ಯಾದಗಿರಿ | ಸರ್ಕಾರಿ ನೌಕರರು ಜನಸ್ನೇಹಿ ಆಡಳಿತ ನೀಡಿದಾಗ ಮಾತ್ರ ತಮ್ಮ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ : ಡಿ.ಸಿ. ಡಾ.ಸುಶೀಲಾ ಬಿ.

ಯಾದಗಿರಿ : ಸರ್ಕಾರಿ ನೌಕರರು ಜನಸ್ನೇಹಿ ಆಡಳಿತ ನೀಡಿದಾಗ ಮಾತ್ರ ತಮ್ಮ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಹೇಳಿದರು.
ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಇಂದು ಸರ್ಕಾರಿ ನೌಕರರ ದಿನಾಚರಣೆ ಅಂಗವಾಗಿ ʼಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭʼ ಉದ್ಘಾಟಿಸಿ, ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ,ಅವರು ಮಾತನಾಡಿದರು.
ಸರ್ಕಾರಿ ನೌಕರರು ಸಾರ್ವಜನಿಕರ ಕುಂದುಕೊರತೆಗಳಿಗೆ ಸಕಾಲಕ್ಕೆ ಸ್ಪಂದಿಸಿ, ಇತ್ಯರ್ಥಪಡಿಸಿದಲ್ಲಿ ಮಾತ್ರ ತಮ್ಮ ಕರ್ತವ್ಯದಲ್ಲಿ ಸಾರ್ಥಕತೆ ಪಡೆಯಬಹುದಾಗಿದೆ. ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವ ಕ್ರಮ ಸರಿಯಲ್ಲ. ಜನಸ್ನೇಹಿ ಆಡಳಿತ ಒದಗಿಸಬೇಕೆಂದು ಅವರು ಹೇಳಿದರು.
ಸರಕಾರಿ ಅಧಿಕಾರಿ, ಸಿಬ್ಬಂದಿಗಳು ಕಚೇರಿಗಳಲ್ಲಿನ ತಮ್ಮ ಕರ್ತವ್ಯದಲ್ಲಿ ಬದಲಾವಣೆ ತಂದುಕೊಳ್ಳಬೇಕು. ಪಾರದರ್ಶಕ ಆಡಳಿತ, ಸರಳ ಹಾಗೂ ಸುಗಮವಾಗಿರಬೇಕು. ಜನರಿಗೆ ಸಕಾಲಕ್ಕೆ ಸ್ಪಂದಿಸುವಂತಿರಬೇಕು. ನಾವು ಮಾಡುವ ಕೆಲಸ ಬೇರೆಯವರಿಗೆ ಮಾದರಿಯಾಗಿರಬೇಕು ಎಂದು ಹೇಳಿದರು.
ಇಂದು ಪ್ರಶಸ್ತಿ ಪಡೆದವರ ಮೇಲೆ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಇನ್ನೂ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿಯೂ ಅತ್ಯುತ್ತಮ ಸೇವೆ ಕಲ್ಪಿಸುವಂತೆ ಅವರು ಸಲಹೆ ನೀಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್ ಅವರು ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಕರ್ತವ್ಯ ನಿಭಾಯಿಸಬೇಕು. ನಾಗರಿಕರಿಗೆ ನಿಮ್ಮ ಸ್ಪಂದನೆ ಮೇಲೆ ಸರ್ಕಾರದ ಗೌರವ ಅಡಗಿರುತ್ತದೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಸರ್ಕಾರದ ಗೌರವ ಹೆಚ್ಚಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪ ಗೌಡ ಹುಡೆದ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಯುನಿಯನ್ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ದರ್ಶನಾಪುರ, ನೌಕರರ ಸಂಘದ ಪದಾಧಿಕಾರಿಗಳಾದ ರಂಗನಾಥ, ಬಸವರಾಜ, ಪ್ರಕಾಶ್ ರಾಜಾಪುರ, ಮಲ್ಲೇಶಪ್ಪ ಹೊಸಮನಿ, ಅಶೋಕ್ ಕಲಾಲ್, ರಾಮಕೃಷ್ಣ, ಮಲ್ಲಿಕಾರ್ಜುನ, ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 2023, 24 ಹಾಗೂ 25ನೇ ಸಾಲಿಗೆ ಒಟ್ಟು 33 ಜನ ಅಧಿಕಾರಿ, ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾರಂಭದಲ್ಲಿ ಚಂದ್ರಶೇಖರ ಗೋಗಿ ಪ್ರಾರ್ಥಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.