ವಯ 1968ರಲ್ಲಿ ಶಿಕ್ಷಣದ ರಾಷ್ಟ್ರೀಯ ನೀತಿಯನ್ನು ರೂಪಿಸಿ ಜಾರಿಗೊಳಿಸಿದೆವು. 1979ರಲ್ಲಿ ಶಿಕ್ಷಣದ ರಾಷ್ಟ್ರೀಯ ನೀತಿಯ ಕರಡನ್ನು ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ರೂಪಿಸಿ ಪ್ರಕಟಿಸಿತಾದರೂ ಅದು ಪೂರ್ಣವಾಗಿ ಜಾರಿಯಾಗಲಿಲ್ಲ. ಆನಂತರ 1986ರಲ್ಲಿ ವ್ಯಾಪಕ ಚರ್ಚೆ ಮತ್ತು ಪ್ರಕ್ರಿಯೆ ಮೂಲಕ ಶಿಕ್ಷಣದ ರಾಷ್ಟ್ರೀಯ ನೀತಿಯನ್ನು ರೂಪಿಸಿ ಜಾರಿಗೊಳಿಸಲಾಯಿತು. 1992ರಲ್ಲಿ 1986ರ ನೀತಿಯನ್ನು ಪರಿಷ್ಕರಿಸಿ 1992ರಲ್ಲಿ ಒಂದು ಸಮಗ್ರ ಕ್ರಿಯಾ ಯೋಜನೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕರಿಸುವ ಮೂಲಕ ಜಾರಿಗೊಳಿಸಲಾಯಿತು.

ಈ ಪರಂಪರೆಗೆ ಅಪವಾದವೆಂಬಂತೆ, 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರಕಾರವು ತನ್ನ ಗುಪ್ತ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ತಾನು ಪ್ರತಿಪಾದಿಸುವ ರಾಷ್ಟ್ರೀಯತೆಯನ್ನು ಸಾಕಾರಗೊಳಿಸಲು ರೂಪಿಸಿದ ದಸ್ತಾವೇಜೇ ರಾಷ್ಟ್ರೀಯ ಶಿಕ್ಷಣ ನೀತಿ 2020. ಎನ್‌ಡಿಎ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಪ್ರಕ್ರಿಯೆಯನ್ನು 2014ರಲ್ಲಿ ಪ್ರಾರಂಭಿಸಿ ಜುಲೈ 29, 2020ರಂದು ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಕ್ಯಾಬಿನೆಟ್‌ಅನುಮೋದನೆಯ ಮೂಲಕ ಜಾರಿಗೊಳಿಸಿದೆ.

ಹಿಂದಿನ ಎಲ್ಲಾ ಶಿಕ್ಷಣದ ರಾಷ್ಟ್ರೀಯ ನೀತಿಗಳಿಗೆ ಹೋಲಿಸಿ ನೋಡಿದರೆ, ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಬಗ್ಗೆ ರಾಷ್ಟ್ರಾದ್ಯಂತ ಬಂದ ಟೀಕೆ, ವಿರೋಧ ಮತ್ತು ಚರ್ಚೆಗಳು ಉಳಿದ ಶಿಕ್ಷಣದ ರಾಷ್ಟ್ರೀಯ ನೀತಿಗಳನ್ನು ರೂಪಿಸಿ ಜಾರಿಗೊಳಿಸುವಾಗ ಕಂಡುಬರಲಿಲ್ಲ ಎಂಬುದು ಗಮನಾರ್ಹ ಸಂಗತಿ. ಹಿಂದಿನ ನೀತಿಗಳ ಬಗ್ಗೆ ವಿರೋಧಗಳಿದ್ದರೂ ಅವು ಸಣ್ಣ ಮಟ್ಟದ ವಿಮರ್ಶೆಗಳಾಗಿದ್ದವೇ ಹೊರತು, ನೀತಿಯನ್ನು ಸಾರಾಸಗಟಾಗಿ ತಿರಸ್ಕರಿಸಲು ಒತ್ತಾಯಿಸಿದ ವಿರೋಧಗಳಾಗಿರಲಿಲ್ಲ ಎಂಬುದು ಕೂಡ ಮುಖ್ಯ ಸಂಗತಿ. ಜೊತೆಗೆ ಈ ನೀತಿಯನ್ನು ತಿರಸ್ಕರಿಸಿರುವುದು ಕೇವಲ ಕರ್ನಾಟಕ ಮಾತ್ರವಲ್ಲ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳೂ ತಿರಸ್ಕರಿಸಿವೆ.

ಹಾಗಾದರೆ ಇದಕ್ಕೆ ಪ್ರಮುಖ ಕಾರಣವೇನು ಎಂದು ಅವಲೋಕಿಸುವುದು ಒಂದು ಮಹತ್ವದ ವಿಷಯವಾಗುತ್ತದೆ. ರಾಶಿನೀ-೨೦೨೦ ತನ್ನ ಒಡಲಾಳದಲ್ಲಿ ಇರಿಸಿಕೊಂಡು ಬಂದ ಸಂವಿಧಾನ ವಿರೋಧಿ ವೈರುಧ್ಯಗಳು ಮತ್ತು ಗುಪ್ತ ರಾಜಕೀಯ ಅಜೆಂಡಾ ಅತ್ಯಂತ ಪ್ರಮುಖ ಕಾರಣ. ಹಿಂದಿನ ಎಲ್ಲಾ ನೀತಿಗಳು ಸಂವಿಧಾನದ ಆಶಯಗಳನ್ನು ನೀತಿಯ ಬುನಾದಿ ತತ್ವಗಳನ್ನಾಗಿ ಮತ್ತು ತಾತ್ವಿಕ ಪ್ರಮಾಣೀಕರಿಸಿದ ಚೌಕಟ್ಟನ್ನಾಗಿ ಒಳ ಮಾಡಿಕೊಂಡರೆ, ಈ ನೀತಿಯು ವ್ಯವಸ್ಥಿತವಾಗಿ ಸಂವಿಧಾನದ ಆಶಯಗಳನ್ನು ಗೌಣಗೊಳಿಸುವ ಮೂಲಕ ಒಂದು ರಾಜಕೀಯ ಅಜೆಂಡಾವನ್ನು ಸಾಕಾರಗೊಳಿಸುವ ಉದ್ದೇಶ( ದುರುದ್ದೇಶ)ದಿಂದ ನೀತಿಯನ್ನು ರೂಪಿಸಿ ಜಾರಿಗೊಳಿಸಲು ಮುಂದಾದ್ದೆ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಯಿತು. ರಾಶಿನೀ-೨೦೨೦ರಲ್ಲಿ ಶೈಕ್ಷಣಿಕ ಬದಲಾವಣೆಗೆ ಪ್ರಸ್ತಾಪಿಸಿರುವ ವೈಭವೀಕೃತ ಪ್ರಸ್ತಾವನೆಗಳಿಗಿಂತ, ಮೂಲ ತಾತ್ವಿಕ ಹಾಗೂ ಪ್ರಮಾಣೀಕೃತ ಚೌಕಟ್ಟಿನಲ್ಲಿ ನೀತಿಯ ಉದ್ದೇಶ ಹಾಗೂ ಮುಂಗಾಣ್ಕೆಯನ್ನು ವಸ್ತುನಿಷ್ಠವಾಗಿ ವಿಮರ್ಶಿಸಿದಾಗ ಸತ್ಯ ಗೋಚರಿಸುತ್ತದೆ.

ಮೊದಲಿಗೆ, ರಾಶಿನೀ-2020ರ ಮೂಲತತ್ವ ಯಾವುದಾಗಿದೆ ಎಂದು ನೋಡೋಣ. ನೀತಿಯು ಹೇಳುವಂತೆ, ‘‘ಈ ನೀತಿಯು ಶಿಕ್ಷಣವು ಅಕ್ಷರ ಜ್ಞಾನ, ಗಣಿತ ಕೌಶಲ್ಯವನ್ನು ಒಳಗೊಂಡ ‘ಬುನಾದಿ ಸಾಮರ್ಥ್ಯಗಳು’ ಮತ್ತು ವಿಮರ್ಶಾತ್ಮಕ ಚಿಂತನೆ ಹಾಗೂ ಸಮಸ್ಯಾ ಪರಿಹಾರದಂತಹ ಉನ್ನತ ಹಂತದ ಜ್ಞಾನಾತ್ಮಕ ಸಾಮರ್ಥ್ಯಗಳನ್ನು ಮಾತ್ರವಲ್ಲದೆ ಸಾಮಾಜಿಕ, ನೈತಿಕ ಮತ್ತು ಭಾವನಾತ್ಮಕ ಸಾಮರ್ಥ್ಯ ಗಳನ್ನೂ ಸಹ ಅಭಿವೃದ್ಧಿಪಡಿಸಬೇಕು ಎಂಬ ತತ್ವವನ್ನು ಆಧರಿಸಿದೆ’’ ಎಂದು ಹೇಳುತ್ತದೆ (ರಾಶಿನೀ-2020(ಕನ್ನಡ): ಪುಟ 2 ಪ್ಯಾರಾ 4). ಇದೇ ಅಂಶವನ್ನು, ಶಿಕ್ಷಣದ ರಾಷ್ಟ್ರೀಯ ನೀತಿ 1986 ಮತ್ತು ಪರಿಷ್ಕೃತ ನೀತಿ 1992ಕ್ಕೆ ಹೋಲಿಸಿ ನೋಡುವುದಾದರೆ, ‘‘ಶಿಕ್ಷಣವು ಸಂಸ್ಕೃತಿ ಗ್ರಹಣವನ್ನು(acculturating) ಬೆಳೆಸುವ ಪಾತ್ರವನ್ನು ಹೊಂದಿದೆ. ಇದು ಸೂಕ್ಷ್ಮತೆ ಮತ್ತು ಗ್ರಹಿಕೆಗಳನ್ನು ಪರಿಷ್ಕರಿಸುವ ಮೂಲಕ ರಾಷ್ಟ್ರೀಯ ಒಗ್ಗಟ್ಟು, ವೈಜ್ಞಾನಿಕ ಮನೋಭಾವ ಮತ್ತು ಮನಸ್ಸು ಮತ್ತು ಚೈತನ್ಯದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡುತ್ತದೆಯಲ್ಲದೆ ನಮ್ಮ ಸಂವಿಧಾನದಲ್ಲಿ ಸಮಾಜವಾದ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಗುರಿಗಳನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯತ್ತದೆ’’ ಎಂದು ಹೇಳುತ್ತದೆ (ಶಿರಾನೀ-1992 (ಪರಿಷ್ಕೃತ) : ಪ್ಯಾರಾ 2.2). ಈ ಅಂಶಗಳು ನೀತಿಯ ಹಿಂದಿನ ಆಳವಾದ ತಾತ್ವಿಕತೆಗಳಲ್ಲಿನ ವ್ಯತ್ಯಾಸವನ್ನು ಅನಾವರಣಗೊಳಿಸುತ್ತದೆ.

ಎರಡನೆಯದಾಗಿ, ಈ ನೀತಿಯ ಮಾರ್ಗಸೂಚಿ ತತ್ವ ಯಾವುದನ್ನು ಬುನಾದಿಯಾಗಿ ಪರಿಗಣಿಸಿದೆ ಎಂದು ನೋಡುವುದಾದರೆ, ‘‘ಅತ್ಯುನ್ನತ ಭಾರತೀಯ ಜ್ಞಾನ ಮತ್ತು ಚಿಂತನೆಯ ಶ್ರೀಮಂತ ಪ್ರಾಚೀನ ಪರಂಪರೆಯು ಈ ನೀತಿಗೆ ದಾರಿದೀಪವಾಗಿದೆ. ಜ್ಞಾನದ ಅನ್ವೇಷಣೆ (ಜ್ಞಾನ), ಬುದ್ಧಿವಂತಿಕೆ (ಪ್ರಜ್ಞಾ) ಮತ್ತು ಸತ್ಯಗಳ ಅನ್ವೇಷಣೆಯನ್ನು ಯಾವಾಗಲೂ ಭಾರತೀಯ ಚಿಂತನೆ ಮತ್ತು ತತ್ವಶಾಸ್ತ್ರದಲ್ಲಿ ಅತ್ಯುನ್ನತ ಮಾನವ ಗುರಿಯೆಂದು ಪರಿಗಣಿಸಲಾಗಿದೆ’’ (ರಾಶಿನೀ-2020 (ಕನ್ನಡ): ಪುಟ 2 ಪ್ಯಾರಾ 5) ಎಂದು ನೀತಿ ಪ್ರತಿಪಾದಿಸುತ್ತದೆ. ಇದೇ ಅಂಶವನ್ನು , ಶಿಕ್ಷಣದ ರಾಷ್ಟ್ರೀಯ ನೀತಿ 1986 ಮತ್ತು ಪರಿಷ್ಕೃತ ನೀತಿ 1992ಕ್ಕೆ ಹೋಲಿಸಿ ನೋಡುವುದಾದರೆ, ‘‘ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ ಹೇಗಿರಬೇಕೆಂಬ ಗ್ರಹಿಕೆಯು ಸಂವಿಧಾನದ ಮೂಲ ತತ್ವಗಳನ್ನು ಒಳಗೊಂಡಿದೆ’’ ಎಂದು ಪ್ರತಿಪಾದಿಸುತ್ತದೆ (ಶಿರಾನೀ 1992 (ಪರಿಷ್ಕೃತ: ಪ್ಯಾರಾ 3.1).

ರಾಶಿನೀ ೨೦೨೦ ಬಹುಜನ ಭಾರತೀಯರಿಗೆ ತಿಳಿಯದ ಮತ್ತು ಬಹುಸಂಖ್ಯಾತರನ್ನು ಶಿಕ್ಷಣದಿಂದ ಹೊರಗಿಟ್ಟಿದ್ದ ‘ಭಾರತೀಯ ಜ್ಞಾನ’ ಮತ್ತು ಚಿಂತನೆಯ ಶ್ರೀಮಂತ ಪ್ರಾಚೀನ ಪರಂಪರೆಯ ತಾತ್ವಿಕತೆಯನ್ನು ದಾರಿದೀಪವನ್ನಾಗಿಸಿಕೊಂಡರೆ, ಹಿಂದಿನ ಶಿಕ್ಷಣ ನೀತಿಗಳು ಸ್ವಾತಂತ್ರ್ಯ ಚಳವಳಿಯ ಉತ್ಪನ್ನವಾದ ಮತ್ತು ತಾವೇ ತಮಗೆ ಸಮರ್ಪಿಸಿಕೊಂಡು ಅಂಗೀಕರಿಸಿದ ಸಂವಿಧಾನದ ಮೂಲ ತತ್ವಗಳ ಆಧಾರದಲ್ಲಿ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಆಶಯವನ್ನು ತನ್ನ ದಾರಿದೀಪವನ್ನಾಗಿಸಿ ಕೊಂಡಿದ್ದವು.

ರಾಶಿನೀ-2020 ಅತ್ಯಂತ ಕ್ರಾಂತಿಕಾರಿ ನೀತಿಯೆಂದು ಪ್ರತಿಪಾದಿಸುವ ಕಟ್ಟಾಳುಗಳು ಪ್ರಾರಂಭಿಕ ಗ್ರಹಿಕೆಯಲ್ಲಿಯೇ ಇರುವ ಈ ಮೂಲಭೂತ ವೈರುಧ್ಯತೆಗೆ ಉತ್ತರ ನೀಡಬೇಕಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಸಂವಿಧಾನದ ಆಶಯಕ್ಕೆ ಅನುಗುಣವಾಗಿರಬೇಕೋ ಅಥವಾ ಜಾತಿ ಮತ್ತು ವರ್ಣದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಅಸಮಾನತೆ ಮತ್ತು ಪ್ರತ್ಯೇಕತೆಯನ್ನು ಪ್ರತಿಪಾದಿಸಿದ ವರ್ಣಾಶ್ರಮದ ವರ್ಣಭೇದ ಪರಂಪರೆಗೆ ಅನುಗುಣವಾಗಿರಬೇಕೋ ಎಂಬುದನ್ನು ಸ್ಪಷ್ಟೀಕರಿಸಬೇಕಿದೆ.

ಮೂರನೆಯದಾಗಿ, ಈ ನೀತಿಯನ್ನು ರೂಪಿಸಲು ಅನುಸರಿಸಿದ ವಿಧಾನ ಅಸಾಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ಮಾತ್ರವಲ್ಲದೆ ಗೌಪ್ಯ ಮತ್ತು ಅಪಾರದರ್ಶಕತೆಯಿಂದ ಕೂಡಿತ್ತು ಎಂಬುದಕ್ಕೆ ಹಲವು ಆಧಾರಸಹಿತ ಉದಾಹರಣೆಗಳಿವೆ. ಸಮಿತಿ ರಚಿಸುವ ಮುನ್ನವೇ ಸಮಾಲೋಚನಾ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು; ನಂತರ 2015ರಲ್ಲಿ ಟಿ.ಆರ್.ಎಸ್.ಸುಬ್ರಮಣ್ಯ ಸಮಿತಿಯನ್ನು ರಚಿಸಿದ್ದು; 2016ರಲ್ಲಿ ಈ ಸಮಿತಿಯು ನೀಡಿದ ವರದಿಯನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಿದ್ದು; ನಂತರ 2017 ರಲ್ಲಿ ಡಾ.ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು; ಈ ಸಮಿತಿ ಡಿಸೆಂಬರ್ 2018ರಲ್ಲಿ ನೀಡಿದ್ದ ವರದಿಯನ್ನು ಗೌಪ್ಯವಾಗಿಟ್ಟು 2019ರ ಪಾರ್ಲಿಮೆಂಟರಿ ಚುನಾವಣೆಯ ನಂತರ ವರದಿಯನ್ನು ಸ್ವೀಕರಿಸಿದಂತೆ ತೋರಿಸಿದ್ದು; ಆನಂತರ ಮುಖ್ಯ ವರದಿಯನ್ನು ಆಧರಿಸಿ ನೀತಿಯನ್ನು ರೂಪಿಸಲು ಪ್ರಾರಂಭಿಸಿದ ಕಣ್ಣಾಮುಚ್ಚಾಲೆ ಆಟದಲ್ಲಿ ನೀತಿಯ ಮೊದಲ ಕರಡಿನಲ್ಲಿದ್ದ ಅಲ್ಪಸ್ವಲ್ಪ ಉತ್ತಮ ಅಂಶಗಳನ್ನು ಕೈಬಿಟ್ಟು ನೀರಸಗೊಳಿಸಿದ್ದು (2019ರ 55 ಪುಟಗಳ ಆವೃತ್ತಿಯ ನೀತಿಯಲ್ಲಿ ಪ್ಯಾರಾ 8.8 ಮತ್ತು 17.3ನ್ನು ಗಮನಿಸಿ); ನೀತಿಯನ್ನು ಅಂತಿಮಗೊಳಿಸಿದ ನಂತರ ಅದನ್ನು ಸಂಸತ್ತಿನಲ್ಲಿ ಮಂಡಿಸದೆ ಕೇವಲ ಸಚಿವ ಸಂಪುಟದ ಅನುಮೋದನೆಯ ಮೂಲಕ ಜಾರಿಗೊಳಿಸಿದ್ದು ಮತ್ತು ಅಂತಿಮವಾಗಿ ಇಡೀ ದೇಶ ಕೊರೋನದ ಬೇಗೆಯಲ್ಲಿ ತತ್ತರಿಸಿ ಜನರನ್ನು ತಮ್ಮ ಬದುಕನ್ನೇ ಕಳೆದುಕೊಂಡು ಬಳಲಿ ಬಸವಳಿದ ಕಾಲದಲ್ಲಿ ತರಾತುರಿಯಿಂದ ನೀತಿಯನ್ನು ಜಾರಿಗೊಳಿಸಿದ್ದು.

ಇದನ್ನು ಪ್ರಜಾಸತ್ತಾತ್ಮಕ, ಪಾರದರ್ಶಕ ಮತ್ತು ಮುಕ್ತ ಮನಸ್ಸಿನ ಪ್ರಕ್ರಿಯೆ ಎಂದು ಕರೆಯಲು ಸಾಧ್ಯವೆ! ಈ ಬಗೆಯ ಅಸಾಂವಿಧಾನಿಕ, ಅಪಾರದರ್ಶಕ ಹಾಗೂ ಅಪ್ರಜಾಸತ್ತಾತ್ಮಕತೆಯಿಂದ ಕೂಡಿದ ಗೌಪ್ಯ ಪ್ರಕ್ರಿಯೆ ಅವಶ್ಯಕತೆ ಇತ್ತೇ! ನೀತಿಯನ್ನು ಅಂತಿಮಗೊಳಿಸಿದ ನಂತರ, ದೇಶದ ಅತ್ಯುನ್ನತ ಸಂಸ್ಥೆಯಾದ ಕೇಂದ್ರ ಶಿಕ್ಷಣ ಸಲಹಾ ಮಂಡಳಿ(ಸಿಎಬಿಇ)ಯಲ್ಲಿಟ್ಟು ಚರ್ಚಿಸಲಿಲ್ಲವೇಕೆ? ಈ ಹಿಂದಿನ ಎಲ್ಲಾ ನೀತಿಗಳಂತೆ ರಾಶಿನೀ-2020ನ್ನು ಸಂಸತ್ತಿನಲ್ಲಿ ಮಂಡಿಸಲಿಲ್ಲವೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ರಾಶಿನೀ-2020ನ್ನು ಜಾರಿಗೊಳಿಸಬೇಕೆಂದು ಅಭಿಯಾನ ನಡೆಸುತ್ತಿರುವ ಗೆಳೆಯರು ಉತ್ತರಿಸಬೇಕಿದೆ.

ಕೊನೆಯದಾಗಿ, ಈ ಎಲ್ಲಾ ಲೋಪಗಳನ್ನು ಬದಿಗಿಟ್ಟು, ಈ ನೀತಿಯು ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿರುವ ಅಸಮಾನತೆ, ಪ್ರತ್ಯೇಕತೆ, ತಾರತಮ್ಯ, ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕಾರ್ಪೊರೇಟರೀಕರಣವನ್ನು ಪರಿಹರಿಸಲು ದೃಢವಾದ ಪ್ರಸ್ತಾವನೆಗಳನ್ನು ಒಳಗೊಂಡಿದೆಯೇ ಎಂದು ನೋಡುವುದಾದರೆ, ಅದು ಕೂಡ ತೀರಾ ನಿರಾಶೆಯನ್ನು ಮೂಡಿಸುತ್ತದೆ. ಮುಖ್ಯವಾಗಿ, ಈ ನೀತಿಯು ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಮೂಲಕ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವ ಬದ್ಧತೆಯ ವಿಷಯದಲ್ಲಿ ಪೂರ್ಣ ಸೋತಿದೆ. ಹಿಂದಿನ ನೀತಿಗಳಲ್ಲಿ ಈ ಪ್ರಸ್ತಾವನೆ ಕನಿಷ್ಠ ಒಂದು ಮೂಲಭೂತ ಆಶಯವಾಗಿ ಎಲ್ಲಾ ದಸ್ತಾವೇಜುಗಳಲ್ಲು ದಾಖಲಾಗಿತ್ತು. ಆದರೆ, ಈ ನೀತಿಯು ಅಂತಹ ಆಶಯವನ್ನು ಕೈಬಿಟ್ಟಿದೆ. ಈ ನೆಲೆಯಲ್ಲಿ, ಈಗಾಗಲೇ ದೇಶಾದ್ಯಂತ ವ್ಯಾಪಕ ವಿರೋಧಕ್ಕೆ ಗುರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಈ ಕೆಳಗಿನ ಮೂರು ಮುಖ್ಯ ಪ್ರಶ್ನೆಗಳ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಸಾರ್ವಜನಿಕ ವಿಮರ್ಶೆಗೆ ಒಳಪಡಿಸಬೇಕಿದೆ.

1. ಈ ಶಿಕ್ಷಣ ನೀತಿಯು 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಆರೈಕೆ, ರಕ್ಷಣೆ ಪೋಷಣೆ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸಂಸ್ಥೆಗಳಾದ ಅಂಗನವಾಡಿ ಕೇಂದ್ರ, ಸರಕಾರಿ ಶಾಲಾ-ಕಾಲೇಜುಗಳನ್ನು ಬಲಿಷ್ಠಗೊಳಿಸುವ ಸ್ಪಷ್ಟ ಕಾನೂನಾತ್ಮಕ ಪ್ರಸ್ತಾವನೆಗಳನ್ನು ಹೊಂದಿದೆಯೇ?

2. ಈ ಶಿಕ್ಷಣ ನೀತಿಯು ಎಲ್ಲಾ ಸರಕಾರಿ ಶಾಲೆಗಳ ಮೂಲಸೌಕರ್ಯ, ಶಿಕ್ಷಕರ ನೇಮಕಾತಿ, ಕಲಿಕಾ ವಾತಾವರಣ ಮತ್ತು ಪಠ್ಯಕ್ರಮದ ಗುಣಮಟ್ಟವನ್ನು, ಹಾಲಿ ಇರುವ ಕೇಂದ್ರೀಯ ವಿದ್ಯಾನಿಲಯ ಶಾಲೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಮೂಲಕ ದೇಶದಲ್ಲಿ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿಸುವ ಭರವಸೆ ನೀಡುತ್ತದೆಯೇ?

3.ಈ ಶಿಕ್ಷಣ ನೀತಿಯು ಶಿಕ್ಷಣ ಮಾರುಕಟ್ಟೆಯ ಸರಕಾಗಿರುವ ಈ ಕಾಲದಲ್ಲಿ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕಾರ್ಪೊರೇಟರೀಕರಣವನ್ನು ನಿಯಂತ್ರಿಸಿ ಶಿಕ್ಷಣವನ್ನು ಒಂದು ಸಾಮಾಜಿಕ ಒಳಿತಿನ ಮತ್ತು ಸಾಮಾಜಿಕ ಪರಿವರ್ತನೆಯ ನೆಲೆಯಲ್ಲಿ ನಿಯಂತ್ರಿಸಲು ಬದ್ಧವಾಗಿದೆಯೇ?

4. ಈ ಶಿಕ್ಷಣ ನೀತಿಯು ಜಗತ್ತಿನ ಹಲವು ರಾಷ್ಟ್ರಗಳು ಪರಿಭಾವಿಸಿರುವಂತೆ, ಶಿಕ್ಷಣವನ್ನು ಸಮಾನತೆ, ಸಾಮಾಜಿಕ ನ್ಯಾಯ, ಭ್ರಾತೃತ್ವ, ಮಾನವೀಯತೆ, ಪರಸ್ಪರ ಸಹಬಾಳ್ವೆ ಹಾಗೂ ಪ್ರಜಾಪ್ರಭುತ್ವ ಬಲವರ್ಧನೆಯ ಬಲಿಷ್ಠ ಸಾಧನವನ್ನಾಗಿಸುವ ತಾತ್ವಿಕ ಸಾಂವಿಧಾನಿಕ ಚೌಕಟ್ಟನ್ನು ಹೊಂದಿಯೇ?

ನನ್ನ ದೃಷ್ಟಿಯಲ್ಲಿ, ಮೇಲಿನ ಜ್ವಲಂತ ಪ್ರಶ್ನೆಗಳಿಗೆ ನೀತಿಯಲ್ಲಿ ಉತ್ತರ ಇಲ್ಲ. ಹಾಗಾದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಈ ನೀತಿಯನ್ನು ರಾಜ್ಯಗಳು ಏಕೆ ಅನುಷ್ಠಾನಗೊಳಿಸಬೇಕು ಎಂಬುದು ಮುಖ್ಯ ಪ್ರಶ್ನೆಯಲ್ಲವೇ! ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವಾಗ ರಾಜ್ಯ ಏಕೆ ರಾಜ್ಯ ಶಿಕ್ಷಣ ನೀತಿ ರೂಪಿಸಬಾರದು? ಈ ಮುಖ್ಯ ಪ್ರಶ್ನೆಯ ಬಗ್ಗೆ ನಾಡಿನ ಜನತೆ ಯಾವುದೇ ಪೂರ್ವಾಗ್ರಹ ಪೀಡಿತರಾಗದೆ, ಮುಕ್ತವಾಗಿ ಚರ್ಚಿಸುವ ಮೂಲಕ, ತಮಗಿರುವ ಪರಮಾಧಿಕಾರವನ್ನು ಬಳಸಿ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ನಿರ್ಣಾಯಕ ತೀರ್ಪನ್ನು ನೀಡುವ ಕಾಲ ಹತ್ತಿರ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನಿರಂಜನಾರಾಧ್ಯ ವಿ.ಪಿ.

contributor

Similar News