ನೇಜಾರು ತಾಯಿ, ಮಕ್ಕಳ ಬರ್ಬರ ಹತ್ಯೆ ಪ್ರಕರಣಕ್ಕೆ ವರ್ಷ

Update: 2024-11-12 04:11 GMT
Editor : Naufal | Byline : ನಝೀರ್ ಪೊಲ್ಯ

ಉಡುಪಿ: ಸರಿ ಸುಮಾರು ಒಂದು ವರ್ಷಗಳ ಹಿಂದೆ ಇಡೀ ರಾಜ್ಯವೇ ಬೆಚ್ಚಿ ಬೀಳುವ ಬರ್ಬರ ಕೃತ್ಯವೊಂದು ಉಡುಪಿಯಲ್ಲಿ ನಡೆದು ಹೋಗಿತ್ತು. ಜಿಲ್ಲೆಯ ಇತಿಹಾಸದಲ್ಲಿಯೇ ಕಂಡು ಕೇಳರಿ ಯದ ಅಪರಾಧ ಕೃತ್ಯ ಇದಾಗಿತ್ತು. ಹಾಡಹಗಲೇ ನಡೆದ ಆ ಬೀಭತ್ಸ ದುಷ್ಕೃತ್ಯ ಇನ್ನೂ ಜನರ ಮನಸ್ಸಿಂದ ಮಾಸಿಲ್ಲ. ಅಂದು ಎಲ್ಲೆಡೆ ದೀಪಾವಳಿಯ ಸಂಭ್ರಮ. ಆದರೆ ಆ ದಿನ ಆ ಮನೆಯಲ್ಲಿ ಮಾತ್ರ ರಕ್ತದ ಹೋಕುಳಿಯೇ ಹರಿದಿತ್ತು. ಕೊಲೆಗಡುಕನ ವಿಕೃತ ಮನಸ್ಸಿಗೆ ಒಬ್ಬರಲ್ಲ, ಇಬ್ಬರಲ್ಲ ಒಂದೇ ಕುಟುಂಬ ನಾಲ್ವರು ಹೆಣವಾಗಿ ಬಿದ್ದಿದ್ದರು.

ಇದು 2023ರ ನ.12ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ಲೇಔಟ್ನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಭೀಕರತೆಗೆ ಒಂದು ವರ್ಷ ತುಂಬಿದೆ.

ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಕೊಲೆ ಪ್ರಕರಣದ ವಿಚಾರಣೆಯನ್ನು ಶೀಘ್ರವೇ ಪೂರ್ಣಗೊಳಿಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಒತ್ತಾಯಗಳು ಕುಟುಂಬಸ್ಥರು ಹಾಗೂ ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಕೊಲೆ ಪ್ರಕರಣದ ಹಿನ್ನೆಲೆ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏಕ್ಸ್ಪ್ರೆಸ್ ಸಂಸ್ಥೆಯಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೇಜಾರಿನ ನೂರ್ ಮುಹಮ್ಮದ್ರ ಪುತ್ರಿ ಐನಾಝ್(21)ಳ ಮೇಲಿನ ಅತೀಯಾದ ವ್ಯಾಮೋಹದಿಂದ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್ ಪ್ರದೀಪ್ ಚೌಗುಲೆ(40) ನ.12ರಂದು ಕೊಲೆಗೆ ಯೋಜನೆ ರೂಪಿಸಿದ್ದನು.

ಅದೇ ರೀತಿ ಯಾವುದೇ ಸುಳಿವು ಲಭಿಸದಂತೆ ತನ್ನ ಕಾರನ್ನು ಹೆಜಮಾಡಿ ಟೋಲ್ಗೆ ಮೊದಲೇ ನಿಲ್ಲಿಸಿ, ಅಟೊ, ಬಸ್, ಬೈಕ್ಗಳ ಮೂಲಕ ನೇಜಾರು ತಲುಪಿದ್ದನು. ಅಲ್ಲಿ ಬೆಳಗ್ಗೆ 9ಗಂಟೆ ಸುಮಾರಿಗೆ ಐನಾಝ್ ಮನೆಯೊಳಗೆ ಹೋದ ಪ್ರವೀಣ್, ಐನಾಝ್ ಮತ್ತು ತಡೆಯಲು ಬಂದ ಆಕೆಯ ತಾಯಿ ಹಸೀನಾ(48), ಅಕ್ಕ ಅಫ್ನಾನ್(23) ಹಾಗೂ ತಮ್ಮ ಆಸೀಮ್(13)ನನ್ನು ಬರ್ಬರವಾಗಿ ಚೂರಿಯಿಂದ ಕೊಲೆಗೈದು ಪರಾರಿಯಾಗಿದ್ದನು.

ಮನೆಯಲ್ಲಿದ್ದ ಹಸೀನಾರ ಅತ್ತೆ ಹಾಜಿರಾ(80) ಚೂರಿ ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ.14ರಂದು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.

2 ಹಂತದ ಚಾರ್ಜ್ಶೀಟ್: ತನಿಖೆ ನಡೆಸಿದ ಪೊಲೀಸರು 2024ರ ಫೆ.12ರಂದು ಪ್ರಕರಣದ ಮೊದಲ ಹಂತದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ ಒಟ್ಟು 15 ಸಂಪುಟಗಳಲ್ಲಿ 2,202 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಾಂತ್ರಿಕ ಸಾಕ್ಷ್ಯ, ವಿಶೇಷ ತಜ್ಞರ ಸಾಕ್ಷ್ಯ, ಜನರ ಹೇಳಿಕೆಯ ಸಾಕ್ಷ್ಯ ಸೇರಿದಂತೆ ಒಟ್ಟು 244 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು.

ಎರಡನೇ ಹಂತದ ಚಾರ್ಜ್ಶೀಟ್ನಲ್ಲಿ ಘಟನಾ ಸ್ಥಳದಲ್ಲಿ ಸಂಗ್ರಹಿಸಿದ ಸ್ವ್ಯಾಬ್, ಕೂದಲು, ಮೃತರ ಬಟ್ಟೆಗಳು, ಬಂಧನ ವೇಳೆ ಆರೋಪಿ ಮೈಮೇಲಿದ್ದ ಬಟ್ಟೆಗಳು, ಆರೋಪಿಯ ಕಾರಿನಲ್ಲಿ ಸಂಗ್ರಹಿಸಲಾದ ಸ್ವ್ಯಾಬ್, ತನಿಖೆಯಲ್ಲಿ ಜಪ್ತಿ ಮಾಡಿರುವ ಆರೋಪಿಯ ಚಪ್ಪಲಿ, ಒಳಚಡ್ಡಿ, ಕೃತ್ಯಕ್ಕೆ ಬಳಸಿದ ಚಾಕುವಿನ ಡಿಎನ್ಎ ವರದಿಗಳನ್ನು ಸಲ್ಲಿಸಲಾಗಿತ್ತು. ಹೀಗೆ ಈ ಪ್ರಕರಣದ ಪೊಲೀಸ್ ತನಿಖೆಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.

ಕೈಗೂಡದ ವಿಶೇಷ ಕೋರ್ಟ್: ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಆರಂಭದಲ್ಲಿ ಪ್ರಕರಣದ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಮತ್ತು ಸಮರ್ಥ ವಾದ ಮಂಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವಂತೆ ಒತ್ತಾಯಗಳು ಕೇಳಿಬಂದವು. ಈ ಸಂಬಂಧ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಕೂಡ ಈ ಬೇಡಿಕೆ ಈಡೇರಿಸುವ ಭರವಸೆಯನ್ನೂ ನೀಡಿದ್ದರು.

ಈ ಸಂಬಂಧ ವಿಶೇಷ ಸರಕಾರಿ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವರನ್ನು ಸರಕಾರ ನೇಮಕ ಮಾಡಿತು. ಆದರೆ ಇನ್ನೊಂದು ಬೇಡಿಕೆಯಾದ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಿಲ್ಲ. ಇದೀಗ ಈ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.

ಹೈಕೋರ್ಟ್ ತಡೆಯಾಜ್ಞೆಯಿಂದ ವಿಚಾರಣೆ ವಿಳಂಬ

ಸದ್ಯ ಆರೋಪಿ ಪ್ರವೀಣ್ ಚೌಗುಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಪ್ರಕರಣದ ವಿಚಾರಣೆಯು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಜೂ.13ರಿಂದ ಮೂರು ದಿನಗಳ ಕಾಲ ಸಾಕ್ಷಿಗಳ ವಿಚಾರಣೆಗೆ ನ್ಯಾಯಾಲಯವು ಎ.10ರಂದು ದಿನಾಂಕ ನಿಗದಿಪಡಿಸಿತ್ತು. ಆದರೆ ಆರೋಪಿ ಚೌಗುಲೆ, ಸ್ಥಳ ಮಹಜರು ಸಂದರ್ಭ ತನ್ನ ಮೇಲೆ ನಡೆದ ದಾಳಿ ಯತ್ನವನ್ನು ಮುಂದಿಟ್ಟುಕೊಂಡು ಹೈಕೋರ್ಟ್ ಮೆಟ್ಟಿಲೇರಿ, ನನಗೆ ಹಾಗೂ ನನ್ನ ವಕೀಲರಿಗೆ ಜೀವ ಬೆದರಿಕೆ ಇರುವುದರಿಂದ ವಿಚಾರಣೆಯನ್ನು ಉಡುಪಿಯಿಂದ ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ರಿಟ್ ಅರ್ಜಿ ಸಲ್ಲಿಸಿದ್ದನು. ಅದರಂತೆ ಹೈಕೋರ್ಟ್ ಉಡುಪಿ ನ್ಯಾಯಾಲಯದಲ್ಲಿನ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು.

ಈ ತಡೆಯಾಜ್ಞೆಯನ್ನು ಹೈಕೋರ್ಟ್ ಆ.30ರಂದು ರದ್ದುಗೊಳಿಸಿ ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಸಲು ಅನುಮತಿ ನೀಡಿತು. ಹೀಗಾಗಿ ಪ್ರಕರಣದ ವಿಚಾರಣೆಯು ಸುಮಾರು ಆರು ತಿಂಗಳುಗಳ ಕಾಲ ವಿಳಂಬವಾಯಿತು ಎನ್ನುತ್ತಾರೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ.

ಇದೀಗ ವಿಚಾರಣೆ ಮುಂದುವರಿದಿದ್ದು, ನ.20 ಮತ್ತು 21ರಂದು ಸಾಕ್ಷಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ. ಅದರಂತೆ ಮೊದಲ ದಿನ ಒಂದು ಮತ್ತು ಎರಡು ಹಾಗೂ ಎರಡನೇ ದಿನ ಮೂರು ಮತ್ತು ನಾಲ್ಕನೇ ಸಾಕ್ಷಿಗಳು ಹಾಜರಾಗುವಂತೆ ಕೋರ್ಟ್ ಆದೇಶ ನೀಡಿದೆ. ಈ ಮಧ್ಯೆ ಆರೋಪಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಎರಡು ಬಾರಿ ಮತ್ತು ಹೈಕೋರ್ಟ್ ಒಂದು ಬಾರಿ ತಿರಸ್ಕರಿಸಿದೆ.

ನಾನು ನನ್ನ ಇಡೀ ಕುಟುಂಬವನ್ನು ಕಳೆದುಕೊಂಡಿದ್ದೇನೆ. ಈಗ ನನ್ನ ಮನೆಯಲ್ಲಿ ಯಾರೂ ಇಲ್ಲ. ಇನ್ನೂ ನನಗೆ ಉಳಿದಿರುವುದು ನ್ಯಾಯ ಮಾತ್ರ. ಈ ಪ್ರಕರಣಕ್ಕೆ ಇದೀಗ ಒಂದು ವರ್ಷವಾಯಿತು. ಈಗಾಗಲೇ ಈ ಪ್ರಕರಣದ ವಿಚಾರಣೆ ವಿಳಂಬವಾಗಿದೆ. ಆದುದರಿಂದ ಆದಷ್ಟು ಬೇಗ ವಿಚಾರಣೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆ ವಿಧಿಸಬೇಕು. ನಮಗೆ ನ್ಯಾಯ ಸಿಗಬೇಕು.

- ನೂರ್ ಮುಹಮ್ಮದ್, ಸಂತ್ರಸ್ತ ಕುಟುಂಬದ ಯಜಮಾನ

Full View

Writer - ವಾರ್ತಾಭಾರತಿ

contributor

Editor - Naufal

contributor

Byline - ನಝೀರ್ ಪೊಲ್ಯ

contributor

Similar News