ಯಾದಗಿರಿ | ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿಸಿ : ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ

Update: 2024-11-19 14:13 GMT

ಯಾದಗಿರಿ : ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಅರಿವು ಮೂಡಿಸುವ ಜೊತೆಗೆ ನಮ್ಮ ಶೌಚಾಲಯ-ನಮ್ಮ ಗೌರವ ಘೋಷ ವಾಕ್ಯದೊಂದಿಗೆ ಜಿಲ್ಲೆಯಾದ್ಯಂತ ಡಿ.10 ರವರೆಗೆ ಜಾಗೃತಿ ಆಂದೋಲನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಿಇಓ ಕಾರ್ಯಾಲಯದಲ್ಲಿ ಮಂಗಳವಾರ "ವಿಶ್ವ ಶೌಚಾಲಯ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ" ಅಂಗವಾಗಿ ಇಂದಿನಿಂದ ಡಿ.10ರ ವರೆಗೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ʼಅಂದದ ಶೌಚಾಲಯ- ಆನಂದದ ಜೀವನʼ ಎಂಬ ಉದ್ದೇಶದೊಂದಿಗೆ ಶೌಚಾಲಯ ಬಳಸಲು ಪ್ರೇರೇಪಿಸುವ ಈ ವಿಶೇಷ ಆಂದೋಲನ ಯಶಸ್ವಿಯಾಗಿ ಹಮ್ಮಿಕೊಳ್ಳುವ ಕುರಿತು ಚರ್ಚಿಸಲು ನಡೆದ ಜಿಲ್ಲಾ ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಆಂದೋಲನ ಅಂಗವಾಗಿ ವೈಯಕ್ತಿಕ ಗೃಹ ಶೌಚಾಲಯ ಪರಿಶೀಲನೆ, ಸಮುದಾಯ ಶೌಚಾಲಯಗಳ ಪರಿವೀಕ್ಷಣೆ ನಡೆಸಬೇಕು. ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಿ ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿಸುವಂತೆ ಅವರು ಸೂಚಿಸಿದರು.

ಅದರಂತೆ ಈ ಆಂದೋಲನ ಅಂಗವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವಚ್ಛ, ಸುಂದರ ವೈಯಕ್ತಿಕ ಗೃಹ ಉತ್ತಮ ಶೌಚಾಲಯ ಸ್ಪರ್ಧೆ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಉತ್ತಮ ಸಮುದಾಯ ಶೌಚಾಲಯ ಸ್ಪರ್ಧೆ ಆಯೋಜಿಸಬೇಕು. ಅದರಂತೆ ವಿವಿಧ ಗ್ರಾಮ, ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರಗಳಲ್ಲಿ ಸ್ಚಚ್ಛವಾದ ಶೌಚಾಲಯಗಳು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸಮುದಾಯ ಶೌಚಾಲಯಗಳ ನಿರ್ವಹಣೆ ಹಾಗೂ ನೀರಿನ ವ್ಯವಸ್ಥೆ, ಸುತ್ತಲೂ ಸ್ವಚ್ಛತೆ, ಇದಕ್ಕೆ ಸೂಕ್ತ ರಸ್ತೆಗಳು ಇರುವ ಬಗ್ಗೆ ಆಯಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಓಗಳಿಂದ ಭೇಟಿ ಮಾಡಿಸಿ ಪರಿಶೀಲಿಸಬೇಕು. ನೀರು ಕಡ್ಡಾಯವಾಗಿ ಇರುವ ಬಗ್ಗೆ ಹಾಗೂ ನಿರ್ವಹಣಾ ಸಿಬ್ಬಂದಿ ಇರುವಂತೆ ನೋಡಿಕೊಳ್ಳಲು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಶೌಚಾಲಯ ಬಳಕೆ, ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಿ, ಸೂಕ್ತ ಜಾಗೃತಿ ಮೂಡಿಸಬೇಕು. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಕುಟುಂಬಗಳಿಗೆ ಪ್ರೋತ್ಸಾಹಿಸುವಂತೆ ಅವರು ಸೂಚಿಸಿದರು.

ತಡಿಬಿಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಮಾರೆಡ್ಡಿ ಹಾಗೂ ದೋರಣಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಲಾ ಅವರಿಗೆ ಶೌಚಾಲಯ ನಿರ್ಮಾಣದ ಕಾರ್ಯಾದೇಶ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಸಿ.ಬಿ.ದೇವರಮನಿ, ಸಹಾಯಕ ಕಾರ್ಯಕ್ರಮ ಅಧಿಕಾರಿ ಸಂತೋಷಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಮ್.ಎಸ್ ಪಾಟೀಲ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದ ಸೇರಿದಂತೆ ಜಿಲ್ಲಾ ಪಂಚಾಯತ್ , ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News