ವಕ್ಫ್‌ ತಿದ್ದುಪಡಿ ಮಸೂದೆ ವಿರೋಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಯಾದಗಿರಿಯಲ್ಲಿ ಬೃಹತ್ ಪ್ರತಿಭಟನೆ

Update: 2025-04-21 15:17 IST
Photo of Protest
  • whatsapp icon

ಯಾದಗಿರಿ : ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸದಾಯೆ ಮಿಲ್ಲತ್ ಕಮಿಟಿ ಹಾಗೂ ಯುವಕ ಸಂಘ ನೇತೃತ್ವದಲ್ಲಿ ಸೋಮವಾರ ಯಾದಗಿರಿಯಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.

ನಗರದ ಡಿಗ್ರಿ ಕಾಲೇಜುನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಕಾಲ್ನಡಿಗೆಯಲ್ಲಿ ನಡೆದುಕೊಂಡು ಬಂದು ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸದಾಯೆ ಮಿಲ್ಲತ್ ಕಮಿಟಿ ಅಧ್ಯಕ್ಷ ಅಬ್ದುಲ್ ಗಫ್ಫಾರ್ ವರ್ಚಸ್ ಅವರು, ಕೇಂದ್ರ ಸರಕಾರವು ವಕ್ಫ್‌ ಕಾಯ್ದೆ ತಿದ್ದುಪಡಿ ಮಾಡಿ ಹೊಸ ತಿದ್ದುಪಡಿ ಮಸೂದೆ-2025 ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬಹುಮತ ಇರುವುದರಿಂದ ಕಾಯ್ದೆಯನ್ನು ಪಾಸ್ ಮಾಡಿದೆ. ಮುಂದುವರೆದು ರಾಷ್ಟ್ರಪತಿಗಳು ಈ ಬಿಲ್ಲನ್ನು ಅಂಗೀಕರಿಸಿರುತ್ತಾರೆ. ಈ ಶಾಸನವು ಮುಸ್ಲಿಂ ಸಮುದಾಯದ ವಕ್ಫ್‌ ಆಸ್ತಿಗಳನ್ನು ಕಬಳಿಸಲು ಮಾಡಿರುವ ಕುತಂತ್ರದ ಕಾಯಿದೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾಯ್ದೆಯಲ್ಲಿ 1955 ರ ಕಾಯ್ದೆಯ ಅನೇಕ ಅಂಶಗಳು ಕೈಬಿಡಲಾಗಿದೆ. ಈ ತಿದ್ದುಪಡೆ ಕಾಯ್ದೆಯು ಮುಸ್ಲಿಂ ಸಮುದಾಯದ ಸಾಮಾಜಿಕ, ಪರಂಪರೆ ಹಾಗೂ ವೈಯಕ್ತಿಕ ಕಾನೂನಿಗೆ ವಿರುದ್ಧವಾಗಿರುತ್ತದೆ. ಸದರಿ ಕಾಯ್ದೆಯ ಸಮಿತಿಯಲ್ಲಿ ಮುಸ್ಲಿಂಮೇತರ ಸದಸ್ಯರನ್ನು ಸೇರಿಸಿರುವುದು ಇದು ಕಾನೂನು ಬಾಹಿರವಾಗಿದೆ. ಸಂವಿಧಾನದ 14, 25 ಮತ್ತು 26 ನೇ ವಿಧಿಗಳ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳ ಅಧಿಕಾರ ಸರ್ವೆ ಮಾಡುವ ವಿಧಾನ ಮುಂತಾದವುಗಳು ಮುಸ್ಲಿಂ ಸಮುದಾಯಕ್ಕೆ ಮಾರಕವಾಗುತ್ತದೆ ಕೂಡಲೇ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಹಿಂಪಡೆದು ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಸದಾಯೆ ಮಿಲ್ಲತ್ ಕಮಿಟಿ ಉಪಾಧ್ಯಕ್ಷರಾದ ಖಮ್ರುಲ್ ಇಸ್ಲಾಂ, ಮುಹಮ್ಮದ್ ಆರಿಫ್ ಸಗ್ರಿ, ಖಾಜಾ ಮೊಯಿನುದ್ದೀನ್, ವಹೀದ ಮೀಯಾ, ಮುಹಮ್ಮದ್ ಸಿರಾಜ್ ಕಂದಕೂರ, ಪರ್ವೇಜ್ ಪಟೇಲ್, ಮುಹಮ್ಮದ್ ಮಹೆಬೂಬ್, ಎಂ.ಡಿ.ಸಿರಾಜ್ ಮುಖದ್ದಮ್, ಎಂ.ಯಾಖುಬ್ ದರ್ಜಿ, ಎಂ.ಡಿ.ಮುಶರ್ರಫ್, ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News