ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ: ಮರು ತನಿಖೆಯ ಅಭಿಪ್ರಾಯವನ್ನು ಸಿಬಿಐನಿಂದಲೇ ಪಡೆಯಬೇಕು

Update: 2025-04-30 10:27 IST
ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ: ಮರು ತನಿಖೆಯ ಅಭಿಪ್ರಾಯವನ್ನು ಸಿಬಿಐನಿಂದಲೇ ಪಡೆಯಬೇಕು
  • whatsapp icon

ಬೆಂಗಳೂರು, ಎ.29: ಬೆಳ್ತಂಗಡಿ ತಾಲೂಕಿನ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಯನ್ನು ಕೊನೆಯದಾಗಿ ಸಿಬಿಐ ಕೈಗೊಂಡಿದ್ದರಿಂದ ಮರು ತನಿಖೆಯ ಅಭಿಪ್ರಾಯವನ್ನು ಸಿಬಿಐನಿಂದಲೇ ಪಡೆಯಬೇಕು ಎಂದು ಪೊಲೀಸ್ ಮಹಾನಿರ್ದೇಶಕರಾಗಿದ್ದ ಡಾ.ಎಂ.ಎ.ಸಲೀಂ ಅವರು ರಾಜ್ಯ ಡಿಜಿಐಜಿಪಿ ಅವರಿಗೆ 2 ವರ್ಷಗಳ ಹಿಂದೆಯೇ ಅಭಿಪ್ರಾಯ ವರದಿ ಸಲ್ಲಿಸಿದ್ದರು.

ಸೌಜನ್ಯಾ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವ ಸಂಬಂಧ ಒಳಾಡಳಿತ ಇಲಾಖೆಯು ಕೈಗೊಂಡಿರುವ ನಿರ್ಣಯದ ಕುರಿತು "the-file.in" ಆರ್‌ಟಿಐ ಮೂಲಕ ಪಡೆದುಕೊಂಡಿರುವ 325 ಪುಟಗಳಲ್ಲಿ ಡಾ.ಎಂ.ಎ.ಸಲೀಂ ಅವರು ರಾಜ್ಯ ಡಿಜಿಐಜಿಪಿ ಅವರಿಗೆ 2 ವರ್ಷಗಳ ಹಿಂದೆಯೇ ಸಲ್ಲಿಸಿದ್ದ ಅಭಿಪ್ರಾಯದ ವರದಿಯೂ ಇದೆ.

ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವ ಕುರಿತು ಪೊಲೀಸ್ ಮಹಾನಿರ್ದೇಶಕರಾಗಿದ್ದ ಡಾ.ಎಂ.ಎ.ಸಲೀಂ ಅವರು 2023ರ ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿದ್ದರು.

ಸಲೀಂ ಅಭಿಪ್ರಾಯ ವರದಿಯಲ್ಲೇನಿದೆ?: ತನಿಖೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಮೇರೆಗೆ ಆರೋಪಿ ಸಂತೋಷ್ ರಾವ್ ವಿರುದ್ಧ ಕಲಂ 376, 201 ಐಪಿಸಿ ಅಡಿಯಲ್ಲಿ 2013ರ ಜನವರಿ 10ರಂದು ಬೆಳ್ತಂಗಡಿಯ ಸಿವಿಲ್ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದನ್ನು ಸಿಸಿ ನಂ 27/2013ರಲ್ಲಿ ವಿಚಾರಣೆಗೆ ಅಂಗೀಕರಿಸಿರುತ್ತದೆ. ಈ ಪ್ರಕರಣದ ಹೆಚ್ಚುವರಿ ತನಿಖೆಯನ್ನು ಕಲಂ 173 (8) ಸಿಆರ್‌ಪಿಸಿ ರೀತಿ ಮುಂದುವರಿಸಲಾಗಿತ್ತು ಎಂದು ಮಾಹಿತಿ ಒದಗಿಸಿರುವುದು ವರದಿಯಿಂದ ಗೊತ್ತಾಗಿದೆ.

ಈ ಪ್ರಕರಣವು ಸಿಐಡಿಯಲ್ಲಿ ಹೆಚ್ಚುವರಿ ತನಿಖೆಗಾಗಿ ಬಾಕಿ ಇದ್ದ ಸಮಯದಲ್ಲಿ ಈ ಪ್ರಕರಣದ ತನಿಖೆಯನ್ನು ಸರಕಾರವು 2013ರ ನವೆಂಬರ್ 6ರಂದು ಸಿಬಿಐಗೆ ವಹಿಸಿ ಆದೇಶಿಸಿದೆ. ಅದರಂತೆ ಸಿಬಿಐ ಸಂಸ್ಥೆಯು ಈ ಪ್ರಕರಣದ ತನಿಖೆಯನ್ನು ಕೈಗೊಂಡು 2015ರ ಅಕ್ಟೋಬರ್ 26ರಂದು ಆರೋಪಿ ಸಂತೋಷ್ ರಾವ್ ವಿರುದ್ಧ ಕಲಂ 376, 302 ಐಪಿಸಿ ರೀತಿ ದೋಷಾರೋಪ ಪಟ್ಟಿಯನ್ನು ಬೆಂಗಳೂರು ನಗರದ 17ನೇ ಹೆಚ್ಚುವರಿ ಮುಖ್ಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಸಲ್ಲಿಸಿದೆ.

ನಂತರ ಈ ದೋಷಾರೋಪ ಪಟ್ಟಿಯನ್ನು ಬೆಂಗಳೂರು ನಗರದಲ್ಲಿರುವ 50ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ, ಮಕ್ಕಳ ನ್ಯಾಯಾಲಯ (ವಿಶೇಷ) (ಸಿಸಿ ನಂ 203/2016) ವಿಚಾರಣೆ ಕೈಗೊಂಡು 2023ರ ಜೂನ್ 16ರಂದು ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

‘ಆದ್ದರಿಂದ ಈ ಪ್ರಕರಣದಲ್ಲಿ ಕೊನೆಯದಾಗಿ ತನಿಖೆಯನ್ನು ಸಿಬಿಐ ಸಂಸ್ಥೆ ಕೈಗೊಂಡಿದ್ದರಿಂದ ಮರು ತನಿಖೆಯ ಬಗ್ಗೆ ಅಭಿಪ್ರಾಯವನ್ನು ಸಿಬಿಐ ರವರಿಂದ ಪಡೆಯುವುದು ಸೂಕ್ತ,’ ಎಂದು ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಅಭಿಪ್ರಾಯದ ವರದಿಯಲ್ಲಿ ವಿವರಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವಿರುದ್ಧ ಕಠಿಣ ಶಿಕ್ಷೆ, ದಂಡ ವಿಧಿಸಬೇಕು ಎಂದು ಸಿಬಿಐ ಸಂಸ್ಥೆಯು 2017ರಲ್ಲೇ ಶಿಫಾರಸು ಮಾಡಿತ್ತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಸೇರಿದಂತೆ ಹಲವರು ರಾಜ್ಯ ಸರಕಾರವನ್ನು ಈ ಬಗ್ಗೆ ಒತ್ತಾಯಿಸಿದ್ದನ್ನು ಸ್ಮರಿಸಬಹುದು.

ಶಾಸಕರಿಬ್ಬರ ಕೋರಿಕೆ ಸಂಬಂಧ ಒಳಾಡಳಿತ ಇಲಾಖೆಯಲ್ಲಿ ತೆರೆದಿದ್ದ ಕಡತವು ಕಳೆದ 18 ತಿಂಗಳಿನಿಂದಲೂ ತೆವಳಿತ್ತು. 2023ರಲ್ಲಿ ತೆರೆದಿದ್ದ ಕಡತವನ್ನು 2025ರ ಜನವರಿಯಲ್ಲಿ ಮುಕ್ತಾಯಗೊಳಿಸಿತ್ತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಅವರು ಈ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮರು ತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್ ಕೂಡ ನಿರಾಕರಿಸಿತ್ತು.

ಹೀಗಾಗಿ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಸರಕಾರದ ಮೇಲೆ ಸಾರ್ವಜನಿಕ ಒತ್ತಡ ಹೆಚ್ಚಿದ್ದ ಸಂದರ್ಭದಲ್ಲೇ ಈ ಕುರಿತು ತೀರ್ಮಾನ ಕೈಗೊಳ್ಳಲು ಗೃಹ ಇಲಾಖೆಯು ಕಾನೂನು ಇಲಾಖೆಯ ಮೊರೆ ಹೋಗಿತ್ತು.

‘ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರಕಾರವು ಕು.ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸೌಜನ್ಯಾಳಿಗೆ ಮತ್ತು ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕೋರಿರುವುದರಿಂದ

ಆಡಳಿತ ಇಲಾಖೆಯವರು ಈ ಕುರಿತ ಸಿಬಿಐನಲ್ಲಿ ಮುಕ್ತಾಯಗೊಂಡಿರುವ ಸೌಜನ್ಯಾ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಅವಕಾಶವಿದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಕಡತವನ್ನು ಸಲ್ಲಿಸಲಾಗಿದೆ’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವ ಸಲುವಾಗಿ ಪ್ರಕರಣದಲ್ಲಿ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರತಿ ಮತ್ತು ಬೆಂಗಳೂರಿನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ (children's court (special bengaluru (cch-51)ದಲ್ಲಿ ದಾಖಲಾಗಿರುವ ಪ್ರಕರಣ (Spl. CC NO 203/2016)ದಲ್ಲಿ 2021ರ ಅಕ್ಟೊಬರ್ 4ರಂದು ನೀಡಿರುವ ಆದೇಶದ ಪ್ರತಿಗಳನ್ನು ಪರಿಶೀಲಿಸುವುದು ಅವಶ್ಯವಾಗಿದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.

ಈ ಪ್ರಕರಣದ ಕುರಿತು ಅಭಿಪ್ರಾಯ ನೀಡಲು ದಾಖಲೆಗಳನ್ನು ಒದಗಿಸಬೇಕು ಎಂದು ಗೃಹ ಇಲಾಖೆಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಪತ್ರ ಬರೆದಿದೆ. ಪ್ರಕರಣದಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಕೋರುವ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ್ ಚರ್ಚಿಸಿದ್ದರು.

ಮೃತ ವಿದ್ಯಾರ್ಥಿನಿ ತಂದೆ ಚಂದ್ರಪ್ಪಗೌಡ 2018ರಲ್ಲಿ ಪ್ರಕರಣದ ಮರು ತನಿಖೆಗೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಈಗಾಗಲೇ ವಜಾಗೊಳಿಸಿದೆ. ಪ್ರಕರಣವನ್ನು ಮೊದಲಿಗೆ ಸಿಐಡಿ, ಆನಂತರ ಸಿಬಿಐ ತನಿಖೆ ನಡೆಸಿತ್ತು.

ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಧೀರಜ್ ಜೈನ್, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ವಿರುದ್ಧ ಸಂಶಯ ವ್ಯಕ್ತಪಡಿಸಿ ಅರ್ಜಿದಾರರು ಮರು ತನಿಖೆಗೆ ಆದೇಶಿಸಲು ಕೋರಿದ್ದರು. ಆ ಶಂಕೆಯನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ. ಸಿಬಿಐ ಸರಿಯಾಗಿಯೇ ತನಿಖೆಗೆ ನಡೆಸಿದ್ದು, ಮತ್ತೆ ತನಿಖೆ ನಡೆಸುವ ಅಗತ್ಯವಿಲ್ಲವೆಂದು ನ್ಯಾಯಪೀಠ ಆದೇಶಿಸಿರುವುದನ್ನು ಸ್ಮರಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News