ಹೀಗಿದ್ದರೆ ಓಲೈಕೆ, ಹೇಗಿದ್ದೀತು ತುಳಿತ?

‘ಇಂಡಿಯಾ ಟುಡೇ’ ಸಮೀಕ್ಷೆಯ ಪ್ರಕಾರ, ರಾಜ್ಯದ ಲಿಂಗಾಯತ ಮತದಾರರ ಪೈಕಿ ಕೇವಲ ಶೇ. 20 ಮಂದಿ ಮತ್ತು ಒಕ್ಕಲಿಗರಲ್ಲಿ ಕೇವಲ ಶೇ. 24 ಮಂದಿ ಮಾತ್ರ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಇದಕ್ಕೆ ಹೋಲಿಸಿದರೆ ಶೇ. 88 ಮಂದಿ ಮುಸ್ಲಿಮ್ ಮತದಾರರು ಕಾಂಗ್ರೆಸ್‌ಗೆ ಮತ ನೀಡಿದ್ದರು. ಆದರೂ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಕಾಂಗ್ರೆಸ್ ಸರಕಾರದ ಪ್ರಾಶಸ್ತ್ಯಗಳ ಪಟ್ಟಿಯಲ್ಲಿ ಮುಸ್ಲಿಮರಿಗೆ ಕೊನೆಯ ಸಾಲಲ್ಲೂ ಸ್ಥಾನವಿಲ್ಲ.

Update: 2023-10-07 05:54 GMT
Editor : Thouheed | By : ಏಕಲವ್ಯ

ಶಾಮನೂರು ಶಿವಶಂಕರಪ್ಪ (SSS) ನವರಿಗೆ ಕರ್ನಾಟಕದ ಜನತೆ ಸದಾ ಋಣಿಯಾಗಿರಬೇಕು. ಅವರು ತನಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಹತಾಶೆಯಲ್ಲಿ ಏನೇನೋ ಮಾತನಾಡಿ ಬಿಟ್ಟಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದ ನೂತನ ಕರ್ನಾಟಕ ಸರಕಾರ ಲಿಂಗಾಯತರನ್ನು ಸಂಪೂರ್ಣ ಕಡೆಗಣಿಸಿದೆ, ಲಿಂಗಾಯತರಿಗೆ ಸಚಿವ ಸ್ಥಾನಗಳನ್ನು ಮಾತ್ರವಲ್ಲ ಪ್ರಮುಖ ಸರಕಾರಿ ಹುದ್ದೆಗಳನ್ನು ಕೂಡಾ ನಿರಾಕರಿಸಿದೆ ಎಂದು ಅವರು ಸಾರ್ವಜನಿಕವಾಗಿ ಎಗರಾಡಿದ್ದಾರೆ. ತಾನೊಬ್ಬ ಚುನಾಯಿತ ಶಾಸಕ, ಹಲವು ವಿಭಿನ್ನ ಜಾತಿಧರ್ಮಗಳಿಗೆ ಸೇರಿದ ಮತದಾರರ ಬಳಿ ವೋಟಿನ ಭಿಕ್ಷೆ ಬೇಡಿ ಆಯ್ಕೆಯಾದವರು ಎಂಬುದನ್ನೆಲ್ಲಾ ಮರೆತು ತನ್ನನ್ನು ಶಾಸಕನಾಗಿ ಮತ್ತು ರಾಜಕಾರಣಿಯಾಗಿ ಬೆಳೆಸಿದ್ದರ ಶ್ರೇಯವೆಲ್ಲಾ ಕೇವಲ ಲಿಂಗಾಯತ ಅಭಿವೃದ್ಧಿ ಸಂಘದವರಿಗೆ ಮಾತ್ರ ಸೇರಿದೆ, ಬೇರಾರಿಗೂ ಅದರಲ್ಲಿ ಯಾವ ಪಾಲೂ ಇಲ್ಲ ಎಂಬಂತೆ ಅವರು ಮಾತನಾಡಿದ್ದಾರೆ. ಅವರು ಮೇಲಿಂದ ಮೇಲೆ ‘ನಾವು’, ‘ನಮ್ಮವರು’ ಎಂಬ ಪದಗಳನ್ನು ಕೇವಲ ತನ್ನ ಲಿಂಗಾಯತ ಜಾತಿಯವರಿಗೆ ಮಾತ್ರ ಮೀಸಲಾಗಿ ಬಳಸುವ ಮೂಲಕ, ತಾನು ಒಂದು ನಿರ್ದಿಷ್ಟ ಪಕ್ಷದ ನಾಯಕ ಮತ್ತು ಆ ಪಕ್ಪದ ಟಿಕೆಟಿನಿಂದ ಶಾಸಕನಾಗಿ ಗೆದ್ದು ಬಂದವನು ಎಂಬುದನ್ನು ಕೂಡಾ ಪರೋಕ್ಷವಾಗಿ ಅಲ್ಲಗಳೆದಿದ್ದಾರೆ. ಬೇರೆಲ್ಲವನ್ನೂ ಮರೆತು ಕೇವಲ ಜಾತಿಯನ್ನಾಧರಿಸಿ ‘‘ನಾವು 74 ಜನ ಶಾಸಕರಿದ್ದೀವಿ’’ ಎನ್ನುವ ಮೂಲಕ ಅವರು ತನ್ನ ಪಕ್ಷ, ಮತದಾರರು ಮಾತ್ರವಲ್ಲ, ಎಲ್ಲ ತತ್ವಾದರ್ಶಗಳನ್ನು ಕೂಡಾ ದೂರಕ್ಕೆ ಒದ್ದು, ತನ್ನ ಪರಮ ಸಂಕುಚಿತ ಜಾತಿಸ್ವಾರ್ಥವನ್ನು ಮೆರೆದಿದ್ದಾರೆ.

ಇದರಲ್ಲಿ ಕನ್ನಡ ಜನತೆ SSSನವರಿಗೆ ಧನ್ಯವಾದ ಹೇಳಬೇಕಾದ ವಿಷಯ ಏನಿದೆ ಎಂದು ಹುಬ್ಬೇರಿಸುತ್ತಿದ್ದೀರಾ? ನಿಜವಾಗಿ, SSSನವರು ಈರೀತಿ ನಡುಬೀದಿಯಲ್ಲಿ ಮೈ ಪರಚಿಕೊಂಡದ್ದರಿಂದಾಗಿ ಹಲವಾರು ಪ್ರಯೋಜನಗಳಾಗಿವೆ. ಸಿದ್ದರಾಮಯ್ಯನವರ ಸರಕಾರ ಲಿಂಗಾಯತರನ್ನು ಕಡೆಗಣಿಸಿದೆ ಎಂಬ ಹೇಳಿಕೆ ಬಂದ ಬೆನ್ನಿಗೇ, ಸಿದ್ದರಾಮಯ್ಯನವರು, ಅವರ ಸರಕಾರ, ಸರಕಾರದ ಸಚಿವರು, ಅಧಿಕಾರಿಗಳು ಮತ್ತು ಸಿದ್ದಣ್ಣನವರನ್ನು ಸುತ್ತುವರಿದುಕೊಂಡಿರುವ ಅವರ ಭಟ್ಟಂಗಿಗಳ ವಲಯವೆಲ್ಲಾ ಎಚ್ಚೆತ್ತುಕೊಂಡಿದೆ. ಹಾಗಾಗಿ SSSನವರ ಹೇಳಿಕೆ ತಪ್ಪು ಎಂದು ಸಾಬೀತು ಪಡಿಸಲಿಕ್ಕಾಗಿ ಅಧಿಕೃತ ಹಾಗೂ ಅನಧಿಕೃತ ಮಾಹಿತಿಗಳ ಸರಣಿಯೇ ಜನತೆಯ ಮುಂದೆ ಬರುತ್ತಿದೆ. ಹಾಗೆ ಹೊರಗೆ ಬಂದಿರುವ ಕೆಲವು ಮಾಹಿತಿಗಳಂತೂ SSSನವರ ಬಾಯಿ ಮುಚ್ಚಿಸುವಂತಿರುವುದು ಮಾತ್ರವಲ್ಲ, ಹಲವು ವಂಚಿತ ವರ್ಗಗಳ ಕಣ್ಣುಗಳನ್ನೂ ತೆರೆಸುವಂತಿವೆ.

ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 13ರಷ್ಟಿದೆ.

ಈ ಸಮುದಾಯದ ಸದಸ್ಯರಿಗೆ ಸರಕಾರ ಮತ್ತು ಆಡಳಿತದಲ್ಲಿ ಸಿಕ್ಕಿರುವ ಪ್ರಾತಿನಿಧ್ಯದ ಪ್ರಮಾಣ ಎಷ್ಟಿದೆ ಎಂಬುದನ್ನು ಅಳೆಯುವುದಕ್ಕೆ ಕೆಲವು ಮಾಹಿತಿಗಳು ಇಲ್ಲಿವೆ:

►ಈ ರಾಜ್ಯದ ಸಚಿವ ಸಂಪುಟದ 34 ಸಚಿವ ಸ್ಥಾನಗಳ ಪೈಕಿ 7 ಲಿಂಗಾಯತರಿಗೆ ದಕ್ಕಿದೆ =ಶೇ. 20.58

►ರಾಜ್ಯದಲ್ಲಿನ ಒಟ್ಟು 87 ಪ್ರಮುಖ ಹುದ್ದೆಗಳಲ್ಲಿರುವ ಐಎಎಸ್ ಅಧಿಕಾರಿಗಳ ಪೈಕಿ 22 ಮಂದಿ ಲಿಂಗಾಯತರು= ಶೇ. 25.2

► ರಾಜ್ಯದಲ್ಲಿರುವ 41 ವಿಶ್ವ ವಿದ್ಯಾನಿಲಯಗಳ ಉಪಕುಲಪತಿಗಳ ಪೈಕಿ 13 ಮಂದಿ ಲಿಂಗಾಯತರು =ಶೇ. 31.7

► ರಾಜ್ಯದಲ್ಲಿರುವ 45 ಚೀಫ್ ಇಂಜಿನಿಯರ್‌ಗಳ ಪೈಕಿ 12 ಮಂದಿ ಲಿಂಗಾಯತರು =ಶೇ.26.6

► ರಾಜ್ಯದಲ್ಲಿರುವ 31 ಜಿಲ್ಲಾಧಿಕಾರಿಗಳ ಪೈಕಿ 3 ಮಂದಿ ಲಿಂಗಾಯತರು = ಶೇ.9.67

► ರಾಜ್ಯದಲ್ಲಿರುವ 31 ಸಿ.ಈ.ಒ.ಗಳ ಪೈಕಿ 4 ಮಂದಿ ಲಿಂಗಾಯತರು = ಶೇ. 12.9

► ರಾಜ್ಯದಲ್ಲಿರುವ 409 ಪ್ರಮುಖ ಹುದ್ದೆಗಳಲ್ಲಿರುವ ಕೆಎಎಸ್ ಅಧಿಕಾರಿಗಳ ಪೈಕಿ 102 ಮಂದಿ ಲಿಂಗಾಯತರು = ಶೇ. 24.94

► ರಾಜ್ಯದಲ್ಲಿರುವ 29 ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಗಳ ಪೈಕಿ 4 ಮಂದಿ ಲಿಂಗಾಯತರು =ಶೇ. 13.8

► ರಾಜ್ಯದಲ್ಲಿರುವ 5 ಪೊಲೀಸ್ ಕಮಿಷನರ್‌ಗಳಲ್ಲಿ ಒಬ್ಬರು ಲಿಂಗಾಯತರು= ಶೇ.20

► ರಾಜ್ಯದ ರಾಜಧಾನಿಯಲ್ಲಿರುವ 14 ಡಿಸಿಪಿಗಳಲ್ಲಿ ಒಬ್ಬರು ಲಿಂಗಾಯತರು= ಶೇ. 7.14

ಹೀಗೆ ಒಬ್ಬ SSS ಮಹಾಶಯರ ಒಂದು ಒದರಾಟಕ್ಕೆ ಉತ್ತರವಾಗಿ ಇಲ್ಲಪ್ಪಾ, ಇಲ್ಲಾ, ಇಲ್ಲಾ, ಖಂಡಿತ ಇಲ್ಲಾ, ಲಿಂಗಾಯತರಿಗೆ ಕಿಂಚಿತ್ತೂ ಅನ್ಯಾಯ ಆಗಿಲ್ಲ, ಹೆಚ್ಚಿನೆಲ್ಲಾ ಕ್ಷೇತ್ರಗಳಲ್ಲಿ ಅವರಿಗೆ ಅವರ ಜನಸಂಖ್ಯಾ ಅನುಪಾತಕ್ಕಿಂತ ಬಹಳ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ, ಕೆಲವೆಡೆ ಅವರ ಸಂಖ್ಯಾನುಪಾತಕ್ಕೆ ಹೋಲಿಸಿದರೆ ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚು ಪ್ರಾತಿನಿಧ್ಯ ಸಿಕ್ಕಿದ್ದೂ ಇದೆ ಎಂಬ ಸ್ಪಷ್ಟೀಕರಣ ಬಂದಿದೆ. ಒಬ್ಬ ಹತಾಶ ನಾಯಕನ ಮಾತಿಗೆ ಇಷ್ಟು ದೊಡ್ಡ ಮಟ್ಟದ ಪ್ರತಿಕ್ರಿಯೆ ಬಂದಿರುವುದು ನಿಜಕ್ಕೂ ಸ್ವಾಗತಾರ್ಹ. ದಲಿತರನ್ನು, ಹಿಂದುಳಿದ ವರ್ಗಗಳನ್ನು ಮತ್ತು ಅಲ್ಪಸಂಖ್ಯಾತರನ್ನು ಸರಕಾರವು ಕಡೆಗಣಿಸುತ್ತಿದೆ ಮತ್ತು ಅವರಿಗೆ ನ್ಯಾಯೋಚಿತ ಪ್ರಾತಿನಿಧ್ಯವನ್ನು ನಿರಾಕರಿಸುತ್ತಿದೆ ಎಂದು ಈ ಹಿಂದೆ ಆ ಸಮುದಾಯಗಳ ಅನೇಕ ನಾಯಕರು ಸಾರ್ವಜನಿಕವಾಗಿಯೇ ದೂರಿದ್ದುಂಟು. ಆದರೆ ಅಂತಹ ಯಾವುದೇ ಸಂದರ್ಭದಲ್ಲಿ ಸರಕಾರ ಇಂತಹ ಉತ್ಸಾಹ ಮತ್ತು ಆತುರ ತೋರಿದ್ದಿಲ್ಲ. ಆ ದೂರುಗಳ ಕುರಿತು ಅದು ಯಾವುದೇ ಸ್ಪಷ್ಟೀಕರಣ ನೀಡಿಲ್ಲ, ಮಾತ್ರವಲ್ಲ, ಆ ದೂರುಗಳನ್ನು ಅದು ಲೆಕ್ಕಕ್ಕೇ ತೆಗೆದುಕೊಂಡದ್ದಿಲ್ಲ. ಸರಕಾರ ಯಾರಿಗೆ ಎಷ್ಟು ಮಹತ್ವ ನೀಡುತ್ತದೆ ಮತ್ತು ಯಾರನ್ನು ಕಾಲಕಸವಾಗಿ ಕಾಣುತ್ತದೆ ಎಂಬುದಕ್ಕೆ ಬೇರೆ ಪುರಾವೆಯೇನೋ ಬೇಕಿಲ್ಲ. ಏನಿದ್ದರೂ SSS ದೂರಿಗೆ ಉತ್ತರವಾಗಿ ಸರಕಾರ ಒದಗಿಸಿದ ಮಾಹಿತಿಗಳು, ರಾಜ್ಯದ ಲಿಂಗಾಯತರು ಎಲ್ಲ ಬಗೆಯ ಓಲೈಕೆಯ ಫಲಾನುಭವಿಗಳೇ ಹೊರತು ಯಾವುದೇ ದಮನದ ಬಲಿಪಶುಗಳಲ್ಲ ಎಂಬುದಂತೂ ಸಂದೇಹಾತೀತವಾಗಿ ಸಾಬೀತಾಗಿ ಬಿಟ್ಟಿದೆ. ಅವರಿಗೆ ಇನ್ನಷ್ಟು ಪ್ರಾತಿನಿಧ್ಯ ದೊರೆಯಲೆಂದು ನಾವೆಲ್ಲಾ ಹಾರೈಸೋಣ.

ಗಮ್ಮತ್ತೇನೆಂದರೆ, ನಮ್ಮ ಇದೇ ರಾಜ್ಯದಲ್ಲಿ, ಸದಾ ಓಲೈಕೆಗೆ ಪಾತ್ರರಾದವರು, ಎಲ್ಲ ಸೆಕ್ಯುಲರ್ ಪಕ್ಷ ಮತ್ತು ಸರಕಾರಗಳ ಪರಮಾಪ್ತರು, ಕಣ್ಮಣಿಗಳು, ಎಲ್ಲ ಸರಕಾರಿ ಸವಲತ್ತುಗಳನ್ನು ಕಬಳಿಸಿಕೊಳ್ಳುವವರು ಎಂದಿತ್ಯಾದಿಯಾಗಿ ಗುರುತಿಸಲಾಗುವ ಒಂದು ಸಮುದಾಯವಿದೆ. SSS ಮತ್ತವರ ಸಮುದಾಯವನ್ನು ಸಾಂತ್ವನಗೊಳಿಸುವ ಪ್ರಕ್ರಿಯೆಯಲ್ಲಿ ಆ ಸಮುದಾಯ ಎಂತಹ ಪರಮ ವೈಭವದ ಸ್ಥಿತಿಯಲ್ಲಿದೆ ಮತ್ತು ಸರಕಾರ, ಆಡಳಿತ ಮತ್ತಿತರ ರಂಗಗಳಲ್ಲಿ ಯಾವ ಮಟ್ಟಿಗೆ ಅವರ ಏಕಸ್ವಾಮ್ಯ ಮೆರೆದಿದೆ ಎಂಬುದು ಬಹಿರಂಗವಾಗಿ ಬಿಟ್ಟಿದೆ.

‘ಇಂಡಿಯಾ ಸೆನ್ಸಸ್.ನೆಟ್’ ಪ್ರಕಾರ ರಾಜ್ಯದಲ್ಲಿ ಈ ವರ್ಷ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಸುಮಾರು 90 ಲಕ್ಷ ಅಂದರೆ ಒಟ್ಟು ಜನ ಸಂಖ್ಯೆಯ ಶೇ. 13ರಷ್ಟಿದೆ.

ಈ ಸಮುದಾಯದ ಸದಸ್ಯರಿಗೆ ಸರಕಾರ ಮತ್ತು ಆಡಳಿತದಲ್ಲಿ ಸಿಕ್ಕಿರುವ ಪ್ರಾತಿನಿಧ್ಯದ ಪ್ರಮಾಣ ಎಷ್ಟಿದೆ ಎಂಬುದನ್ನು ಅಳೆಯುವುದಕ್ಕೆ ಕೆಲವು ಮಾಹಿತಿಗಳು ಇಲ್ಲಿವೆ:

► ರಾಜ್ಯದ ಸಚಿವ ಸಂಪುಟದ 34 ಸಚಿವ ಸ್ಥಾನಗಳ ಪೈಕಿ 2 ಮುಸ್ಲಿಮರಿಗೆ ದಕ್ಕಿದೆ =ಶೇ. 5.88

► ರಾಜ್ಯದಲ್ಲಿರುವ 41 ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಪೈಕಿ ಮುಸ್ಲಿಮರು ಒಬ್ಬರೂ ಇಲ್ಲ = ಶೇ. 0

► ರಾಜ್ಯದಲ್ಲಿರುವ 5 ಪೊಲೀಸ್ ಕಮಿಷನರ್ ಹುದ್ದೆಗಳನ್ನು ಅಲಂಕರಿಸಿರುವವರಲ್ಲಿ ಮುಸ್ಲಿಮರು ಒಬ್ಬರೂ ಇಲ್ಲ =ಶೇ. 0

► ರಾಜ್ಯದ ರಾಜಧಾನಿಯ ಹೊರಗೆ ಇರುವ 7 ಡಿಸಿಪಿ ಗಳ ಪೈಕಿ ಮುಸ್ಲಿಮರು ಒಬ್ಬರೂ ಇಲ್ಲ =ಶೇ. 0

► ರಾಜ್ಯದ ರಾಜಧಾನಿಯಲ್ಲಿರುವ 14 ಡಿಸಿಪಿಗಳ ಪೈಕಿ ಮುಸ್ಲಿಮ್ ಅಧಿಕಾರಿ ಒಬ್ಬರು ಮಾತ್ರ =ಶೇ. 7.14

► ರಾಜ್ಯದಲ್ಲಿರುವ 29 ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.)ಗಳ ಪೈಕಿ ಮುಸ್ಲಿಮ್ ಅಧಿಕಾರಿ ಒಬ್ಬರು ಮಾತ್ರ =ಶೇ. 3.44

► ರಾಜ್ಯದಲ್ಲಿರುವ 45 ಚೀಫ್ ಇಂಜಿನಿಯರ್ ಗಳ ಪೈಕಿ ಮುಸ್ಲಿಮರು ಇಬ್ಬರು ಮಾತ್ರ =ಶೇ. 4.44 %

► ರಾಜ್ಯದಲ್ಲಿರುವ 31 ಸಿ.ಈ.ಒ.ಗಳ ಪೈಕಿ ಮುಸ್ಲಿಮರು ಒಬ್ಬರು ಮಾತ್ರ =ಶೇ. 3.22

► ರಾಜ್ಯದಲ್ಲಿರುವ 53 ಅಸಿಸ್ಟೆಂಟ್ ಕಮಿಷನರ್‌ಗಳ ಪೈಕಿ 5 ಮಂದಿ ಮುಸ್ಲಿಮರು =ಶೇ. 9.43

► ರಾಜ್ಯದಲ್ಲಿರುವ 31 ಜಿಲ್ಲಾಧಿಕಾರಿಗಳ ಪೈಕಿ 2 ಮಂದಿ ಮಾತ್ರ ಮುಸ್ಲಿಮರು =ಶೇ. 6.45

ಅಂದರೆ ಜನಸಂಖ್ಯೆಯಲ್ಲಿ ಶೇ. 13 ಇರುವವರಿಗೆ ಹಲವು ಕ್ಷೇತ್ರಗಳಲ್ಲಿ ಶೂನ್ಯ ಪ್ರಾತಿನಿಧ್ಯ. ಪ್ರಾತಿನಿಧ್ಯ ಇರುವ ಕ್ಷೇತ್ರಗಳಲ್ಲೇ ನೋಡಿದರೆ ಅಲ್ಲಿ ಕೂಡಾ ಎಲ್ಲೂ ಅದರ ಪ್ರಮಾಣ ಶೇ. 10 ಮೀರದಂತೆ ಕಟ್ಟು ನಿಟ್ಟಾಗಿ ನೋಡಿಕೊಳ್ಳಲಾಗಿದೆ.

ಸಿದ್ದರಾಮಯ್ಯನವರ ಸರಕಾರದ ಜೊತೆ ಮುಸ್ಲಿಮರಿಗೆ ಒಂದು ವಿಶೇಷ ಸಂಬಂಧವಿದೆ. ಸ್ವತಃ ಸಿದ್ದರಾಮಯ್ಯನವರ ಸರಕಾರವು ಈ ಸಂಬಂಧವನ್ನು ಗುರುತಿಸದಿದ್ದರೂ ಕಳೆದ ವಿಧಾನ ಸಭಾ ಚುನಾವಣೆಯ ಬೆನ್ನಿಗೇ ಪ್ರಕಟವಾದ ಸಮೀಕ್ಷೆ ನೋಡಿದವರು ಇದನ್ನು ಖಂಡಿತ ಗುರುತಿಸಿದ್ದಾರೆ. ಕುಮಾರ ಸ್ವಾಮಿಯವರಂತೂ ಪ್ರತಿದಿನ ಅಷ್ಟೊಂದು ಆಕ್ರೋಶಭರಿತರಾಗಿ ರಾಜ್ಯದ ಮುಸ್ಲಿಮ್ ಸಮಾಜದ ವಿರುದ್ಧ ಬುಸುಗುಡುತ್ತಿರುವುದಕ್ಕೆ ಅವರ ತೀರಾ ಅಗ್ಗದ ಮಾನಸಿಕತೆಯ ಜೊತೆಗೆ ‘ಇಂಡಿಯಾ ಟುಡೇ’ ಸಮೀಕ್ಷೆಯಲ್ಲಿ ಪ್ರಕಟವಾದ ಮಾಹಿತಿಯೂ ಕಾರಣವಾಗಿರುವ ಸಾಧ್ಯತೆ ಇದೆ.

‘ಇಂಡಿಯಾ ಟುಡೇ’ ಸಮೀಕ್ಷೆಯ ಪ್ರಕಾರ, ರಾಜ್ಯದ ಲಿಂಗಾಯತ ಮತದಾರರ ಪೈಕಿ ಕೇವಲ ಶೇ. 20 ಮಂದಿ ಮತ್ತು ಒಕ್ಕಲಿಗರಲ್ಲಿ ಕೇವಲ ಶೇ. 24 ಮಂದಿ ಮಾತ್ರ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಇದಕ್ಕೆ ಹೋಲಿಸಿದರೆ ಶೇ. 88 ಮಂದಿ ಮುಸ್ಲಿಮ್ ಮತದಾರರು ಕಾಂಗ್ರೆಸ್‌ಗೆ ಮತ ನೀಡಿದ್ದರು. ಆದರೂ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಕಾಂಗ್ರೆಸ್ ಸರಕಾರದ ಪ್ರಾಶಸ್ತ್ಯಗಳ ಪಟ್ಟಿಯಲ್ಲಿ ಮುಸ್ಲಿಮರಿಗೆ ಕೊನೆಯ ಸಾಲಲ್ಲೂ ಸ್ಥಾನವಿಲ್ಲ. ತಾವೆಲ್ಲಾ ಸಂಘಟಿತವಾಗಿ ವೋಟುಹಾಕಿದರೆ ಸ್ವರ್ಗ ಸಿಗುತ್ತದೆ ಎಂದು ನಂಬಿ, ಯಾವುದೇ ಲಿಖಿತ ಒಪ್ಪಂದ ಮಾಡಿಕೊಳ್ಳದೆ, ಅಷ್ಟೊಂದು ಉತ್ಸಾಹದಿಂದ, ಮುಗ್ಧವಾಗಿ ಹಾಗೂ ಉಚಿತವಾಗಿ ಕಾಂಗ್ರೆಸ್‌ಗೆ ವೋಟು ಹಾಕಿದ ಮುಸ್ಲಿಮರು ತೀವ್ರ ನಿರಾಶೆಯಲ್ಲಿದ್ದಾರೆ. ದಲಿತರು ಮತ್ತು ಹಿಂದುಳಿದ ವರ್ಗಗಳ ಸ್ಥಿತಿ ಕೂಡಾ ಇದಕ್ಕಿಂತ ತುಂಬಾ ಭಿನ್ನವೇನಲ್ಲ.

ಮೇಲೆ ಉಲ್ಲೇಖಿಸಿದ ಬಹುತೇಕ ನೇಮಕಾತಿಗಳು ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿರುವವುಗಳು. ಆದರೆ ಈ ಸರಕಾರ ಬಂದ ಮೇಲೆ ಈವರೆಗೆ ಮಾಡಿರುವ ನೇಮಕಾತಿಗಳಲ್ಲಿ, ವರ್ಗಾವಣೆಗಳಲ್ಲೂ ಅಲ್ಪಸಂಖ್ಯಾತರಿಗೆ ಸಿಕ್ಕಿರುವ ಪ್ರಾತಿನಿಧ್ಯ ಗಮನಿಸಿದರೆ ಈ ಹಿಂದಿನ ಸರಕಾರ ಹಾಗೂ ಈ ಸರಕಾರದ ನೇಮಕಾತಿ ನೀತಿಯಲ್ಲಿ ದೊಡ್ಡ ವ್ಯತ್ಯಾಸವಿದ್ದಂತೆ ಕಾಣುತ್ತಿಲ್ಲ. ಇನ್ನು ಮುಂದಿನ ನೇಮಕಾತಿಗಳಲ್ಲಾದರೂ ಈ ಸರಕಾರ ಸಾಮಾಜಿಕ ನ್ಯಾಯವನ್ನು ಪಾಲಿಸಲಿದೆಯೇ ಎಂದು ಕಾದು ನೋಡಬೇಕು.

ಕೆಲವೇ ತಿಂಗಳ ಬಳಿಕ ಮತ್ತೆ ಮತದಾರರ ಬಳಿಗೆ ಹೋಗ ಬೇಕಾಗಿರುವ ಕಾಂಗ್ರೆಸ್ ಪಕ್ಷ ತನ್ನ ಈ ವಿಶ್ವಾಸದ್ರೋಹದ ನೀತಿಗೆ ತಾನು ತೆರಬೇಕಾಗಿ ಬರಬಹುದಾದ ಬೆಲೆಯ ಬಗ್ಗೆ ಈಗಲೇ ಒಂದಿಷ್ಟು ಚಿಂತಿಸುವುದು, ಸ್ವತಃ ಆ ಪಕ್ಷದ ಆರೋಗ್ಯಕ್ಕೆ ಒಳ್ಳೆಯದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಏಕಲವ್ಯ

contributor

Similar News